ಚಿಕ್ಕಮಗಳೂರು :

ಶಾಲಾ ದ್ವಾರದ ಉದ್ಘಾಟನೆ :

ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ ರವರ ನೇತೃತ್ವದಲ್ಲಿ ಇಂದು ಬೆಳಗ್ಗೆ ಚಿಕ್ಕಮಗಳೂರು ನಗರದ ಕಲ್ದೊಡ್ಡಿ ಶಾಂತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾದ್ವಾರದ ಕಮಾನು ಉದ್ಘಾಟನೆ ಹಾಗೂ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಈ ಕುರಿತು ಮಾತನಾಡಿದ ಅಧ್ಯಕ್ಷರು ಸರ್ಕಾರವು ಶಿಕ್ಷಣದ ಉನ್ನತೀಕರಣಕ್ಕೆ ಶ್ರಮ ವಹಿಸುತ್ತಿದೆ. ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಮುಂದೆ ಸಮಾಜದ ಗಣ್ಯ ವ್ಯಕ್ತಿಗಳಾಗಿ ರೂಪಗೊಳ್ಳಬೇಕು ಎಂದು ಮಕ್ಕಳಿಗೆ ತಿಳಿಸಿದರು. ಅಂತೆಯೇ ಸರ್ಕಾರ ಹಾಗೂ ನಗರಸಭೆಯ ವತಿಯಿಂದ ಶಾಲೆಗೆ ಬೇಕಾಗುವ ಎಲ್ಲಾ ಅನುಕೂಲವನ್ನು ಮಾಡಿಕೊಡಲಾಗುವುದು ಎಂದರು ತಿಳಿಸಿದರು. ಈ ಸಮಯದಲ್ಲಿ ಸ್ಥಳಿಯ ನಗರಸಭಾ ಸದಸ್ಯರಾದ ಮಣಿಕಂಠ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶಬ್ನಮ್, ಸದಸ್ಯರುಗಳಾದ ರೇಖಾ, ಅಸ್ಮ, ತಬ್ಸುಮ್, ಸುಮತಿ, ಸರೋಜಾ, ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಯ್ಯ ರವರು, ಶಿಕ್ಷಕರಾದ ಹುಲಿ ಗೌಡ, ವಸಂತಕುಮಾರಿ, ಮಮತಾ, ಶಾಲಿನಿ, ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಮೆಸ್ಕಾಂ ಸಿಬ್ಬಂದಿ ಅಂತಿಮ ದರ್ಶನಕ್ಕೆ ಸೌಹಾರ್ದತೆಯಿಂದ ಕೂಡಿದ ಮೂಡಿಗೆರೆಯ ಸಾರ್ವಜನಿಕರು :

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೆಸ್ಕಾಂ ಕಚೇರಿಯ ಲೈನ್ ಮೆನ್ ಶಫೀಕ್ ಎಂಬುವವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ವಿದ್ಯುತ್ ಅವಘಡದಿಂದ ಗಂಭೀರವಾಗಿ ಅಸ್ವಸ್ಥರಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ 2.8.2022 ರ ಸಂಜೆ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಬುಧವಾರ ಸಂಜೆ ಮೂಡಿಗೆರೆಯ ಅಡ್ಯಂತಾಯ ರಂಗಮಂದಿರಕ್ಕೆ ತಂದಾಗ ಸುಮಾರು 3 ಸಾವಿರ ಜನ ಸೇರಿದ್ದು, ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಎಂ.ಕೆ.ಪ್ರಾಣೇಶ್. ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ಎಸ್ ಅನಂತ್, ಮುಖಂಡರಾದ ಬಿ.ಎನ್ ಜಯಂತ್, ದುಂಡುಗ ಪ್ರಮೋದ್, ಕೆ. ವೆಂಕಟೇಶ್. ಸಿ.ಕೆ ಇಬ್ರಾಹಿಂ ಸೇರಿದಂತೆ ಕಾಂಗ್ರೆಸ್.ಜೆಡಿಎಸ್,ಬಿಜೆಪಿ,ಬಿಎಸ್ಪಿ, ಸಿಪಿಐ,ಮುಸ್ಲಿಂ ಸಂಘಟನೆಗಳು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳು ಸೇರಿದಂತೆ ಸರ್ವ ಧರ್ಮಿಯರು ಅಂತಿಮ ದರ್ಶನ ಪಡೆದು ಶಪೀಕ್ ಹುಟ್ಟೂರಾದ ಭದ್ರಾವತಿಗೆ ಕಣ್ಣೀರಿನೊಂದಿಗೆ ಬೀಳ್ಕೊಟ್ಟರು. ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಕೋಮುಗಳ ನಡುವಿನ ಪರಿಸ್ಥಿತಿಯಿದ್ದು ಇದನ್ನೂ ಮೀರಿ ಸರ್ವಧರ್ಮ ಸಮನ್ವಯದಂತೆ ಮೂಡಿಗೆರೆಯ ಜನರು ಸೌಹಾರ್ದತೆ ಮೆರೆದಿದ್ದಾರೆ. 

