ಚಿಕ್ಕಮಗಳೂರು: (NEWS MALNAD FOCUS STORY) ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಕೇಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.

ಇದನ್ನೂ ಓದಿ : NEWS MALNAD IMPACT  ಭಾರೀ ಮಳೆಗೆ ಕುಸಿದಿದ್ದ ವಯೋವೃದ್ಧರ ಮನೆಗೆ ಪರಿಹಾರ

ಕಳೆದ ಕೆಲವಾರು ತಿಂಗಳುಗಳ ಹಿಂದೆ ವ್ಯಾಪಕವಾಗಿ ಹಬ್ಬಿದ್ದ ಫೇಕ್ ಅಕೌಂಟ್ ಮೋಸದ ಜಾಲ ಈಗ ಬಳಕೆದಾರರ ನಿಜವಾದ ಅಕೌಂಟ್ ಗಳನ್ನೇ ಹ್ಯಾಕ್ ಮಾಡಿ ಆ ಮೂಲಕ ಅವರ ಲಿಸ್ಟ್ ನಲ್ಲಿರುವ ಸ್ನೇಹಿತರಿಗೆ ‘ನನ್ನ ಖಾತೆ ಲಾಕ್ ಅಗಿದೆ, ಹಣ ಇದ್ದರೆ ಕಳಿಸು, ವಾಪಾಸ್ ಕೊಡುತ್ತೇನೆ’ ಎಂದು ಕನ್ನಡದಲ್ಲೇ ಮೆಸೇಜ್ ಮಾಡುತ್ತಿದ್ದಾರೆ. 


ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲೇ ಈಗಾಗಲೇ ಎರಡು ಇನ್ಸ್ಟಾಗ್ರಾಮ್ ಖಾತೆ ಹಾಗೂ 5 ವಾಟ್ಸಾಪ್ ಖಾತೆಗಳು ಹ್ಯಾಕ್ ಆಗಿವೆ. ಬಳಕೆದಾರರ ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿರುವ ಈ ಮೇಲ್, ನಂಬರ್, ಪಾಸ್ವರ್ಡ್ ಸೇರಿದಂತೆ ಎಲ್ಲವನ್ನೂ ಬದಲಿಸಿದ್ದಾರೆ ಬಳಿಕ ಆ ಇನ್ಸ್ಟಾಗ್ರಾಂ ಖಾತೆಯಿಂದ ಫ್ರೆಂಡ್ ಲಿಸ್ಟ್ ನಲ್ಲಿರುವ ಅನೇಕರಿಗೆ ಹಣ ನೀಡುವಂತೆ ಕೇಳಿದ್ದಾರೆ. ಮೋಸದ ಜಾಲ ಅರಿಯದ ಕೆಲವರು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ನಿಮ್ಮನ್ನು ‘ಫಿಟ್ ನೆಸ್ ಗ್ರೂಪ್ ಗೆ ಸೇರಿಸುತ್ತೇನೆ’ ನಿಮ್ಮ ನಂಬರ್ ಕೊಡಿ ಎಂದು ಕೇಳಿದ್ದು, ಆ ನಂಬರ್ ಗೆ ಬರುವ ಒಟಿಪಿ ಯನ್ನು ಹೇಳುವಂತೆ ಕೇಳಿಕೊಂಡಿದ್ದಾರೆ. ಸುಮಾರು 5-6 ಜನ ಒಟಿಪಿಯನ್ನು ಹಂಚಿಕೊಂಡಿದ್ದು, ತಕ್ಷಣವೇ ಅವರ ವಾಟ್ಸಾಪ್ ಖಾತೆಯೂ ಹ್ಯಾಕ್ ಆಗಿವೆ.

