ಚಿಕ್ಕಮಗಳೂರು :
ಮೊಟ್ಟೆ ಕೊಟ್ಟು ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರು :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ನಡೆಸಿದ ಕಪ್ಪು ಪಟ್ಟಿ ಪ್ರದರ್ಶನ ಹಾಗೂ ಪ್ರತಿಭಟನೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಪ್ರದರ್ಶಿಸುವ ಮೂಲಕ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ನಗರದ ತಾಲೂಕು ಕಚೇರಿಯಿಂದ ಬಿಜೆಪಿ ನಾಯಕರು ಹಾಗೂ ಸಂಘಪರಿವಾರದವರ ವಿರುದ್ದ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಸಾಗಿ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ರಸ್ತೆ ತಡೆ ವೇಳೆಯಲ್ಲಿ ಮೊಟ್ಟೆ ಪ್ರದರ್ಶನ ಮಾಡಿ ಬಿಜೆಪಿ, ಹಿಂದೂಪರ ಸಂಘಟನೆಗಳ ವಿರುದ್ದ ಆಕ್ರೋಶ ಹೊರಹಾಕಿದರು. ಪ್ರತಿಭಟನೆ ನಡೆಸಿದ ಬಳಿಕ ಕಾಂಗ್ರೇಸ್ ಕಾರ್ಯಕರ್ತರು ನಗರದ ರಾಮನಹಳ್ಳಿಯಲ್ಲಿ ಇರುವ ಸರ್ಕಾರಿ ಶಾಲೆಗೆ ತೆರಳಿ ಸರ್ಕಾರಿ ಶಾಲೆಗೆ ಮೊಟ್ಟೆ ವಿತರಿಸಿ ವಿನೂತನ ಪ್ರತಿಭಟನೆ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಸತತ ಅತೀವೃಷ್ಟಿಯಿಂದ ಸಮಸ್ಯೆಯ ಧ್ವನಿಯಾಗಿ ನಿಲ್ಲಬೇಕಾಕಿದ್ದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪೂಜಾ ವಿಧಾನದಲ್ಲಿ ಬದಲಾವಣೆ ಮಾಡದೆ ಯಥಾ ಸ್ಥಿತಿಕಾಪಾಡುವಂತೆ ಹೈಕೋರ್ಟ್ ಆದೇಶ :
ಚಿಕ್ಕಮಗಳೂರಿನ ವಿವಾದಿತ ಹಾಗೂ ಧಾರ್ಮಿಕ ಕ್ಷೇತ್ರವಾದ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಸೆ.5 ರವರೆಗೆ ಯಥಾಸ್ಥಿತಿ ಕಾಪಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ. ಪೂಜಾ ಪದ್ಧತಿ ಕುರಿತಾಗಿ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ವಾದಗಳನ್ನು ಆಲಿಸಿತು. ಈ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ಕೆ.ನಾವದಗಿ, ಈ ಸಂಬಂಧ ಸರ್ಕಾರವು ಜುಲೈ 19 ರಂದು ಸಂಪುಟದ ಉಪಸಮಿತಿ ಶಿಫಾರಸಿನಂತೆ ಕ್ರಮ ಕೈಗೊಂಡಿದೆ. ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿ ನಡೆಸಲು ಮುಜಾವರ್ ಹಾಗೂ ಅರ್ಚಕರಿಗೆ ಅವಕಾಶ ನೀಡಲಾಗಿದೆ ಎಂದರು. ಸಚಿವ ಸಂಪುಟದ ನಿರ್ಧಾರ ಮತ್ತು ನಡಾವಳಿಗಳನ್ನು ಹೈಕೋರ್ಟ್ಗೆ ಸಲ್ಲಿಸಲಾಯಿತು. ವಾದ ಆಲಿಸಿದ ನಂತರ ಹೈಕೋರ್ಟ್ ಯಥಾಸ್ಥಿತಿ ಮುಂದುವರಿಸಲು ಸೂಚಿಸಿತು. ಸರ್ಕಾರದ ಕೈಗೊಂಡಿರುವ ನಿರ್ಧಾರದ ಪ್ರತಿಯನ್ನು ಅರ್ಜಿದಾರರಿಗೂ ನೀಡಬೇಕು ಎಂಬುದಾಗಿ ಸೂಚಿಸಿ, ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 5 ಕ್ಕೆ ಮುಂದೂಡಿತು.
