ಚಿಕ್ಕಮಗಳೂರು :
ಅತಿವೃಷ್ಟಿಯಾಗುತ್ತಿರುವ ಮೂಡಿಗೆರೆಗೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದ ಶೋಭಾ ಕರಂದ್ಲಾಜೆ :
ಮನೆ ಮೇಲೆ ಮರ ಬಿದ್ದು ಮೃತಪಟ್ಟ ಇಬ್ಬರು ಮಹಿಳೆಯರ ಮನೆಗೆ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಮೂಡಿಗೆರೆಯ ಕೆ.ತಲಗೂರು ಗ್ರಾಮಕ್ಕೆ ಭೇಟಿ ನೀಡಿದ ಸಚಿವೆ ಸ್ಥಳ ಪರಿಶೀಲನೆ ನಡೆಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮನೆ ಮೇಲೆ ಬೀಳುವ ಮರಗಳನ್ನ ಕಡಿಯುವಂತೆ ಸೂಚಿಸಲಾಗಿತ್ತು, ಅರಣ್ಯ ಅಧಿಕಾರಿಗಳು ಕಡಿಯಬೇಕು ಅಥವ ಸ್ಥಳಿಯರಿಗೆ ಕಡಿಯಲು ಅವಕಾಶ ನೀಡಬೇಕು ಎಂದು ಸೂಚಿಸಲಾಗಿತ್ತು, ಆದರೆ ಇಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು ಘಟನೆಯ ಕುರಿತು ಮಾಹಿತಿ ಕಲೆಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಶಾಸಕ ಎಂಪಿ ಕುಮಾರಸ್ವಾಮಿ ಇದ್ದರು.
ದತ್ತಾತ್ರೇಯ ಪೀಠದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ಭಜರಂಗಿಗಳು :
ಧಾರ್ಮಿಕ ಕ್ಷೇತ್ರವಾದ ದತ್ತಾತ್ರೇಯ ಪೀಠದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಜರಂಗದಳದ ಕಾರ್ಯಕರ್ತರು ತ್ರಿವರ್ಣ ಧ್ವಜವನ್ನು ಹಾರಿಸಿದರು. ಹುಣ್ಣಿಮೆಯ ಅಂಗವಾಗಿ ಇಂದು ಶೃಂಗೇರಿ ತಾಲೂಕಿನ ಬಜರಂಗದಳದ ಕಾರ್ಯಕರ್ತರು ದತ್ತ ಪಾದುಕೆಯ ಪೂಜೆಗೆ ತೆರಳಿದ್ದರು. ಈ ವೇಳೆ ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗುತ್ತಾ ದತ್ತಪೀಠದ ಆವರಣದಲ್ಲಿ ಪ್ರಥಮ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿ ಅಲ್ಲಿಯೇ ಧ್ವಜಕ್ಕೆ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನದ ಆಚರಣೆಯನ್ನು ಸಹ ನಡೆಸಿದರು. ಈ ವೇಳೆ ಬಜರಂಗದಳದ ದಕ್ಷಿಣಪ್ರಾಂತ ಸಂಯೋಜಕರಾದ ರಘು ಸಕಲೇಶಪುರ, ಮುಖಂಡರಾದ ಹರೀಶ್ ವಿ ಶೆಟ್ಟಿ, ಶ್ಯಾಮ್ ವಿ ಗೌಡ, ರವಿಸಂಜಯ್ ಪೂಜಾರಿ ಸೇರಿದಂತೆ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ರಸ್ತೆ ದುರಸ್ತಿಗಾಗಿ ಶಾಸಕರ ವಿರುದ್ಧ ಪ್ರತಿಭಟನೆ :
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗೂರು, ಕೊಗ್ರೆ, ಹೊರನಾಡನ್ನು ಸಂಪರ್ಕಿಸುವ ಹೆಗ್ಗಾರುಕುಡಿಗೆ ರಸ್ತೆ ಬಳಿ ಸಂಭವಿಸಿರುವ ಭಾರೀ ಪ್ರಮಾಣದ ಭೂ ಕುಸಿತಕ್ಕೆ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಹೆಗ್ಗಾರುಕುಡಿಗೆ ರಸ್ತೆಯಲ್ಲಿ ಸ್ಥಳೀಯರು ಹಾಗೂ ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಇಂಜಿನಿಯರ್ ಹಾಗೂ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿ ಸಮಸ್ಯೆಯ ಕುರಿತು ತಿಳಿಸಿದರು. ಪ್ರತಿಭಟನೆ ನಡೆಸಿ ಮಾತನಾಡಿದ ಬಿಜೆಪಿ ಮುಖಂಡ ಮಣಿಕಂಠನ್ ಕಂದಸ್ವಾಮಿ ಕ್ಷೇತ್ರಕ್ಕೆ ಶಾಸಕರ ಕೊಡುಗೆ ಸೊನ್ನೆಯಾಗಿದೆ. ಬಂದಂತಹ ಅನುದಾನವನ್ನು ಸ್ವಜನ ಪಕ್ಷಪಾತ ಹಾಗೂ ಹಿಂಬಾಲಕರಿಗೇ ಕೆಲಸಗಳನ್ನು ಮಾಡಿ ಕೊಟ್ಟಿರುವ ಪರಿಣಾಮ ಇಂತಹ ಸಮಸ್ಯೆ ಎದುರಾಗಿದೆ. ಅನಾಹುತಗಳು ಸಂಭವಿಸುವ ಸ್ಥಳಗಳಲ್ಲಿ ಅಗತ್ಯ ಕಾಮಗಾರಿಗಳು ನಡೆಯದೇ ಇರುವ ಪರಿಣಾಮ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿದೆ, ಅವರು ಕೆಲಸ ಮಾಡಲು ಬಿಟ್ಟಿಲ್ಲ ಇವರಿಂದ ಇದು ಸಾಧ್ಯವಾಗಿಲ್ಲ ಎನ್ನದೇ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕರು ತಮ್ಮ ಕರ್ತವ್ಯವನ್ನು ಪಾಲಿಸಬೇಕು ಎಂದರು.
ಶಿವಮೊಗ್ಗ :
ಅಪ್ರಾಪ್ತ ಬಾಲಕಿಯನ್ನು ಮದುವೆಯಾದಾತ ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧನ :
ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಅಪ್ರಾಪ್ತ ವಯಸ್ಕ ಯುವತಿಯನ್ನು ಮದುವೆಯಾಗಿರುವ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕಾಶ್ ಎಂಬಾತನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯು 13 ವರ್ಷ ಪ್ರಾಯದಲ್ಲೇ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಬಾಲಕಿಯು 13 ವರ್ಷ ಪ್ರಾಯದಲ್ಲೇ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಗೊತ್ತಾದರೆ ಸಮಸ್ಯೆಯಾದೀತು ಎಂದು ಬಾಲಕಿಯು ಒಂದೂವರೆ ತಿಂಗಳ ಹಿಂದೆ ಯುವಕನೊಂದಿಗೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಮನೆಯವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಹಾಗೂ ಈ ಯುವಕನೇ ಕರೆದೊಯ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಮನೆ ಬಿಟ್ಟುಹೋಗಿದ್ದ ಜೋಡಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ, ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಾಲಕಿಯನ್ನು ಬಾಲಮಂದಿರದಲ್ಲಿರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊಸ ರೈಲ್ವೇ ಮಾರ್ಗಕ್ಕೆ ಟೆಂಡರ್ :
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಅವರು ಈ ಕಾಮಗಾರಿ ವೆಚ್ಚದ ಮೊತ್ತ 532 ಕೋಟಿರೂಪಾಯಿ, ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ 30 ಹಳ್ಳಿಗಳಲ್ಲಿ, 48 ಕಿಮೀ ಮಾರ್ಗದಲ್ಲಿ ರೈಲುಹಳಿಗಳನ್ನು ಅಳವಡಿಸಲಾಗುವುದು ಎಂದರು. ಭೂಸ್ವಾಧೀನಕ್ಕೆ 130 ರೂಪಾಯಿ ಕೋಟಿ ವೆಚ್ಚ ಮಾಡಲಾಗುವುದು. 555 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯು ಈಗಾಗಲೇ ಶೇ 90ರಷ್ಟು ಮುಗಿದಿದೆ. ನವೆಂಬರ್ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಳ್ಳಲಿದ್ದು, ಒಟ್ಟಾರೆ ಕಾಮಗಾರಿಯನ್ನು ಪೂರ್ಣಗೊಳಿಸಲು 30 ತಿಂಗಳ ಕಾಲಮಿತಿ ವಿಧಿಸಲಾಗಿದೆ ಎಂದರು.
ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರ ದುರ್ಮರಣ :
ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಶಿವಮೊಗ್ಗದ ರಿಪ್ಪನ್ ಪೇಟೆ ಸಮೀಪದ ಸಿದ್ದಪ್ಪನ ಗುಡಿಯ ಬಳಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಲಾರಿ ಚಕ್ರದ ಅಡಿಭಾಗಕ್ಕೆ ಸಿಲುಕಿದ ಇಬ್ಬರು ಬೈಕ್ ಸವಾರರು ದಾರುಣವಾಗಿ ಮೃತಪಟ್ಟಿದ್ದಾರೆ. ಆಯನೂರು ಕಡೆಯಿಂದ ರಿಪ್ಪನ್ ಪೇಟೆ ಮಾರ್ಗವಾಗಿ ಬರುತ್ತಿದ್ದ ಇಬ್ಬರು ಬೈಕ್ ಸವಾರರು ಹಾಗೂ ಲಾರಿಯ ನಡುವೆ ಮುಖಾಮುಖಿ ಸಂಭವಿಸಿದ ಪರಿಣಾಮ ಸವಾರರು ಅಂತ್ಯಕಂಡಿದ್ದಾರೆ. ಮೃತಪಟ್ಟವರನ್ನು ಶ್ರೀನಿವಾಸ್ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಮೃತರ ಸಂಬಂಧಿಕರು ತೀವ್ರ ನೋವನ್ನು ಹೊರಹಾಕಿದ್ದಾರೆ. ಸಂಭವಿಸಿದ ಅಪಘಾತವು ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ :
ಅಕ್ರಮವಾಗಿ ಹಸುಗಳನ್ನು ಕಟ್ಟಿಹಾಕಿ ಹಿಂಸೆ ನೀಡುತ್ತಿದ್ದ ಆರೋಪಿ ಬಂಧನ :
ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಕಡಿದು ಅದರ ಮಾಂಸವನ್ನು ಮಾರಾಟ ಮಾಡಿ ಅದರಿಂದ ಹಣಮಾಡುವ ಉದ್ದೇಶಹೊಂದಿದ್ದ ಎನ್ನಲಾದ ಸೈಯದ್ ಸಲೀಂ ಎಂಬಾತನ ಕುರಿತಾಗಿ ಮಾಹಿತಿಗಳು ಲಭ್ಯವಾದ ನಿಟ್ಟಿನಲ್ಲಿ ದಾಳಿ ನಡೆಸಿದ ಹಾಸನದ ಪೆನ್ಷನ್ ಮೊಹಲ್ಲಾ ಪಿ.ಎಸೈ ದಿನೇಶ್ ಕುಮಾರ್ ಅವರು ಆರೋಪಿಯನ್ನು ಸೆರೆಹಿಡಿದು ಮೂರು ಹಸುಗಳನ್ನು ರಕ್ಷಿಸಿದ್ದಾರೆ. ಆದಂಸಾಬ್ ಮಸೀದಿ ಹಿಂಭಾಗದ ಸರ್ದಾರ್ ಪಾಷಾ ಎಂಬುವವರ ಶೆಡ್ ನಲ್ಲಿ ಅಕ್ರಮವಾಗಿರಿಸಲಾಗಿದ್ದ ಹಸುಗಳನ್ನು ವಶಕ್ಕೆ ಪಡೆದು ಆರೋಪಿ ಸೈಯದ್ ಸಲೀಂನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


0 Comments