ಫೇಕ್ ಅಕೌಂಟ್ ಮತ್ತು ಖಾತೆ ಹ್ಯಾಕ್ ಆಗಿರುವ ಕುರಿತು ಸಾಕಷ್ಟು ಗೊಂದಲಗಳಿವೆ. ಫೇಸ್ಬುಕ್ ಖಾತೆ ಹ್ಯಾಕ್ ಆಗುವುದು ಎಂದರೆ, ನೀವು ಈಗ ನಿರ್ವಹಿಸುತ್ತಿರುವ ವೈಯಕ್ತಿಕ ಫೇಸ್ಬುಕ್ ಖಾತೆ ಅಥವಾ ಫೇಸ್ಬುಕ್, ಇನ್ಸ್ಟಾಗ್ರಾಂ ಪೇಜ್ ಗಳನ್ನು ನಿಮ್ಮ ಅನುಮತಿ ಇಲ್ಲದೆ ಅನ್ಯಮಾರ್ಗಗಳ ಮೂಲಕ ಪ್ರವೇಶಿಸಿ ಅದರಲ್ಲಿ ನಿಮ್ಮ ಸ್ನೇಹಿತರಿಗೆ ಅಸಭ್ಯವಾಗಿ ಮೆಸೇಜ್ ಮಾಡುವುದು, ಹಣ ಕೇಳುವುದು ಅಥವಾ ನಿಮ್ಮ ವ್ಯಯಕ್ತಿಕ ವರ್ಚಸ್ಸಿಗೆ ಧಕ್ಕೆ ತರುವಂತೆ ಮಾಡುವುದು. ಹೆಚ್ಚಿನ ಸಂದರ್ಭದಲ್ಲಿ ಹ್ಯಾಕ್ ಆದ ಖಾತೆಗಳು ನಿಮಗೆ ಮರಳಿ ಸಿಗುವುದಿಲ್ಲ. ಯಾಕೆಂದರೆ ದುಷ್ಕರ್ಮಿಗಳು ಹ್ಯಾಕ್ ಮಾಡಿದ ಮೇಲೆ ಖಾತೆಯ ಈಮೈಲ್ ವಿಳಾಸ, ನಂಬರ್ ಹಾಗೂ ಪಾಸ್ ವರ್ಡ್ ಗಳನ್ನು ಬದಲಾಯಿಸಿಬಿಡುತ್ತಾರೆ. ಹೀಗಾದಾಗ ನೀವು ನಿಮ್ಮ ಸ್ನೇಹಿತರಿಗೆ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಬೇಕು ಬಿಟ್ಟರೆ ಅಕೌಂಟ್ ಗಳನ್ನು ರಿಕವರಿ ಮಾಡಿಕೊಳ್ಳಬಹುದಾದ ಮಾರ್ಗಗಳು ಕಡಿಮೆ.

ನನ್ನ ಖಾತೆ ಹ್ಯಾಕ್ ಆಗಿರುವುದು ಗಮನಕ್ಕೆ ಬಂದ ಕೂಡಲೇ ನನ್ನ ಸ್ನೇಹಿತರಿಗೆ ವಿಚಾರ ತಿಳಿಸಿದೆ. ಆದರೂ ಕೆಲವರು ಹಣ ಹಾಕಿದ್ದಾರೆ. ಯಾರ ಖಾತೆಯಿಂದ ಈ ರೀತಿ ಹಣ ಹಾಕುವಂತೆ ಮೆಸೇಜ್ ಗಳು ಬಂದರೂ ಒಮ್ಮೆ ಅವರಿಗೆ ಕರೆ ಮಾಡಿ ವಿಷಯ ತಿಳಿದುಕೊಂಡು ಮುಂದುವರೆಯಬೇಕು. ಸೈಬರ್ ಇಲಾಖೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು. - ನಿಧಿಶ್ರೀ ಜಿ. ಡಿ, ಇನ್ಸ್ಟಾಗ್ರಾಂ ಬಳಕೆದಾರರು

ಹ್ಯಾಕ್ ಆಗಲು ಸಾಮಾನ್ಯವಾಗಿ ಕೆಲವು ಕಾರಣಗಳಿವೆ.