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರು : 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ರಾಷ್ಟ್ರೀಯ ಹೆದ್ದಾರಿ ಚಕ್ ಮಕ್ಕಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಎಂಬಂತೆ ಕಾರಿನಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಯಾಗುತ್ತಿದ್ದು ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ಈ ಮಾರ್ಗಗಳಲ್ಲಿ ಸಾಗಬೇಕಿದೆ. 

ವಿದ್ಯಾರಣ್ಯಪುರ ಪಂಚಾಯಿತಿಯಲ್ಲಿ ಇ ಸ್ವತ್ತು ಡಿಲೀಟ್ ಪ್ರಕರಣ: ಲೋಕಾಯುಕ್ತದಿಂದ ನೋಟಿಸ್ ಜಾರಿ

ಶೃಂಗೇರಿ : ರಾಜ್ಯಮಟ್ಟದಲ್ಲಿ ಬಹು ಸುದ್ಧಿಯಾಗಿದ್ದ ಶೃಂಗೇರಿ ಹಕ್ಕುಪತ್ರ ಹಗರಣದ ತನಿಖೆ ಬಹುತೇಕ ಮುಗಿದಿದ್ದು, ತನಿಖೆಯ ವರದಿ ಅಷ್ಟೇ ಹೊರಬೀಳಬೇಕಿದೆ. ಈ ನಡುವೆ ಅದೇ ಹಕ್ಕುಪತ್ರಗಳ ಮೇಲೆ ಇ ಸ್ವತ್ತು ನೀಡಿ ನಂತರ ಅದನ್ನು ಮುಚ್ಚಿ ಹಾಕಲು ತನಿಖೆಯ ಸಂಧರ್ಭದಲ್ಲಿ ಸಿಗದಂತೆ ಡಿಲೀಟ್ ಮಾಡಿದ್ದಾರೆ ಎಂದು ಈ ಹಿಂದೆ ಲೋಕಾಯುಕ್ತಕ್ಕೆ ದೂರು ದಾಖಲಾಗಿತ್ತು. ಈ ಸಂಬಂಧ ಕರ್ನಾಟಕ ಲೋಕಾಯುಕ್ತವು ವಿದ್ಯಾರಣ್ಯಪುರ ಪಿಡಿಓ ಗೋಪಾಲ ಹಂಡ ಹಾಗೂ ಶೃಂಗೇರಿ ತಾಲೂಕು ಪಂಚಾಯಿತಿ ಇಓ ಜಯರಾಂಗೆ ತನಿಖೆ ಸಂಬಂಧ ನೋಟಿಸ್ ಜಾರಿ ಮಾಡಿದೆ. ಈ ಹಿಂದೆ ಹಣ ಪಡೆದು ಹಕ್ಕುಪತ್ರ ಹಂಚುವಾಗ ಎಸಿಬಿ ಬಲೆಗೆ ಬಿದ್ದು ಶೃಂಗೇರಿ ಹಳೆಯ ತಹಸೀಲ್ದಾರ್ ಅಂಬುಜಾ ಸೇರಿದಂತೆ ಹಲವರು ಜೈಲು ಪಾಲಾಗಿದ್ದರು, ಈಗ ಹಗರಣ ಸಂಬಂಧ ಮತ್ತಿಬ್ಬರ ತಲೆದಂಡವಾಗುವ ಸಾಧ್ಯತೆ ಕಾಣುತ್ತಿದೆ. ಅದೇ ಸಂದರ್ಭದಲ್ಲಿ ತಾಲೂಕು ಕಛೇರಿಯಿಂದ ನೀಡಿದ್ದ ಹಕ್ಕುಪತ್ರಗಳಿಗೆ ಸರಿಯಾದ ಪೂರಕ ದಾಖಲೆ ಪಡೆಯದೆ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯಲ್ಲಿ 46ಕ್ಕೂ ಅಧಿಕ ಇ ಸ್ವತ್ತುಗಳನ್ನು ನೀಡಲಾಗಿತ್ತು. ಆದರೆ ಹಕ್ಕುಪತ್ರ ಹಗರಣ ಹೊರಬಿದ್ದು ತನಿಖಾ ತಂಡ ನೇಮಕವಾಗುತ್ತಿದ್ದಂತೆ ತಾನೂ ಸಿಕ್ಕಿಬೀಳುವ ಭಯದಲ್ಲಿ ಪಂಚಾಯಿತಿ ಪಿಡಿಓ ಗೋಪಾಲಹಂಡ ತಾಲೂಕು ಪಂಚಾಯತಿ ಇಓ ಜಯರಾಂಗೆ ಹಣ ನೀಡಿ ಅವರ ಲಾಗಿನ್ ಮೂಲಕ ಡಿಲೀಟ್ ಮಾಡಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.

