ಚಿಕ್ಕಮಗಳೂರು :
ಹುಲಿ ದಾಳಿಗೆ ಹಸು ಬಲಿ :
ಮುತ್ತೋಡಿ ಪ್ರಾದೇಶಿಕ ವಲಯದ ಅತ್ತಿಗುಂಡಿ ಹೊನ್ನಮ್ಮನಹಳ್ಳದ ಹತ್ತಿರ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಹಸುವನ್ನು ಬಲಿ ಪಡೆದುಕೊಂಡಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಂಸದ ಅಂಗಡಿಗಳನ್ನು ತೆರೆಯದಂತೆ ಸೂಚನೆ :
ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದಲ್ಲಿ ಕೋಳಿ ಹಾಗೂ ಮಾಂಸದ ಅಂಗಡಿಗಳು ಹಾಗೂ ಮಾಂಸಾಹಾರಿ ಹೋಟೆಲ್ ಗಳನ್ನು ತೆರೆಯದಂತೆ ನಗರಸಭಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಂಡರು. ಯಾರಾದರೂ ನಿಯಮಗಳನ್ನು ಮೀರಿ ಅಂಗಡಿ ಹಾಗೂ ಹೋಟೆಲ್ ತೆರೆದರೆ ಅವರ ಅಂಗಡಿ ಹಾಗೂ ಹೋಟೆಲ್ ನ ಪರವಾನಿಗೆಯನ್ನು ರದ್ದುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾಗಿ ಸಂತೋಷ್ ಕೋಟ್ಯಾನ್ :
ಭಾರತೀಯ ಜನತಾ ಪಾರ್ಟಿ ಚಿಕ್ಕಮಗಳೂರು ಯುವಮೋರ್ಚಾ ಜಿಲ್ಲಾಧ್ಯಕ್ಷರಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲದ, ಸಕ್ರಿಯ ಬಿಜೆಪಿ ಕಾರ್ಯಕರ್ತ ಸಂತೋಷ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕಲ್ಭರುಡಪ್ಪ ಅವರ ಆದೇಶದ ಮೇರೆಗೆ ಎಂ.ಆರ್. ದೇವರಾಜ್ ಶೆಟ್ಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ಯುವಮೋರ್ಚಾ ಜವಾಬ್ದಾರಿ ಹೊತ್ತವರು ಎಲ್ಲರೂ ರಾಜೀನಾಮೆ ನೀಡಿದ್ದರು, ಈಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹಿಂದೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಂತೋಷ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.
ರಾಷ್ಟ್ರ ಧ್ವಜವನ್ನು ಸಿಗರೇಟ್ ನಿಂದ ಸುಟ್ಟಿದ್ದ ಕಿಡಿಗೇಡಿ ಅರೆಸ್ಟ್ :
75 ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ನಡೆದಿತ್ತು. ಈ ಸಮಯದಲ್ಲಿ ದೇಶದ ಅಸ್ಮಿತೆ ಹಾಗೂ ಗೌರವದ ಪ್ರತೀಕವಾದ ರಾಷ್ಟ್ರ ಧ್ವಜವನ್ನು ಕಿಡಿಗೇಡಿ ವ್ಯಕ್ತಿ ಗೌರವಿಸದೆ ಸಿಗರೇಟ್ ನಿಂದ ತೂತು ಮಾಡಿ ವಿಕೃತಿ ಮೆರೆದಿದ್ದ. ಬಂಧಿತನನ್ನು ಚಿಕ್ಕಮಗಳೂರಿನ ಅಸ್ಗರ್ ಎಂದು ಗುರುತಿಸಲಾಗಿದೆ. ಈತ ಸಿಗರೇಟು ಸೇದಿ ಮನೆ ಬಳಿ ಕಟ್ಟಿದ್ದ ರಾಷ್ಟ್ರ ಧ್ವಜವನ್ನು ಸುಟ್ಟು ತೂತು ಮಾಡುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಕಾರ್ಯಾಚರಣೆಗಿಳಿದ ಚಿಕ್ಕಮಗಳೂರಿನ ಪೊಲೀಸರು ಆರೋಪಿ ವಾಸವಿದ್ದ ಬಾರಲೇನ್ ಪ್ರದೇಶದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ ಆರೋಪಿ ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಎನ್ನಲಾಗಿದ್ದು. ಆತನನ್ನು ಬಂಧಿಸಿದ ಪೊಲೀಸರು ಆತನ ಬಳಿ ಇದ್ದ ವಿರೂಪಗೊಂಡ ಧ್ವಜವನ್ನು ವಶಕ್ಕೆಪಡೆದು, ರಾಷ್ಟ್ರದ ಗೌರವಕ್ಕೆ ಅಪಮಾನ ಮಾಡಿದ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಸನ :
ಪ್ರೀತಿಗೆ ವಿರೋಧ ವ್ಯಕ್ತಪಡಿಸಿದಕ್ಕೆ ಕಾರಿನಲ್ಲಿ ಗುದ್ದಿ ಕೊಲೆ ಮಾಡಿದ್ದ ಆರೋಪಿ ಅಂದರ್ :
ಪ್ರೀತಿಗೆ ವಿರೋಧವ್ಯಕ್ತಪಡಿಸಿದ ಕಾರಣಕ್ಕೆ ಯುವತಿಯೊಬ್ಬಳ ಮೇಳೆ ಕಾರು ಹರಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು. ಹಾಸನ ನಗರದ ಬೊಮ್ಮನಾಯಕನಹಳ್ಳಿ ನಿವಾಸಿ ಜಿ.ಆರ್.ಭರತ್ ಬಂಧಿತ ಆರೋಪಿಯಾಗಿದ್ದು, ನಗರದ ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಯುವತಿ ಶರಣ್ಯ ಎಂಬಾಕೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಭರತ್ ಪ್ರೀತಿಸುವಂತೆ ಯುವತಿಗೆ ಪ್ರತಿದಿನ ಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು, ಪ್ರೀತಿಗೆ ವಿರೋಧ ವ್ಯಕ್ತಪಡಿಸಿದಕ್ಕೆ ಕಾರು ಹರಿಸಿ ಆಕೆಯನ್ನು ಹತ್ಯೆ ಮಾಡಿದ್ದ. ಈ ಕುರಿತಾಗಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಜೂಜಾಟಗಾರನ ಬಂಧನ :
ಅಕ್ರಮವಾಗಿ ಮಟ್ಕಾ ಜೂಜಾಟದಲ್ಲಿ ಭಾಗಿಯಾಗಿದ್ದ ಸೈಯದ್ ಎಂಬ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಹಾಸನದ ಮೋಚಿ ಕಾಲೋನಿ ಬಳಿ ಈತ ಸುಜಾತದಲ್ಲಿ ತೊಡಗಿದ್ದು ಆತನ ಬಳಿದ್ದ 820 ರೂಪಾಯಿ ನಗದು ವಶಕ್ಕೆ ಪಡೆದ ಪೊಲೀಸರು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ :
ಪ್ರೇಮ್ ಸಿಂಗ್ ಗೆ ಚೂರಿ ಇರಿದ ಇಬ್ಬರು ಆರೋಪಿಗಳು ಇನ್ನೆರಡು ದಿನ ಪೊಲೀಸರ ಕಸ್ಟಡಿಗೆ :
ಶಿವಮೊಗ್ಗದ ಪ್ರೇಮ್‌ಸಿಂಗ್‌ಗೆ ಚಾಕು ಇರಿತ ಪ್ರಕರಣದಲ್ಲಿ ಬಂಧಿತರಾಗಿರುವ ನದೀಮ್, ಅಬ್ದುಲ್ ರೆಹಮಾನ್ ಮತ್ತು ತನ್ವೀರ್‌ನನ್ನು ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸಿದ್ದ ಪೊಲೀಸರು ತನಿಖೆ ಇನ್ನೂ ಪೂರ್ಣಗೊಳ್ಳದ ಕಾರಣ ಮತ್ತೆರಡು ದಿನ ಕಸ್ಟಡಿಗೆ ಒಪ್ಪಿಸುವಂತೆ ಕೇಳಿಕೊಂಡರು. ಈ ವೇಳೆ ಆರೋಪಿಗಳ ಪರ ವಕೀಲರು ಮತ್ತೆ ಪೊಲೀಸ್ ಕಸ್ಟಡಿಗೆ ಹಸ್ತಾಂತರಿಸಲು ಆಕ್ಷೇಪಿಸಿದರು.Bಪೊಲೀಸರು ನ್ಯಾಯ ಮೂರ್ತಿಗಳ ಮುಂದೆ ಆರೋಪಿಗಳನ್ನ ಐದು ದಿನಗಳ ಕಾಲ ಕಸ್ಟಡಿ ಕೇಳಿದ್ದರು. ಆದರೆ ಆರೋಪಿಗಳ ಪರ ವಕೀಲರು ಸರಿಯಾದ ಕಾರಣ ನೀಡಿ ನಂತರ ಕಸ್ಟಡಿಗೆ ಹಸ್ತಾಂತರಿಸಬೇಕು ಎಂದು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಸರ್ಕಾರದ ಪರ ವಕೀಲರಿಗೆ ಕಾರಣ ಕೊಡಲು ಸೂಚಿಸಿದರು. ಸರ್ಕಾರಿ ಪರ ವಕೀಲ ಎಪಿಪಿ ಕಿರಣ್ ರವರು ತನಿಖಾ ಹಂತದಲ್ಲಿ ಕಾರಣ ಕೊಡಲು ಬರಲ್ಲ. ಪ್ರತಿ ಹೆಜ್ಜೆ ಹೆಜ್ಜೆಗೂ ಆಕ್ಷೇಪಣೆ ಹಾಕಿದರೆ ಸರಿಯಲ್ಲ ಎಂದು ವಾದಿಸಿದ್ದರು. ವಾದಗಳನ್ನ ಆಲಿಸಿದ 5ನೇ ಜೆಎಂಎಫ್‌ಸಿ ನ್ಯಾಯಾಧೀಶ ಶಿವಕುಮಾರ್, ಆ.20ರವರೆಗೆ ಮೂವರನ್ನೂ ಕಸ್ಟಡಿಗೆ ಪಡೆದುಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದರು.
ಕೊಡಗು :
ಕೊಡಗು ಜಿಲ್ಲಾ ಪೊಲೀಸ್ ವಿರುದ್ಧ ಗುಡುಗಿದ ಸಿದ್ದರಾಮಯ್ಯ :
ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧವಾಗಿ ಇಂದು ಬಿಜೆಪಿ ಕಾರ್ಯಕರ್ತರು ಪ್ರದರ್ಶನ ಹಾಗೂ ಪ್ರತಿಭಟನೆ ನಡೆಸಿದ್ದಕ್ಕೆ ಪೊಲೀಸ್ ವ್ಯವಸ್ಥೆಯಾ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಬಿಜೆಪಿಯವರೇನು ಅಧಿಕಾರದಲ್ಲಿ ಗೂಟ ಹೊಡೆದುಕೊಂಡು ಅಧಿಕಾರದಲ್ಲಿ ಕೂತಿರುವುದಿಲ್ಲ, ಏಳು ತಿಂಗಳ ನಂತರದಲ್ಲಿ ನಾವೇ ಅಧಿಕಾರಕ್ಕೆ ಬಂದು ವ್ಯವಸ್ಥೆಯನ್ನು ಸರಿಪಡಿಸುತ್ತೇವೆ ಎಂದು ಕಿಡಿಕಾರಿದರು. 26 ರಂದು ಕೊಡಗಿನ ಎಸ್ಪಿ ಕಛೇರಿಗೆ ಮುತ್ತಿಗೆ ಹಾಕಿ ಈ ಕುರಿತು ನ್ಯಾಯ ಕೇಳುವುದಾಗಿ ತಿಳಿಸಿದರು. ಗಲಾಟೆ ಮಾಡಲು ಬಿಡುವುದಾದರೆ ಪೊಲೀಸರು ಇರುವುದು ಯಾಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಜಾ ಮಾರಾಟಕ್ಕೆ ಯತ್ನ ಐವರ ಸೆರೆ :
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ನಡೆಸಲು ಯತ್ನಿಸುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂದಿತರಿಂದ 30000 ರೂಪಾಯಿ ಬೆಲೆಬಾಳುವ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ಸಂಬಂಧ ಆರೋಪಿಗಳ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಘಟನಾ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.


0 Comments