1) ಅತೀ ಸುಲಭವಾಗಿ ಬಳಸಬಹುದಾದ ಪಾಸ್ವರ್ಡ್ ಉಪಯೋಗಿಸುವುದು. ಉದಾ : ನಿಮ್ಮ ಮೊಬೈಲ್ ನಂಬರ್, 123456789

2) ಸಾಮಾಜಿಕ ಜಾಲತಾಣದಲ್ಲಿ ವಾಟ್ಸಾಪ್ ನಲ್ಲಿ ಬರುವ ಸುರಕ್ಷಿತವಲ್ಲದ ಲಿಂಕ್ ಕ್ಲಿಕ್ ಮಾಡುವುದು ಅಥವಾ ಅಪ್ಲಿಕೇಶನ್ ಬಳಕೆ ಮಾಡುವುದು. 

3) 2 Factor Authentication ಬಳಸದೇ ಇರುವುದು.

4) ನಿಮಗೆ ತುಂಬಾ ಆತ್ಮೀಯರಲ್ಲದ ಹಾಗೂ ಇತ್ತೀಚೆಗಷ್ಟೇ ಪರಿಚಿತರಾದ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು.

5) ಸೈಬರ್ ಕೆಫೆ, ಕೆಲಸದ ಸ್ಥಳಗಳಲ್ಲಿ ಅಥವಾ ಯಾರದ್ದೋ ಮೊಬೈಲ್ ನಲ್ಲಿ ಫೇಸ್ಬುಕ್ ಬಳಸಿ ಲಾಗೌಟ್ ಆಗದೇ ಇರುವುದು.

ಇವಿಷ್ಟು ಮುಖ್ಯವಾಗಿ ಗಮನಿಸಬೇಕಾದ ಅಂಶಗಳು. ಇನ್ನು ಎರಡನೆಯದು ಫೇಕ್ ಅಕೌಂಟ್ ಗಳನ್ನು ಸೃಷ್ಟಿಸುವುದು. ಇತ್ತೀಚಿನ ದಿನದಲ್ಲಿ ಇದು ಸಾಮಾನ್ಯವಾಗಿದೆ. ನಿಮ್ಮದೇ ಹೆಸರಿನ ಹೊಸ ಖಾತೆಯನ್ನು ತೆರೆದು ನಿಮ್ಮ ಫೋಟೋಗಳನ್ನು ಹಾಕಿ ನಿಮ್ಮ ಸ್ನೇಹಿತರಿಗೆ ರಿಕ್ವೆಸ್ಟ್ ಕಳಿಸಿ ಹಣ ಹಾಕುವಂತೆ ಕೇಳಿ ಮೋಸಗೊಳಿಸುವುದು. ಫೋನ್ ಪೇ/ಗೂಗಲ್ ಪೇ ನಂಬರ್ ಕಳಿಸಿ ತುರ್ತಾಗಿ ಹಣ ಕಳಿಸುವಂತೆ ಕೇಳಿದಾಗ ಹೆಚ್ಚಿನ ಮಂದಿ ಹಣ ಕಳಿಸಿಬಿಡುತ್ತಾರೆ.

ಇನ್ನು ಕೆಲವಷ್ಟು ಮಂದಿ ಹುಡುಗಿಯರ ಫೋಟೋಗಳನ್ನು ಹಾಕಿಕೊಂಡು ತಮ್ಮನ್ನು ತಾವು ಹುಡುಗಿಯಂತೆ ನಟಿಸಿ ಚಾಟ್ ಮಾಡಿ ಯುವಕರನ್ನು, ಪುರುಷರನ್ನು ಯಾಮಾರಿಸಿ ಹಣ ಅಥವಾ ಇನ್ನಿತರ ಮಾರ್ಗದಿಂದ ವಂಚನೆ ಮಾಡಿರುವ ಅನೇಕ ಪ್ರಕರಣಗಳು ನಡೆದಿವೆ. ಇನ್ನೂ ಕೆಲವರು ಅಸಭ್ಯವಾದ ಫೋಟೋಗಳನ್ನು ಕಳಿಸುವಂತೆ ಕೇಳಿ ನಂತರದಲ್ಲಿ ಅದನ್ನು ಇಟ್ಟುಕೊಂಡು ಬ್ಲಾಕ್ ಮೈಲ್ ಮಾಡುವುದು ಕೂಡ ಇತ್ತೀಚಿಗೆ ಬೆಳಕಿಗೆ ಬಂದಿವೆ.

