ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶವಾದ ಕೊಡಗಿನ ಗಡಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ದೊಡ್ಡ ದೊಡ್ಡ ಅವಾಂತರಗಳನ್ನು ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸೃಷ್ಟಿಸಿದೆ. ಮಳೆಯು ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ ಸುರಿಯುವ ಮುನ್ಸೂಚನೆಗಳಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. 

ಆಗಸ್ಟ್ 04 ಹಾಗೂ 05 ರ ಎರಡು ದಿನಗಳ ಕಾಲ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದ್ದು ಈ ಭಾಗದಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದೈನಂದಿನ ಚಟುವಟಿಕೆಗಳಲ್ಲಿ ತೊಡಗುವಂತೆ ಕೃಷಿಕರಿಗೆ ತಿಳಿಸಲಾಗಿದ್ದು, ನದಿಗಳ ನೀರಿನ ಮಟ್ಟದ ಅಬ್ಬರ ಹೆಚ್ಚಿರುವುದರಿಂದ ಹಾಗೂ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಕಾರಣ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. 


ಮಳೆಯಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ರಸ್ತೆಗುರುಳಿದ್ದು, ರಭಸದಿಂದ ಹರಿಯುವ ನೀರಿನಲ್ಲಿ ಮೂವರು ಕೊಚ್ಚಿಹೋಗಿದ್ದಾರೆ. ಇದಲ್ಲದೆ ಹಲವು ಕಡೆಗಳಲ್ಲಿ ರಸ್ತೆ ಸಂಪರ್ಕಕ್ಕೂ ಅಡೆತಡೆಗಳು ಉಂಟಾಗಿದೆ. 

ಕೊಡಗಿನಲ್ಲಿ ರಸ್ತೆ ಕುಸಿತದ ಭೀತಿ :

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಬಳಿಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯೆ ಭಾರೀ ಪ್ರಮಾಣದಲ್ಲಿ ಬಿರುಕು ಉಂಟಾಗಿದ್ದು, ಮಾಣಿ-ಮೈಸೂರು ಸಂಪರ್ಕ ಕಡಿತಗೊಳ್ಳುವ ಆತಂಕ ಜನರಲ್ಲಿ ಎದುರಾಗಿದೆ. ಕೊಡಗು ಜಿಲ್ಲೆಯ ಕೆಲವೆಡೆ ಧಾರಾಕಾರವಾಗಿ ಮಳೆ ಸುರಿದಿದ್ದು ಪ್ರಸ್ತುತ ಮುಂಜಾಗರೂಕತೆಯ ಕ್ರಮವಾಗಿ ಈ ಹೆದ್ದಾರಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಳೆಯ ಅಬ್ಬರ ಇನ್ನೆರಡು ದಿನಗಳ ಕಾಲ ಹೆಚ್ಚಾಗಿರುವುದರಿಂದ ವಾಹನಗಳಲ್ಲಿ ಸಂಚರಿಸುವವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಾಗಬೇಕಿದೆ.