ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಗೋ ಹಂತಕರು ಅಕ್ರಮವಾಗಿ ಹಸುವನ್ನು ಮಾಂಸಕ್ಕಾಗಿ ಕಡಿದು ಅದರ ಕರುವನ್ನು ಕಾಡಿನ ಮಧ್ಯದಲ್ಲಿ ಬಿಸಾಕಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಹಳೆ ಕಡಬಗೆರೆ ರವೀಂದ್ರ ಎಂಬುವವರಿಗೆ  ಸೇರಿದ ಗಬ್ಬದ ಹಸುವನ್ನು(ಗರ್ಭ ಧರಿಸಿದ್ದ) ಗೋ ಕಳ್ಳರು ಮಾಂಸಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡಿ ಎಲೇಕಲ್ ಬಳಿ ತಂದು ಹಸುವಿನ ತಲೆ ಕಡಿದು, ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಬೇರೆಡೆಗೆ ಎಸೆದು ಮಾಂಸವನ್ನು ಸಾಗಾಟ ಮಾಡಿದ್ದಾರೆ.


ಗೋವು ಕಾಣದೇ ಇರುವುದನ್ನು ಕಂಡ ಹಸುವಿನ ಮಾಲೀಕರಾದ ರವೀಂದ್ರ ಅವರು ಹಸುವನ್ನು ಹುಡುಕಿಕೊಂಡು ಹೋದಾಗ ಅವರಿಗೆ ಹಸುವಿನ ತಲೆಯ ಭಾಗ ಕಂಡಿದೆ. ತಾವು ಸಾಕಿದ್ದ ಹಸುವು ಇಂತಹ ದಾರುಣ ಸ್ಥಿತಿಯಲ್ಲಿರುವುದನ್ನು ಕಂಡ ರವೀಂದ್ರ ಅತೀವವಾದ ಬೇಸರವ್ಯಕ್ತಪಡಿಸಿದರು.

ಈ ಕೃತ್ಯವನ್ನು ಯಾರೇ ಎಸಗಿದ್ದರೂ ಕೂಡ ಅವರನ್ನು ಬಿಡದೇ ಆರೋಪಿಗಳನ್ನು ಪತ್ತೆ ಮಾಡಿ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕೆಂದು ರವೀಂದ್ರ ಅವರು ಹಾಗೂ ಸ್ಥಳೀಯರು ಅಧಿಕಾರಿಗಳನ್ನು ಕೋರಿದ್ದಾರೆ. 

ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಠಾಣೆಯ ಪೊಲೀಸರು ಹಾಗೂ ಪಶು ಇಲಾಖೆಯ ವೈದ್ಯರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದರು.


ಅಕ್ರಮವಾಗಿ ಗಾಂಜಾ ಮಾರಾಟ ನಡೆಸುತ್ತಿದ್ದ ನಾಲ್ವರು ಸೆರೆ; ಕೆ.ಜಿ ಗಟ್ಟಲೇ ಗಾಂಜಾ ವಶಕ್ಕೆ ಪಡೆದ ಪೊಲೀಸರು :

ಶಿವಮೊಗ್ಗ : ಅಕ್ರಮವಾಗಿ ಗಾಂಜಾ ಮಾರಾಟ ನಡೆಸುತ್ತಿದ್ದ ನಾಲ್ವರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದು ಆರೋಪಿಗಳಿಂದ ಗಾಂಜಾ ವಶಕ್ಕೆ ಪಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಳೆನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆಯಿಂದ ಹೊಸಸೀಗೇಬಾಗಿ ಕಡೆಗೆ ಹೋಗುವ ರಸ್ತೆಯ ಸಮೀಪದ ಅಂಗಡಿಯ ಮುಂಭಾಗದಲ್ಲಿನ ಕಚ್ಚಾರಸ್ತೆಯಲ್ಲಿ ನಾಲ್ವರು ವ್ಯಕ್ತಿಗಳು ಸಾರ್ವಜನಿಕರಿಗೆ ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾ ಮಾರಾಟ ನಡೆಸುತ್ತಿರುವ ಕುರಿತು ಮಾಹಿತಿಪಡೆದ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳಿದ್ದ ಸ್ಥಳಕ್ಕೆ ಧಾವಿಸಿದ್ದಾರೆ. 


ಈ ಸಂದರ್ಭದಲ್ಲಿ ಆರೋಪಿಗಳಾದ ಮೊಹಮ್ಮದ್‌ ಖಾಲಿದ್‌, ಮೊಹಮ್ಮದ್‌ ಸಾಹಿಲ್‌, ಮೊಹಮ್ಮದ್‌ ಅರ್ಶನ್‌, ಸಯ್ಯದ್ ಅರ್ಭಾಜ್‌ ಎಂಬ ನಾಲ್ವರು ಸ್ಥಳದಲ್ಲಿದ್ದು ಅವರನ್ನು ಗಾಂಜಾ ಸಮೇತ ಸೆರೆಹಿಡಿದಿದ್ದಾರೆ.

ಬಂಧಿತರಿಂದ ಅಂದಾಜು ಮೌಲ್ಯ 69,000 ರೂಪಾಯಿಗಳ 02 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ, 800 ರೂ ನಗದು ಹಣ, 03 ಮೊಬೈಲ್‌ ಫೋನ್‌ ಗಳು ಹಾಗೂ ಕೃತ್ಯಕ್ಕೆ ಬಳಸಿದ 02 ದ್ವಿ ಚಕ್ರ ವಾಹನ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎ.ಎಸ್‌.ಪಿ ಭದ್ರಾವತಿ ಉಪ ವಿಭಾಗ, ಸಿಪಿಐ ಭದ್ರಾವತಿ ನಗರ ವೃತ್ತ ಹಾಗೂ ಹಳೆನಗರ ಪೊಲೀಸ್‌ ಠಾಣೆಯ ಅಧಿಕಾರಿವರ್ಗ ಮತ್ತು ಸಿಬ್ಬಂದಿಗಳು ಭಾಗವಹಿಸಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ.