ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅತಿವೃಷ್ಟಿಯಿಂದ ಸಂಭವಿಸಿದ ಹಾನಿ ಕುರಿತಾಗಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಯಿತು.

ಇದನ್ನೂ ಓದಿ: ವ್ಯಕ್ತಿ ನಾಪತ್ತೆ ; ಸುಳಿವು ದೊರೆತಲ್ಲಿ ತಿಳಿಸುವಂತೆ ಮನವಿ

ಈ ಸಭೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ ರಾಜೇಗೌಡ ಅವರು ಭಾಗವಹಿಸಿ ಕ್ಷೇತ್ರದಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಹಾನಿಗಳ ಬಗ್ಗೆ ಪ್ರಸ್ತಾಪಿಸಿ ಭಾರಿ ಪ್ರಮಾಣದಲ್ಲಿ ಹಾನಿಗೀಡಾಗಿರುವ ರಸ್ತೆ ಹಾಗೂ ಸೇತುವೆಗಳ ಅಭಿವೃದ್ಧಿ ಗೊಳಿಸಿಕೊಡುವಂತೆ ಮತ್ತು ಹಾನಿಯಾದ ಮನೆಗಳಿಗೆ ತುರ್ತಾಗಿ ಪರಿಹಾರ ನೀಡುವ ಕುರಿತಾಗಿ ಮನವಿ ಮಾಡಿದರು. 


ಪ್ರಮುಖವಾಗಿ ಸಂಪರ್ಕ ಕಡಿತಗೊಂಡ ಕೊಪ್ಪ ತಾಲ್ಲೂಕು ಹೆಗ್ಗಾರ್ ಕೊಡಿಗೆ ರಸ್ತೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಹಾಗೂ ಶೃಂಗೇರಿ ನೆರಳಕೊಡಿಗೆ ರಸ್ತೆ ಕಾಮಗಾರಿಯನ್ನು ತುರ್ತಾಗಿ ಕೈಗೊಂಡು ಪೂರ್ಣಗೊಳಿಸಲು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತಾಗಿ ಪ್ರತಿಕ್ರಯಿಸಿದ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿ ಈ ಬಗ್ಗೆ ಕ್ರಮವಹಿಸುವಂತೆ ಸೂಚನೆ ನೀಡಿದರು ಹಾಗೂ ಹಾನಿಯಾದ ಮನೆಗಳಿಗೆ 10 ದಿನದೊಳಗೆ ಪರಿಹಾರ ನೀಡುವ ಭರವಸೆ ನೀಡಿದರು.

ಈ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಕೆಎನ್ ರಮೇಶ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇಗೌಡ, ಚಿಕ್ಕಮಗಳೂರು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಪಂಚಾಯತ್ ಸಿಇಓ ಜಿ. ಪ್ರಭು, ಅಪರ ಜಿಲ್ಲಾಧಿಕಾರಿಗಳಾದ ಬಿ.ಆರ್ ರೂಪ, ಶಾಸಕರಾದ ಬೆಳ್ಳಿ ಪ್ರಕಾಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.