ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ವರುಣ ಅನೇಕ ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಸುರಿಯುತ್ತಿರುವ ಭಾರೀ ಮಳೆಗೆ ನಲುಗಿರುವ ಅನೇಕರು ತಮ್ಮ ಆಶ್ರಯ, ರಸ್ತೆ ಸಂಪರ್ಕ ಸೇರಿದಂತೆ ಮೊದಲಾದ ಸೌಕರ್ಯಗಳನ್ನು ಕಳೆದುಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಸಮೀಪ ಭಾರೀ ಭೂ ಕುಸಿತ ಸಂಭವಿಸಿದ್ದು ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಸಂಭವಿಸಿದ. ಭೂ ಕುಸಿತದಿಂದ ಬಡ ವರ್ಗದ ರೈತನ ಕುಟುಂಬ ದಿಕ್ಕುತೋಚದೇ ಕಂಗಾಲಾಗಿದೆ.
ಇದನ್ನೂ ಓದಿ : ಕೊಡಗಿನಲ್ಲಿ ನಿಲ್ಲದ ರಣ ಮಳೆ ; ಭಾರೀ ಪ್ರಮಾಣದ ಭೂಕುಸಿತಕ್ಕೆ ಕಿ.ಮೀ ಗಟ್ಟಲೆ ದೂರ ಕೊಚ್ಚಿ ಬಂದ ಬೆಟ್ಟ
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಸಮೀಪದಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿದೆ. ಉದಯ್-ವನಿತಾ ಎಂಬುವರಿಗೆ ಸೇರಿದ ಮನೆ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣಿನ ರಾಶಿ ಬಿದ್ದಿದೆ. ಬಂಡೆ, ಮರಗಳ ಸಹಿತ ಮನೆ ಮೇಲೆ ಮಣ್ಣು ಜಾರಿ ಬಂದಿದೆ.
ಕೂಲಿ ಮಾಡಿ, ಸಾಲ ಮಾಡಿ ಕಟ್ಟಿದ ಮನೆಯೂ ಇಲ್ಲದಾಗಿದೆ. ಮಕ್ಕಳು ಮನೆ ಮುಂಭಾಗ ಓದುತ್ತಿರುವಾಗ ಏಕಾಏಕಿ ಭೂ ಕುಸಿತ ಸಂಭವಿಸಿದೆ ಮನೆಯಿಂದ ಹೊರಗೆ ಓಡಿಬಂದು ನಾವು ಜೀವ ಉಳಿಸಿಕೊಂಡಿದ್ದೇವೆ ಎಂಬುದಾಗಿ ಮನೆಯವರು ತಿಳಿಸಿದ್ದು, ಮಳೆಯು ಧಾರಾಕಾರವಾಗಿ ಸುರಿಯುತ್ತಲೇ ಇರುವುದರಿಂದ ಧರೆ ಹಂತ ಹಂತವಾಗಿ ಕುಸಿಯುವ ಭೀತಿಯಿದೆ. ಮನೆ ಮೇಲೆ ಮಣ್ಣು ಬಿದ್ದಿರುವ ಪರಿಣಾಮ ಹಾಗೂ ಅಪಾಯ ಇರುವುದರಿಂದ ಬೇರೆಯವರ ಮನೆಯಲ್ಲಿ ಕುಟುಂಬದವರು ಆಶ್ರಯ ಪಡೆದಿದ್ದು ಸಮರ್ಪಕವಾದ ವ್ಯವಸ್ಥೆಯನ್ನು ಕೋರಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಕುಟುಂಬಕ್ಕೆ ಸರ್ಕಾರದ ವತಿಯಿಂದ ಆದಷ್ಟು ಶೀಘ್ರವಾಗಿ ಪರಿಹಾರ ಕಲ್ಪಿಸಬೇಕಿದೆ. ಘಟನಾ ಸ್ಥಳಕ್ಕೆ ಪಂಚಾಯತ್ ಪಿಡಿಓ ಹಾಗೂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.


.jpeg)

0 Comments