ಶಿವಮೊಗ್ಗ : 

ಕಲ್ಲಿನಿಂದ ಜಜ್ಜಿ ಯುವಕನ ಹತ್ಯೆ :

ಪರೀಕ್ಷೆಯಲ್ಲಿ ಪಾಸ್ ಆದ ಕಾರಣಕ್ಕೆ ಯುವಕನಿಗೆ ಪಾರ್ಟಿ ಕೊಡಿಸುವಂತೆ ಪೀಡಿಸುತ್ತಿದ್ದ ಯುವಕನನ್ನು ಸ್ನೇಹಿತರೇ ಪಾರ್ಟಿಗೆ ಕರೆದುಕೊಂಡು ಹೋಗಿ ಪಾರ್ಟಿಯ ಬಳಿಕದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹತ್ಯೆಗೀಡಾದ ಯುವಕನನ್ನು ಶಿವಮೊಗ್ಗದ ಹೊಸಮನೆ ಮೂರನೇ ಕ್ರಾಸ್ ನ ನಿವಾಸಿ 23 ವರ್ಷ ಪ್ರಾಯದ ಕಿರಣ್ ಅಲಿಯಾಸ್ ಪುಚ್ಚಿ ಎಂದು ಗುರುತಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣನಾದ ಕಾರಣಕ್ಕೆ ಪಾರ್ಟಿ ಕೊಡಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಪಾರ್ಟಿ ನಡೆಸುವ ಸಲುವಾಗಿ ಇನ್ನೋರ್ವ ಸ್ನೇಹಿತನಾದ ಗಾಡಿಕೊಪ್ಪದ ಕಾರ್ತಿಕ್ ನೊಂದಿಗೆ ಮೂವರೂ ಕೂಡ ಗಂಧರ್ವ ಬಾರ್ ಹಿಂಭಾಗದ ಜನ ಸಂದಣಿ ಕಡಿಮೆಯಿರುವ ಸ್ಥಳದಲ್ಲಿ ಮದ್ಯಪಾನ ಮಾಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಎರಡು ಸಾವಿರ ಹಣ ನೀಡುವಂತೆ ಕಿರಣ್ ಕೇಳಿದ್ದಾನೆ ಹಣ ನೀಡಲು ಇಬ್ಬರೂ ಸ್ನೇಹಿತರು ನಿರಾಕರಿಸಿದ ಕಾರಣ ಸ್ನೇಹಿತರಾದ ಪ್ರಜ್ವಲ್ ಹಾಗೂ ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಆಕ್ರೋಶಗೊಂಡ ಇನ್ನಿಬ್ಬರು ಕಿರಣ್ ಗೆ ಮದ್ಯಕುಡಿಸಿ ಮದ್ಯದ ಬಾಟಲಿಯಿಂದ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿದ್ದರು ಹಾಗೂ ಪ್ರಜ್ಞೆ ತಪ್ಪಿಬಿದ್ದಿದ್ದ ಆತನ ಮುಖದ ಮೇಲೆ ಕಲ್ಲಿನಿಂದ ಜಜ್ಜಿ ಹತ್ಯೆಮಾಡಿ ಎಸ್ಕೇಪ್ ಆಗಿದ್ದರು. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ನಯವಾಗಿ ವಂಚಿಸಿ ಸರ ಕದ್ದೊಯ್ದ ಖದೀಮರು :