ಮೇಲೆ ಹೇಳಿದ ಎರಡು ಬಗೆಯ ವಂಚಕರು ಸಮಾಜಕ್ಕೆ ಅಪಾಯಕಾರಿಯಾದರೆ, ಮೂರನೆದಾಗಿ ಕೆಲವಷ್ಟು ಮಂದಿ ನಕಲಿ ಖಾತೆಗಳನ್ನು ಸೃಷ್ಟಿಸಿರುತ್ತಾರೆ. ಆದರೆ ಇವರು ಯಾರ ಫ್ರೊಫೈಲ್ ಫೋಟೋಗಳನ್ನು ಬಳಸುವುದಿಲ್ಲ. ಯಾರ ಖಾತೆಯನ್ನು ನಕಲಿ/ಹ್ಯಾಕ್ ಮಾಡುವುದಿಲ್ಲ. ಯಾರ ಬಳಿಯೂ ಹಣ ಕೇಳುವುದೂ ಇಲ್ಲ. ಆದರೆ ಇವೆರು ತಮ್ಮ ಫೇಕ್ ಅಕೌಂಟ್ ಮೂಲಕ ರಾಜಕೀಯ ಅಥವಾ ತಮ್ಮ ವ್ಯವಹಾರದ ಪ್ರಮೋಶನ್ ಮಾಡುವ ಉದ್ದೇಶದಿಂದ ಮಾಡಿರುತ್ತಾರೆ.

ವಂಚಕರ ಬಗ್ಗೆ ಸೈಬರ್ ಪೊಲೀಸ್ ಹದ್ದಿನ ಕಣ್ಣು :

ಕಳೆದ ಅನೇಕ ತಿಂಗಳಿಂದ ನಿರಂತರವಾಗಿ ಈ ರೀತಿ ಫೇಕ್ ಅಕೌಂಟ್ ಮಾಡಿಕೊಂಡು ಯಾರ ಭಯವೂ ಇಲ್ಲದೆ ಮೋಸದ ಮಾರ್ಗದಲ್ಲಿ ಲಕ್ಷಾಂತರ ರೂಪಾಯಿ ಹಣ ಕೀಳುತ್ತಿರುವವರನ್ನು ಪತ್ತೆ ಹಚ್ಚುವಲ್ಲಿ ಸೈಬರ್ ಕ್ರೈಂ ಇಲಾಖೆ ತೀವ್ರ ನಿಗಾ ವಹಿಸಿದೆ. ಈ ಕುರಿತು ನಮ್ಮೊಂದಿಗೆ ಮಾತನಾಡಿದ ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಸವರಾಜ್, ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡುತ್ತಿರುವವರ ಹಾಗೂ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ವಂಚಿಸುತ್ತಿರುವವರ ಕುರಿತು ಇಲಾಖೆಯ ಗಮನದಲ್ಲಿದೆ. ಖಾತೆ ಹ್ಯಾಕ್ ಗೆ ಒಳಗಾದ ಬಳಕೆದಾರರು ಈ ಕುರಿತು ದೂರು ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ನಿಮಗೆ ಹಣದ ಬಹುಮಾನ ಬಂದಿದೆ ಎಂದು ಬರುವ ಮೆಸೇಜ್ ಗಳಲ್ಲಿನ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು. ಯಾರೇ ಓ.ಟಿ.ಪಿ ಕೇಳಿದರೆ ಯಾವುದೇ ಕಾರಣಕ್ಕೂ ನೀಡಬಾರದು. ಯಾರಾದರು ಈ ರೀತಿ ಹಣ ಕಳೆದುಕೊಂಡಿದ್ದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ, ಅವರ ಹಣವನ್ನು ಮೋಸವಾಗದ ರೀತಿ ತಡೆಯಬಹುದು. ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಈ ಕುರಿತು ಇಲಾಖೆಯಿಂದಲೂ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. - ಬಸವರಾಜ್, ಇನ್ಸ್ಪೆಕ್ಟರ್, ಸೆನ್ ಪೊಲೀಸ್ ಠಾಣೆ, ಚಿಕ್ಕಮಗಳೂರು