ಕೆರೆಕಟ್ಟೆ ಮಾರ್ಗದಲ್ಲಿ ಲಾರಿ ಹಾಗೂ ಕಾರ್ ನ ನಡುವೆ ರಸ್ತೆ ಅಪಘಾತ :
ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಕಳಸವನ್ನು ಹಾಗೂ ವಿವಿಧ ಪ್ರವಾಸಿತಾಣಗಳನ್ನು ಸಂಪರ್ಕಿಸುವ ರಾಷ್ಟ್ರೀಯಹೆದ್ದಾರಿ 169 ರ ಕೆರೆಕಟ್ಟೆಯ ಮೀನತ್ ಹಳ್ಳದ ಬಳಿಯಲ್ಲಿ ಶೃಂಗೇರಿಯಿಂದ ಕಾರ್ಕಳಕ್ಕೆ ತೆರಳುತ್ತಿದ್ದ ಲಾರಿ ಹಾಗೂ ಮಂಗಳೂರಿನಿಂದ ಶೃಂಗೇರಿ ದೇವಾಲಯಕ್ಕೆಂದು ಬರುತ್ತಿದ್ದ ಪ್ರವಾಸಿಗರ ಕಾರಿನ ನಡುವೆ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ. ಅದೃಷ್ಟವಶಾತ್ ಎಂಬಂತೆ ಎರಡೂ ವಾಹನಗಳಲ್ಲಿದ್ದವರು ಪ್ರಾಣಾಪಾಯಗಳಿಂದ ಪಾರಾಗಿದ್ದು, ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ನಿಯಂತ್ರಣ ಕಳೆದುಕೊಂಡ ಕಾರ್ ಸಂಪೂರ್ಣವಾಗಿ ರಸ್ತೆ ಪ್ರದೇಶದಿಂದ ಬದಿಗೆ ಸರಿದಿದ್ದು, ಲಾರಿಯೂ ಕೂಡ ರಸ್ತೆಯ ಪಕ್ಕದಲ್ಲಿ ನಿಂತಿದೆ.
ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿಪಡಿಸುವಂತೆ NSUI ಮನವಿ :
ಕುವೆಂಪು ವಿಶ್ವವಿದ್ಯಾನಿಲಯ ನೂತನವಾಗಿ ಬಿಡುಗಡೆ ಮಾಡಿರುವ ಶೈಕ್ಷಣಿಕ ವೇಳಾಪಟ್ಟಿಯನ್ನು ವಿರೋಧಿಸಿ ಹಾಗೂ ಬಿಡುಗಡೆಗೊಳಿಸಿರುವ ವೇಳಾಪಟ್ಟಿಯನ್ನು ಹಿಂಪಡೆದು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು NSUI ವಿದ್ಯಾರ್ಥಿಗಳು ಶೃಂಗೇರಿ ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಿದರು.ವೇಳಾಪಟ್ಟಿಯಿಂದ ವಿದ್ಯಾರ್ಥಿಗಳಿಗೆ ಉಂಟಾಗಿರುವ ಸಮಸ್ಯೆ ಹಾಗೂ ಹೆಚ್ಚಳಗೊಂಡಿರುವ ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ವೇಳಾಪಟ್ಟಿಯನ್ನು ರಚಿಸಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ :
ಪಾಲಿಕೆಯಲ್ಲಿ ವೀರ ಸಾವರ್ಕರ್ ಫೋಟೋ
ಕೆಲ ದಿನಗಳ ಹಿಂದೆ ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಭಾರೀ ಗಲಾಟೆಯಾಗಿ ಅವಾಂತರಗಳಿಗೆ ಕಾರಣವಾಗಿತ್ತು. ಸದ್ಯ ಈಗ ಶಿವಮೊಗ್ಗ ಪಾಲಿಕೆಯಲ್ಲಿ ವಿ.ಡಿ.ಸಾವರ್ಕರ್ ಫೋಟೋ ಪ್ರತ್ಯಕ್ಷವಾಗಿದೆ. ಆಡಳಿತ ಪಕ್ಷದ ನಾಯಕರ ಕಚೇರಿಯಲ್ಲಿ ಸಾವರ್ಕರ್ ಫೋಟೋ ಅಳವಡಿಸಿ ಚನ್ನಬಸಪ್ಪರಿಂದ ಪುಷ್ಪನಮನ ಸಲ್ಲಿಸಲಾಗಿದೆ. ಇದಕ್ಕೆ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಸಾಥ್ ನೀಡಿದ್ದಾರೆ. ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಗಲಾಟೆಯಾಗಿತ್ತು. ಆ ದಿನ ಸಾವರ್ಕರ್ ಫ್ಲೆಕ್ಸ್ ಪರವಾಗಿ ಜಿಲ್ಲಾ ಬಿಜೆಪಿ ಮುಖಂಡ ಚನ್ನಬಸಪ್ಪ ಪ್ರತಿಭಟನೆ ನಡೆಸಿದ್ದರು. ಈಗ ಮುಂದುವರಿದ ಭಾಗವಾಗಿ ಕಚೇರಿಯಲ್ಲಿ ಫೋಟೋ ಹಾಕುವ ಮೂಲಕ ವಿರೋಧಿಸಿದವರಿಗೆ ತಿರುಗೇಟು ಕೊಟ್ಟಿದ್ದಾರೆ.
ಹಾಸನ:
ಪಿಸ್ತೂಲ್ ಹಿಡಿದುಕೊಂಡು ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ದುಷ್ಕರ್ಮಿಗಳು :
ಹಾಸನ ಪಟ್ಟಣದ ಬಿಜೆಪಿ ಮುಖಂಡರೋರ್ವರ ಮನೆಗೆ ಹಾಡಹಗಲೇ ದುಷ್ಕರ್ಮಿಗಳು ನುಗ್ಗಿ ದರೋಡೆ ಯತ್ನಿಸಿದ ಘಟನೆ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್ ಹಿಡಿದುಕೊಂಡು ಕೆ.ಆರ್.ಪುರಂನ ಬಿಜೆಪಿ ನಾಯಕರಾದ ಡಿ.ಪಿ.ಪ್ರಕಾಶ್ ಎಂಬುವರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದಾರೆ. ಸೋಮವಾರ ಮದ್ಯಾಹ್ನ ಪ್ರಕಾಶ್ ಮನೆಗೆ ಬಂದ ಇಬ್ಬರು ದುಷ್ಕರ್ಮಿಗಳು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆ ವೇಳೆ ಮನೆಯಲ್ಲಿ ಪ್ರಕಾಶ್ ತಾಯಿ ರಂಗಮ್ಮ ಅವರು ಮಾತ್ರ ಇದ್ದು ಬಾಗಿಲು ತೆರೆದಿದ್ದಾರೆ ಈ ವೇಳೆ ಇದು ಪ್ರಕಾಶ್ ಅವರ ಮನೆಯೆ ಎಂದು ಪ್ರಶ್ನಿಸಿದ್ದಾರೆ. ಅವರ ಹೆಸರಿಗೆ ಒಂದು ಪಾರ್ಸೆಲ್ ಇದೆ ಎಂದು ರಂಗಮ್ಮ ಅವರ ಕೈಗೆ ಪಾರ್ಸೆಲ್ ಕವರ್ ಒಂದನ್ನು ನೀಡಿದ್ದಾರೆ. ವೃದ್ಧೆ ರಂಗಮ್ಮ ಕವರ್ ಪಡೆದು ಮನೆಯೊಳಗೆ ಇಡುತ್ತಿದ್ದಂತೆ ಓರ್ವ ಕಿರಾತಕ ವೃದ್ದೆಯ ಕುತ್ತಿಗೆ ಹಿಡಿದು ಹಣೆಗೆ ಪಿಸ್ತೂಲ್ ಇಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ರಂಗಮ್ಮ ಜೋರಾಗಿ ಕಿರುಚಿಕೊಂಡಿದ್ದಾರೆ. ಯಾರಾದರೂ ಬರುತ್ತಾರೆಂದು ಗಾಬರಿಗೊಂಡ ದುಷ್ಕರ್ಮಿಗಳು ತಕ್ಷಣವೇ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.


0 Comments