ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯ ಮೊದಲ ಪತಿಯನ್ನು ಹತ್ಯೆ ಮಾಡಿ ಆಕೆಯೊಂದಿಗೆ ಜೀವಿಸಲು ಮಹಿಳೆಯ ಎರಡನೇ ಪತಿ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮೋಹನ್ ರಾಮ್ ಎಂಬ ವ್ಯಕ್ತಿ 5 ವರ್ಷಗಳ ಹಿಂದೆ ರಾಜಸ್ಥಾನದ ಮಂಜುಳಾ ಅವರನ್ನು ಜೋದಪುರದಲ್ಲಿ ಪ್ರೀತಿಸಿ ಮದುವೆಯಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿಗೆ ಕರೆದುಕೊಂಡು ಬಂದಿದ್ದರು. ಕಡೂರಿನಲ್ಲಿ ಇಬ್ಬರ ಜೀವನ ನಡೆಯುತ್ತಿದ್ದು ಈ ಮಧ್ಯೆ ಎರಡು ತಿಂಗಳ ಹಿಂದೆ ತವರಿಗೆ ಹೋಗಿದ್ದ ಮಂಜುಳಾ ಪತಿಯೊಂದಿಗೆ ಕಡೂರಿಗೆ ಬರಲು ಒಪ್ಪಿರಲಿಲ್ಲ. ಇದರಿಂದ ಬೇಸತ್ತ ಮೋಹನ್ ರಾಮ್ ಸುಮ್ಮನಾಗಿದ್ದರು ಎನ್ನಲಾಗಿದ್ದು ಈ ನಂತರದಲ್ಲಿ ಮೊದಲ ಪತಿ ಮೋಹನ್ ರಾಮ್ ಅವರನ್ನು ಹತ್ಯೆ ಮಾಡಲು ಎರಡನೇ ಪತಿ ಓಂ ಪ್ರಕಾಶ್ ಯತ್ನಿಸಿದ್ದಾನೆ. 

ಇದನ್ನೂ ಓದಿ : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಮಾಂಗಲ್ಯ ಸರ ಎಗರಿಸಿದ ಕಳ್ಳ 


ಹತ್ಯೆಗೆ ಯತ್ನಿಸಿದ ಎರಡನೇ ಪತಿ ಮತ್ತು ಆತನ ಸಹಚರರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ಸಿಪಿಸಿ ಕಾಲೋನಿಯ ದಿನಸಿ ವ್ಯಾಪಾರಿ ಮೋಹನ್ ರಾಮ್ ಎಂಬಾತನನ್ನು ಅಪಹರಿಸಿದ್ದ ಬೆಂಗಳೂರಿನ ಓಂಪ್ರಕಾಶ್ ಮತ್ತು ಆತನ ಸಹಚರರಾದ ಶೈಲೇಂದ್ರ, ಪ್ರದೀಪ, ದಲ್ಲಾರಾಮ್, ಜಿತೇಂದ್ರ, ಶಂಕರ ಪಾಟೀಲ, ದಿನೇಶ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಇತ್ತೀಚೆಗೆ ಮಂಜುಳಾ ಹರಿಯಾಣದ ಓಂ ಪ್ರಕಾಶ್ ನನ್ನು ಮದುವೆಯಾಗಿರುವುದು ಗೊತ್ತಾಗಿ ಮೋಹನ್ ರಾಮ್ ಮಂಜುಳಾಗೆ ಕರೆ ಮಾಡಿ ಈ ಕುರಿತು ಮಾತನಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಓಂ ಪ್ರಕಾಶ್ ತನ್ನ ಸಹಚರರೊಂದಿಗೆ ಆಗಸ್ಟ್ 28 ರಂದು ಕಡೂರಿಗೆ ಬಂದು ಕಾರಿನಲ್ಲಿ ರಾತ್ರಿ ಮೋಹನ್ ರಾಮ್ ನನ್ನು ಅಪಹರಿಸಿ ಕಾರಿನಲ್ಲಿಯೇ ಕೊಲೆ ಮಾಡಲು ಯತ್ನಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಕಾರ್ ಚೇಸ್ ಮಾಡಿಕೊಂಡು ಹೋಗುವಾಗ ಮತಿಘಟ್ಟ ಸಮೀಪ ಕಾರ್ ಕೆಟ್ಟು ನಿಂತಿದೆ. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿ ಮೋಹನ್ ರಾಮನನ್ನು ರಕ್ಷಿಸಿದ್ದಾರೆ. ಘಟನಾ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.


ಮಹಿಳೆಯ ಚಿನ್ನಾಭರಣ ದೋಚಿದ್ದ ಕಳ್ಳನಿಗೆ ನ್ಯಾಯಾಧೀಶರಿಂದ ಶಿಕ್ಷೆ ಪ್ರಕಟ : 

ಮನೆಯ ಹಿಂಭಾಗದಲ್ಲಿ ಮಹಿಳೆ ಪಾತ್ರೆ ತೊಳೆಯುವ ವೇಳೆಯಲ್ಲಿ ಹಿಂಬದಿಯಿಂದ ಬಂದು ಮಹಿಳೆಯ ಚಿನ್ನಾಭರಣಗಳನ್ನು ದೋಚಿದ್ದ ಖದೀಮನಿಗೆ ಜೈಲು ಶಿಕ್ಷೆ ಪ್ರಕಟಮಾಡಿ ನ್ಯಾಯಾಲಯ ಆದೇಶಿಸಿದೆ.

2019 ರ ಫೆಬ್ರವರಿ 10 ರಂದು ಸಂಜೆಯ ವೇಳೆಗೆ ಭದ್ರಾವತಿ ಪೇಪರ್‌ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬಾಳೆ ಮಾರನಹಳ್ಳಿ ಗ್ರಾಮದ ಮಹಿಳೆ ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿರುವಾಗ ತಿಮ್ಲಾಪುರ ಗ್ರಾಮದ ವಾಸಿ ರುದ್ರನಾಯ್ಕ ರವರ ಮಗನಾದ ಜಯ  ಸುನಿಲ್‌ ಎಂಬ ವ್ಯಕ್ತಿಯು ಹಿಂದಿನಿಂದ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಬೆಳ್ಳಿಯ ಕರಡಿಗೆಯನ್ನು ಕಿತ್ತುಕೊಂಡು ಮಹಿಳೆಯನ್ನು ತಳ್ಳಿ ಬೀಳಿಸಿ ಓಡಿ ಹೋಗಿದ್ದ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಪ್ರಕ್ರಿಯೆಗೆ ಅನುವು ಮಾಡಿದ್ದರು. 


ಆಗಿನ ತನಿಖಾಧಿಕಾರಿಗಳಾಗಿದ್ದ ಯೋಗೇಶ ಕೆ ಎಂ, ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತಇವರು ಪ್ರಕರಣದ ತನಿಖೆಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. 

ಈ ಪ್ರಕರಣದ ಕುರಿತಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ರತ್ನಮ್ಮರವರು ವಾದ ಮಂಡಿಸಿದ್ದು,  ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀ ಶಶಿಧರ್ ರವರು 29-08-2022 ರಂದು ಆರೋಪಿತನಾದ ಜಯಾ ನಾಯ್ಕ ಅಲಿಯಾಸ್ ಸುನಿಲ್‌ ಬಿನ್‌ ರುದ್ರಾನಾಯ್ಕ ತಿಮ್ಲಾಫುರ ತಾಂಡಾ  ಭದ್ರಾವತಿ ತಾಲ್ಲೂಕು. ಈತನ ವಿರುದ್ಧ ಕಲಂ 397 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತನಿಗೆ 07 ವರ್ಷ ಕಠಿಣ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ.