ವಯೋ ಸಹಜವಾಗಿ ಮೃತಪಟ್ಟ ತೀರ್ಥಹಳ್ಳಿ ತಾಲೂಕಿನ ಕೋಡ್ಲು ಗ್ರಾಮದ 80 ವರ್ಷದ ತಮ್ಮಯ್ಯ ಗೌಡ ಎಂಬುವವರ ಅಂತ್ಯಕ್ರಿಯೆ ನಡೆಸಲು ಸ್ಥಳೀಯರು ಹಾಗೂ ಕುಟುಂಬದ ಸದಸ್ಯರು ಸ್ಮಶಾನಕ್ಕೆ ಎದೆ ಮಟ್ಟದ ನೀರಿನಲ್ಲಿ ಹೆಣವನ್ನು ಹೊತ್ತೊಯ್ಯುವ ದೃಶ್ಯ ಅತ್ಯಂತ ದುಸ್ಥಿತಿಯದ್ದಾಗಿದೆ. ಎದೆ ಮಟ್ಟದವರೆಗೆ ಹರಿಯುತ್ತಿರುವ ಮಳೆ ನೀರಿನಲ್ಲೇ ಮೃತದೇಹ ಸಾಗಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳುವ ರಸ್ತೆ ಸಮರ್ಪಕವಾಗಿಲ್ಲ. ಮಳೆ ಬಂದರೆ ಸಾಕು ರಸ್ತೆ ಹೋಗಿ ಕೆರೆಯಂತೆ ಮಾರ್ಪಾಡಾಗುತ್ತದೆ. ವಯೋಸಹಜವಾಗಿ ತಮ್ಮಯ್ಯಗೌಡ ಅವರು ನಿಧನರಾದ ಹಿನ್ನೆಲೆ ಅವರ ಮೃತದೇವಹನ್ನು ಹರಿಯುತ್ತಿರುವ ಮಳೆ ನೀರಿನಲ್ಲೇ ತೆಗೆದುಕೊಂಡು ಹೋಗಲಾಗಿದೆ. ಆರು ಜನರು ಮೃತದೇಹವನ್ನು ನೀರಿನಲ್ಲಿ ಸಾಗಿಸುವ ದೃಶ್ಯವನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ.
ಅವ್ಯವಸ್ಥೆಯ ಸ್ಮಶಾನ :
ಸ್ಮಶಾನಕ್ಕೆ ತೆರಳಲು ದಾರಿ ಸಮರ್ಪಕವಾಗಿಲ್ಲದೆ ಇರುವುದು ಒಂದು ಸಮಸ್ಯೆಯಾದರೆ ಸ್ಮಶಾನದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದೆ ಇರುವುದು ಇನ್ನೊಂದು ಸಮಸ್ಯೆಯಾಗಿದೆ. ಈ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಜೋರಾಗಿ ಸುರಿಯುವ ಮಳೆಯಲ್ಲಿಯೇ ಮೃತರ ಅಂತ್ಯಸಂಸ್ಕಾರ ನಡೆಸಲಾಗಿದೆ. ಕುಟುಂಬವರ್ಗದವರೇ ಶೀಟ್ ಹಾಕಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ವ್ಯವಸ್ಥೆ ಕಲ್ಪಿಸಿಕೊಂಡು ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ. ಇಂತಹ ತೀವ್ರ ಸಮಸ್ಯೆಗಳು ಜನರಿಗೆ ಎದುರಾಗಿದ್ದು ಸಂಬಂಧಿಸಿದವರ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಮನವಿಗೂ ದೊರೆಯದ ಸ್ಪಂದನೆ ; ನಿಲುಕದ ಪರಿಹಾರ :
ಸ್ಮಶಾನಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಾಗೂ ಸ್ಮಶಾನದ ಹಾದಿಗೆ ಮಣ್ಣು ಹಾಕಿ ಎತ್ತರಿಸುವಂತೆ ಹಲವು ಭಾರೀ ಮನವಿ ಮಾಡಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಮಳೆಗಾಲ ಶುರುವಾದರೆ ಈ ಮಾರ್ಗದಲ್ಲಿ ನೀರು ಹರಿಯಲು ಆರಂಭವಾಗುತ್ತದೆ. ಮೂರ್ನಾಲ್ಕು ತಿಂಗಳು ರಸ್ತೆಯಲ್ಲಿ ನೀರು ಹರಿಯುವುದರಿಂದ ಸ್ಮಶಾನಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಸ್ಥಳೀಯರು ಬೇಸರವನ್ನು ಹೊರಹಾಕಿದರು ಹಾಗೂ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜನರಿಗೆ ಅತೀವವಾಗಿ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಿ ಸ್ಮಶಾನಕ್ಕೆ ತೆರಳಲು ಸೂಕ್ತವಾದ ಮಾರ್ಗವನ್ನು ಕಲ್ಪಿಸಬೇಕಿದೆ.



.jpeg)


0 Comments