ಮೂಡಿಗೆರೆ : ಮಲೆನಾಡು ಭಾಗದ ಜನರು ಒಂದೆಡೆ ರಣ ಮಳೆಗೆ ನಲುಗಿದ್ದರೆ ಇನ್ನೊಂದೆಡೆ ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯಿಂದ ಸಂಪೂರ್ಣ ಕಂಗಾಲಾಗಿದ್ದಾರೆ. ಜೀವನಧಾರವಾಗಿ ಬೆಳೆಯುವ ಬೆಳೆಗಳಿಗೆ ಒಂದೆಡೆ ಮಾರಕ ರೋಗಗಳು ಭಾದಿಸುತ್ತಿದ್ದರೆ ಇನ್ನೊಂದಡೆ ಫಸಲು ಕೈಸೇರುವ ಸಮಯದಲ್ಲಿ ಆನೆಗಳು ದಾಳಿ ನಡೆಸಿ ರೈತನ ಶ್ರಮವನ್ನು ವ್ಯರ್ಥಗೊಳಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರ ಮನೆಯಲ್ಲಿ ಹಿಂಡಾಗಿ ಆನೆಗಳು ದಾಳಿ ನಡೆಸಲು ಆರಂಭಿಸಿದೆ. ಗುಂಪಿನಲ್ಲಿ ಪ್ರತ್ಯಕ್ಷವಾಗಿರುವ ಕಾಡಾನೆಗಳು ಒಮಿನಿ ಕಾರೊಂದನ್ನು ಪಲ್ಟಿ ಮಾಡಿದೆ. ಅದೃಷ್ಟವಶಾತ್ ಎಂಬಂತೆ ಕಾರಿನಲ್ಲಿದ್ದವರು ಪ್ರಾಣಪಾಯಗಳಿಂದ ಬಚಾವಾಗಿದ್ದು ಸಣ್ಣ ಪುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ. ಆನೆಗಳು ರಾಜಾರೋಷವಾಗಿ ಕಾಫಿ, ಅಡಿಕೆ ತೋಟಗಳಲ್ಲಿ ಓಡಾಡುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಕೃಷಿಯನ್ನು ಜೀವನಾಧಾರವಾಗಿಟ್ಟುಕೊಂಡು ಸದಾ ಹೊಲ ಗದ್ದೆಗಳಲ್ಲಿ ಶ್ರಮಿಸುವ ಮೂಡಿಗೆರೆ ಭಾಗದ ಹಾಂದಿ, ಕೋಗಿಲೆ, ವಿಜಯನಗರ, ದೇವರಮನೆ, ಹೊಸಪೇಟೆ ಭಾಗದ ತೋಟಗಳಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗುವ ಕೃಷಿಕರು ಆತಂಕದಲ್ಲಿ ಕೆಲಸ ಮಾಡುವ ಸ್ಥಿತಿ ಎದುರಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕುರಿತಾಗಿ ಸೂಕ್ತ ಕ್ರಮಗಳನ್ನು ಕೈಗೊಂಡು ಆನೆದಾಳಿಯಿಂದ ಬೆಳೆಹಾನಿ ಹಾಗೂ ಪ್ರಾಣಾಪಾಯಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು






0 Comments