ಸುಶೀಲಮ್ಮ ಎಂಬುವವರ ಚಿನ್ನಾಭರಣಕ್ಕೆ ಪಾಲಿಶ್ ಹಾಕಿಕೊಡುವುದಾಗಿ ನಂಬಿಸಿದ ಇಬ್ಬರು ಅಪರಿಚಿತರು ಮನೆಯ ಮುಂದೆ ಬಟ್ಟೆ ಒಗೆಯುತ್ತಿದ್ದ ಸುಶೀಲಮ್ಮರ ಬಳಿ ಬೈಕ್‌ನಲ್ಲಿ ಬಂದು ಹಿತ್ತಾಳೆ, ಬೆಳ್ಳಿ ಸಾಮಾಗ್ರಿಗಳಿಗೆ ಪಾಲಿಶ್ ಹಾಕ್ತೀವಿ ಪಾತ್ರೆಗಳು ಆಭರಣಗಳು ಇದ್ದರೆ ಕೊಡಿ ಎಂದು ಪೌಡರ್ ತೋರಿಸಿದ್ದಾರೆ ಇದಕ್ಕೆ ಪ್ರತಿಯಾಗಿ ಯಾವ ಪಾತ್ರೆಗಳು ಇಲ್ಲ ನಡೆಯಿರಿ ಎಂದು ಮಹಿಳೆ ಹೇಳಿದ್ದಾರೆ. ಈ ಸಮಯದಲ್ಲಿ ಅಲ್ಲಿಗೆ ಪ್ರವೇಶಿಸಿದ ಗೋವಿಂದಮ್ಮ ಎಂಬುವವರು ಒಂದು ಪಾತ್ರೆ ಹಿಡಿದುಕೊಂಡು ಬಂದಿದ್ದಾರೆ. ಈ ವೇಳೆ ಕಳ್ಳರು ಗೋವಿಂದಮ್ಮರಿಗೆ ಪಾತ್ರೆಯನ್ನು ಹೊಳೆಯುವಂತೆ ಮಾಡಿಕೊಟ್ಟಿದ್ದಾರೆ. ಹಾಗೂ ಉಂಗುರವನ್ನೂ ತೊಳೆದುಕೊಟ್ಟಿದ್ದಾರೆ. ಯಾವಾಗ‌ ಗೋವಿಂದಮ್ಮ ಪಾತ್ರೆ ಮತ್ತು ಉಂಗುರವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದಂತೆ ಸುಶೀಲಮ್ಮರ ಮಾಂಗಲ್ಯ ಸರ ಕೊಡಮ್ಮ ಪಾಲಿಶ್ ಮಾಡಿಕೊಡ್ತೀವಿ ಎಂದು ನಯವಾಗಿ ಅವರಲ್ಲಿ ಕೇಳಿದ್ದಾರೆ. ಗೋವಿಂದಮ್ಮರ ಪಾತ್ರೆಯನ್ನು ಪಾಲಿಶ್ ಮಾಡಿಕೊಟ್ಟಿರುವುದನ್ನು ಕಂಡು ನಂಬಿಕೆ ಹೊಂದಿದ ಸುಶೀಲಮ್ಮ ಮಾಂಗಲ್ಯ ಸರವನ್ನು ಅಪರಿಚಿತರಬಳಿ ಕೊಟ್ಟಿದ್ದಾರೆ. ಸರವನ್ನು ಪಡೆದ ಕಳ್ಳರು ಒಂದು ಲೋಟ ನೀರು ಕೊಡುವಂತೆ ಕೇಳಿದ್ದಾರೆ. ಮಹಿಳೆ ಮನೆಯೊಳಗೆ ಕಾಲಿಡುತ್ತಿದ್ದಂತೆ ವಿರುದ್ಧ ದಿಕ್ಕಿನಲ್ಲಿ ಖತರ್ನಾಕ್ ಖದೀಮರು ಕಾಲ್ಕಿತ್ತಿದ್ದಾರೆ. ಎತ್ತ ಹುಡುಕಿದರೂ ಅಪರಿಚಿತರು ಕಾಣದೆ ಇದ್ದುದರಿಂದ ಈ ಕುರಿತಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಚಿನ್ನದ ಮಾಂಗಲ್ಯಸರ ಕಳುವಾಗಿರುವುದಾಗಿ ದೂರು ದಾಖಲಿಸಿದ್ದಾರೆ.

ಕೊಡಗು : 

ಭಾರೀ ಮಳೆಗೆ ರಸ್ತೆ ಕುಸಿತ :

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಬಳಿಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯೆ ಭಾರೀ ಪ್ರಮಾಣದಲ್ಲಿ ಬಿರುಕು ಉಂಟಾಗಿದ್ದು, ಮಾಣಿ-ಮೈಸೂರು ಸಂಪರ್ಕ ಕಡಿತಗೊಳ್ಳುವ ಆತಂಕ ಜನರಲ್ಲಿ ಎದುರಾಗಿದೆ. ಕೊಡಗು ಜಿಲ್ಲೆಯ ಕೆಲವೆಡೆ ಧಾರಾಕಾರವಾಗಿ ಮಳೆ ಸುರಿದಿದ್ದು ಪ್ರಸ್ತುತ ಮುಂಜಾಗರೂಕತೆಯ ಕ್ರಮವಾಗಿ ಈ ಹೆದ್ದಾರಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.