ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಮಲಗಿದ್ದ ದನಗಳ ಮೇಲೆ ಅಪರಿಚಿತ ಎರಡು ವಾಹನಗಳು ಹರಿದ ಪರಿಣಾಮ ಹಸುಗಳು ದುರ್ಮರಣವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಅತ್ತಿಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿದ್ದ ಬಿಡಾಡಿ ದನಗಳ ಮೇಲೆ ವಾಹನ ಚಲಿಸಿ ಮೂಕ ಜೀವಿಗಳ ಪ್ರಾಣವನ್ನು ಬಲಿ ಪಡೆದುಕೊಂಡಿದೆ.
ಇದನ್ನೂ ಓದಿ : ಶೃಂಗೇರಿ : ಅಪಘಾತಕ್ಕೀಡಾಗಿ ಅಳಿವಿನಂಚಿನ ಅಪರೂಪದ ಹುಲಿ ಬೆಕ್ಕು ಸಾವು
ಮೃತಪಟ್ಟ ಎರಡು ಹಸುಗಳ ಪೈಕಿ ಒಂದು ಹಸುವು ಗರ್ಭಿಣಿಯಾಗಿದ್ದು ವಾಹನ ಹರಿದ ರಭಸಕ್ಕೆ ಅದರ ಹೊಟ್ಟೆಯೊಳಗಿದ್ದ ಕರು ಹೊರಬಂದಿದ್ದು, ಈ ದೃಶ್ಯಗಳು ಹೃದಯ ವಿದ್ರಾವಕವಾಗಿತ್ತು. ಮಾನವೀಯತೆ ಇಲ್ಲದೆ ಅಮಾನವೀಯವಾಗಿ ಎರಡು ಹಸುಗಳನ್ನು ಅಪರಿಚಿತ ವಾಹನದ ಚಾಲಕರು ಬಲಿ ಪಡೆದಿದ್ದಾರೆ.
ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಘಟನಾ ಸಂಬಂಧ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ರಾತ್ರಿಯ ವೇಳೆ ಸಂಚಾರ ನಡೆಸುವ ವಾಹನಗಳ ಸವಾರರು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಆಸ್ಪದ ನೀಡದೆ ಜಾಗರೂಕತೆಯಿಂದ ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ವಾಹನಗಳ ಚಾಲನೆ ನಡೆಸಬೇಕಿದೆ ಎಂದು ಸ್ಥಳೀಯರು ಕೋರಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು


.jpeg)


0 Comments