ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ತಂದೆ ಹಾಗೂ ಮಗನಿಗೆ ವಿದ್ಯುತ್ ಮೃತ್ಯುವಾಗಿ ಕಾಡಿ ಅವರನ್ನು ಬಳಿ ಪಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಶಿವಮೊಗ್ಗದಲ್ಲಿ 23 ವರ್ಷಗಳ ಹಿಂದೆ ಲೈನ್ ಮ್ಯಾನ್ ಆಗಿ ರಫೀಕ್ ಎಂಬುವವರು ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಮಾಡುತ್ತಿದ್ದ ವೇಳೆ ರಫೀಕ್ ಅವರಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದರು. ಅವರ ಮರಣದನಂತರ ಅನುಕಂಪದ ಆಧಾರದ ಮೇಲೆ ರಫೀಕ್ ಪುತ್ರ ಶಫೀಕ್ ಗೆ ತಂದೆಯ ಕೆಲಸ ದೊರೆತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕುನ್ನಹಳ್ಳಿ ಎಂಬಲ್ಲಿ ವಿದ್ಯುತ್ ಕಂಬವನ್ನು ಏರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಶಫೀಕ್ ಕಂಬಂದಿಂದ ಬಿದ್ದಿದ್ದರು.
ಇದನ್ನೂ ಓದಿ : ಶೂ ಒಳಗೆ ಬೆಚ್ಚಗೆ ಕುಳಿತಿದ್ದ ನಾಗರಹಾವು
ಕೂಡಲೇ ಅವರನ್ನು ಮಂಗಳೂರಿನ KMC ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅವರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಹಿಂದೆ ಶಫೀಕ್ ರ ಚಿಕ್ಕಪ್ಪ ಸಹ ವಿದ್ಯುತ್ ತಗುಲಿ ದುರ್ಮರಣವನ್ನಪ್ಪಿದ್ದರು ಎನ್ನಲಾಗಿದೆ. ಒಟ್ಟಾರೆ ಒಂದೇ ಕುಟುಂಬದ ಮೂವರು ವಿದ್ಯುತ್ ಅವಘಡದಿಂದ ಬಲಿಯಾಗಿರುವುದು ಕುಟುಂಬಸ್ಥರಲ್ಲಿ ಹಾಗೂ ಸ್ಥಳೀಯರಲ್ಲಿ ಅತೀವವಾದ ನೋವನ್ನು ಉಂಟುಮಾಡಿದೆ.
ಸಾವಿರಾರು ಸಂಖ್ಯೆಯಲ್ಲಿ ಸೌಹಾರ್ದತೆಯಿಂದ ಅಂತಿಮ ದರ್ಶನ ಪಡೆದ ಜನತೆ :
ಶಫೀಕ್ ಮೃತದೇಹವನ್ನು ಬುಧವಾರ ಸಂಜೆ ಮೂಡಿಗೆರೆಯ ಅಡ್ಯಂತಾಯ ರಂಗಮಂದಿರಕ್ಕೆ ತಂದಾಗ ಸುಮಾರು 3 ಸಾವಿರ ಜನ ಸೇರಿದ್ದು, ಶಾಂತಿ ಹಾಗೂ ಸೌಹಾರ್ದತೆಯಿಂದ ಜನರು ಅಂತಿಮ ದರ್ಶನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಎಂ.ಕೆ.ಪ್ರಾಣೇಶ್. ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ಎಸ್ ಅನಂತ್, ಮುಖಂಡರಾದ ಬಿ.ಎನ್ ಜಯಂತ್, ದುಂಡುಗ ಪ್ರಮೋದ್, ಕೆ. ವೆಂಕಟೇಶ್. ಸಿ.ಕೆ ಇಬ್ರಾಹಿಂ ಸೇರಿದಂತೆ ಕಾಂಗ್ರೆಸ್.ಜೆಡಿಎಸ್,ಬಿಜೆಪಿ,ಬಿಎಸ್ಪಿ, ಸಿಪಿಐ,ಮುಸ್ಲಿಂ ಸಂಘಟನೆಗಳು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳು ಸೇರಿದಂತೆ ಸರ್ವ ಧರ್ಮಿಯರು ಅಂತಿಮ ದರ್ಶನ ಪಡೆದು ಶಫೀಕ್ ಹುಟ್ಟೂರಾದ ಭದ್ರಾವತಿಗೆ ಕಣ್ಣೀರಿನೊಂದಿಗೆ ಬೀಳ್ಕೊಟ್ಟರು.
ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಕೋಮುಗಳ ನಡುವಿನ ಪರಿಸ್ಥಿತಿಯಿದ್ದು ಇದನ್ನೂ ಮೀರಿ ಸರ್ವಧರ್ಮ ಸಮನ್ವಯದಂತೆ ಮೂಡಿಗೆರೆಯ ಜನರು ಸೌಹಾರ್ದತೆ ಮೆರೆದಿದ್ದಾರೆ.



.jpeg)

0 Comments