ಮುನ್ನಚ್ಚರಿಕೆ ವಹಿಸಬೇಕಾದ ಅಂಶಗಳೇನು?

1) ಸುರಕ್ಷಿತವಾದ ಮತ್ತು ಸುಲಭವಲ್ಲದ ಪಾಸ್ ವರ್ಡ್ ಉಪಯೋಗಿಸಬೇಕು. ಉದಾ: digit%46369&#hydh

2) ಸಾಮಾಜಿಕ ಜಾಲತಾಣ ಅಥವಾ ಯಾವುದೇ ರೀತಿಯಲ್ಲಾದರೂ ನಿಮಗೆ ಬರುವ ಅಫರ್ ಗಳು ಅಥವಾ ಇನ್ನಿತರ ಅಸುರಕ್ಷಿತ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು. ಈ ಮೂಲಕ ವಂಚಕರು ನಿಮ್ಮ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಾರೆ.

3) 2 Factor Authentication ಬಳಸಿ ನಿಮ್ಮ ಈ ಮೇಲ್ ವಿಳಾಸವನ್ನು ಅದರೊಂದಿಗೆ ನೀಡಿದ್ದಲ್ಲಿ, ಒಂದು ವೇಳೆ ನಿಮ್ಮ ಖಾತೆಯನ್ನು ಯಾರಾದರು ಬಳಸಲು ಪ್ರಯತ್ನಿಸಿದರೆ ನಿಮಗೆ ಮೈಲ್ ಮೂಲಕ ನೋಟಿಫಿಕೇಶನ್ ಬರುತ್ತದೆ.

4) ಬೇರೆಯವರ ಮೊಬೈಲ್ ಅಥವಾ ಸೈಬರ್ ಕೆಫೆ/ ಕಛೇರಿ ಮುಂತಾದ ಸ್ಥಳದಲ್ಲಿ ನಿಮ್ಮ ಖಾತೆಗಳನ್ನು ಲಾಗೌಟ್ ಮಾಡಬೇಕು

5) ಅಪರಿಚಿತರನ್ನು ಫ್ರೆಂಡ್/ ಫಾಲೋವರ್ ಮಾಡಿಕೊಳ್ಳಬಾರದು. ಮೊಬೈಲ್ ನಂಬರ್, ಈ ಮೈಲ್ ವಿಳಾಸವನ್ನು ಖಾಸಗಿಯಾಗಿ ಇಡಬೇಕು.

ಪ್ರತಿನಿತ್ಯ ಕನಿಷ್ಟ ಒಂದು ಬಾರಿಯಾದರೂ ಬಹುತೇಕರು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದ ಬಳಕೆ ಮಾಡುತ್ತಾರೆ‌. ಆದರೆ ಅನೇಕ ಬಳಕೆದಾರರಿಗೆ ಅದರ ಸುರಕ್ಷತೆಯ ಕುರಿತು ಅರಿವಿರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ‘ಆನ್ ಲೈನ್ ಕಳ್ಳರು’ ಲಕ್ಷಾಂತರ ರೂ. ವಂಚಿಸುತ್ತಿದ್ದಾರೆ. ಇನ್ನಾದರೂ ಈ ಕುರಿತು ಜನರು ಎಚ್ಚೆತ್ತುಕೊಳ್ಳಬೇಕಿದೆ.