ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮೂವರು ರೌಡಿಶೀಟರ್ ಗಳ ಬಂಧನದ ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

31 ವರ್ಷ ಪ್ರಾಯದ ಜಮೀರ್ ಅಲಿಯಾಸ್ ಬಚ್ಚಾ ಅಲಿಯಾಸ್ ಬಚ್ಚನ್ ಬಿನ್ ಚಾಂದ್ ಫೀರ್ ಶಿವಮೊಗ್ಗ ಟೌನ್ ನ ಟಿಪ್ಪು ನಗರ ನಿವಾಸಿ ಈತನು ತನ್ನ 17ನೇ ವಯಸ್ಸಿನಿಂದಲೇ ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ತನ್ನ ಸಹಚರರೊಂದಿಗೆ ಅಕ್ರಮದ ಕೂಟ ಕಟ್ಟಿಕೊಂಡು, ಮಾರಕಾಸ್ತ್ರವನ್ನು ಹಿಡಿದುಕೊಂಡು, ಕೊಲೆ ಪ್ರಯತ್ನ, ದರೋಡೆ, ಸುಲಿಗೆ, ಮೋಸ ಮತ್ತು ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸುವುದು ಮುಂತಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪೊಲೀಸರಿಗೆ ಕಂಡು ಬಂದಿದ್ದು, ಈತನ ವಿರುಧ್ದ ಶಿವಮೊಗ್ಗ ಜಿಲ್ಲೆ, ಬೆಂಗಳೂರು ನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 22 ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ.


ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿ ಬಾಂಡ್ ಓವರ್ ಮಾಡಿದ್ದರೂ ಬಾಂಡ್ ನ ಷರತ್ತುಗಳನ್ನು ಉಲ್ಲಂಘಿಸಿ ಅಪರಾಧಗಳ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದು, ಸಾಮಾನ್ಯ ಕಾನೂನು ಕ್ರಮಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಡೆಗಟ್ಟಲು ಸಾದ್ಯವಾಗದೇ ಇರುವುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡುವಂತೆ ಕೋರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಶಿವಮೊಗ್ಗ ರವರಿಗೆ ಪ್ರಸ್ಥಾವನೆ ಸಲ್ಲಿಸಿದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಈ ವ್ಯಕ್ತಿಯ ವಿರುದ್ಧ ಬಂಧನ ಆಜ್ಞೆಯನ್ನು ಹೊರಡಿಸಿ ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿ ಇರಿಸಲು ಆದೇಶಿಸಿದ್ದಾರೆ. 

ದಿನಾಂಕ 20-08-2022 ರಂದು ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಈತನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ಸಲ್ಲಿಸಿದ ಮೇರೆಗೆ ದಿನಾಂಕ 26-08-2022 ರಂದು ಘನ ಕರ್ನಾಟಕ ಸರ್ಕಾರವು ಆದೇಶವನ್ನು ಸ್ಥಿರೀಕರಿಸಿ ಈ ವ್ಯಕ್ತಿಯ ಬಂಧನದ ಆದೇಶವನ್ನು ದಿನಾಂಕ 15-07-2022 ರಿಂದ 1 ವರ್ಷದ ಅವಧಿಯವರೆಗೆ ಮುಂದುವರೆಸಿ ಆದೇಶಿಸಿದೆ. 

ಕಳೆದ 06 ತಿಂಗಳುಗಳಲ್ಲಿ ಗೂಂಡಾ ಕಾಯ್ದೆಯ ಅಡಿಯಲ್ಲಿ ಪ್ರಮುಖ ಆರೋಪಿಯಾದ ಜಮೀರ್ ಅಲಿಯಾಸ್ ಬಚ್ಚಾ ಅಲಿಯಾಸ್ ಬಚ್ಚನ್ ಬಿನ್ ಚಾಂದ್ ಫೀರ್ ಟಿಪ್ಪು ನಗರ ಇನ್ನೋರ್ವ ಆರೋಪಿಯಾದ ಸಲೀಂ ಚೋರ್ ಸಲೀಂ ಬಿನ್ ಅಬ್ದುಲ್ ಬಷೀರ್ ಹಾಗೂ ಕಡೇಕಲ್ ಅಬೀದ್ ಖಾನ್ ಈ ಮೂವರನ್ನು 01 ವರ್ಷದ ಅವಧಿಗೆ ಗೂಂಡಾ ಕಾಯ್ದೆ ಅಡಿಯಲ್ಲಿ ಮುಂದುವರೆಸಿ ಘನ ಕರ್ನಾಟಕ ಸರ್ಕಾರವು ಆದೇಶಿಸಿರುತ್ತದೆ.

ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಹಾಗೂ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಕೆಲವು ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಬಂಧನಕ್ಕಾಗಿ ಅಧಿಕಾರಿಗಳು ಈಗಾಗಲೇ ಪ್ರಸ್ಥಾವನೆಯನ್ನು ಸಹ ಸಲ್ಲಿಸಿದ್ದು ಇದೇ ರೀತಿಯ ಕೃತ್ಯಗಳಲ್ಲಿ ಯಾರಾದರೂ ತೊಡಗಿರುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.