ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಜನರು ರಸ್ತೆಯ ಅಕ್ಕಪಕ್ಕದಲ್ಲಿ ಬೇಕಾಬಿಟ್ಟಿಯಾಗಿ ನಿರಾತಂಕವಾಗಿ ಮನೆಯಲ್ಲಿ ಉಪಯೋಗಿಸಿದ ವಸ್ತುಗಳ ಕಸವನ್ನು, ಮದ್ಯದ ಬಾಟಲಿಗಳನ್ನು ಎಸೆದು ಮಾರಕ ಕಾಯಿಲೆಗಳನ್ನು ತಾವಾಗಿಯೇ ಎಳೆದುಕೊಳ್ಳುವ ರೀತಿಯ ಬೇಜವಾಬ್ದಾರಿಯ ಕೆಲಸವನ್ನು ನಡೆಸುತ್ತಿರುವುದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಕಂಡುಬಂದಿದೆ.
ಕೊಪ್ಪದಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆಯ ಸ್ಥಳವಾದ ಹಾಗೂ ಕೊಪ್ಪದ ರಾಘವೇಂದ್ರ ನಗರಕ್ಕೂ ತೆರಳುವ ತಾಲೂಕು ಕಛೇರಿಯಿಂದ ಕೊಂಚ ಅಂತರದ ಹರಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯ ಅಕ್ಕಪಕ್ಕದಲ್ಲಿ ಜನ ಬೇಕಾಬಿಟ್ಟಿಯಾಗಿ ತಾವು ಉಪಯೋಗಿಸಿ ಬಿಟ್ಟಂತಹ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಅನಾಗರೀಕರಂತೆ ವರ್ತಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಕಸವನ್ನು ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಇನ್ನುಳಿದ ತ್ಯಾಜ್ಯವನ್ನು ಎಸೆಯುತ್ತಿರುವ ಪರಿಣಾಮ ಕೆಲ ಭಾಗದಲ್ಲಿ ವಿಪರೀತ ವಾಸನೆ ಉಂಟಾಗಿದ್ದು ಈ ಸಂಬಂಧ ಯಾವುದೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ : ಉಕ್ಕಿ ಹರಿಯುತ್ತಿದ್ದ ಹಳ್ಳದ ಸೇತುವೆ ಮೇಲೆ ಯುವಕನ ದುಸ್ಸಾಹಸ ;ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಿಸಿದ ಸ್ಥಳೀಯರು
ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ಕಸವನ್ನು ಎಸೆದು ಹೋಗುತ್ತಾರೆ, ಅರಿವು ನೀಡುವ ರೀತಿಯಲ್ಲಿ ಬೋರ್ಡ್ ನ್ನೂ ಸಹ ಹಾಕಲಾಗಿದ್ದು ಈ ಮುಂದಿನ ದಿನಗಳಲ್ಲಿ ಈ ಕುರಿತಾಗಿ ಕ್ರಮ ಕೈಗೊಳ್ಳಲಾಗುವುದು - ಕರಿಯಪ್ಪ, PDO ಹರಂದೂರು, ಕೊಪ್ಪ ತಾಲೂಕು
ಸರ್ಕಾರ ಸ್ವಚ್ಚ ಭಾರತದ ಪರಿಕಲ್ಪನೆ ಹಾಗೂ ಅನುಷ್ಠಾನದ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಜನರು ಅದನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ತಮ್ಮ ಮನೆ ಆವರಣ ಮಾತ್ರ ಶುಚಿಯಾಗಿರಲಿ ಎಂಬಂತೆ ವರ್ತನೆ ಮಾಡುತ್ತಿರುವುದು ಸ್ವಚ್ಚ ಭಾರತದ ಪರಿಕಲ್ಪನೆಗೆ ಹಿನ್ನಡೆಯಾದಂತೆ ಭಾಸವಾಗುತ್ತದೆ.
ಜನರು ವಾಹನಗಳನ್ನು ನಿಲ್ಲಿಸಿ ಈ ಭಾಗದಲ್ಲಿ ಕಸ ಎಸೆಯುತ್ತಾರೆ. ಮದ್ಯದ ಬಾಟಲಿಗಳು ವಿಪರೀತವಾಗಿ ಈ ಸ್ಥಳದಲ್ಲಿ ಬಿದ್ದಿದ್ದು ಇದೇ ರೀತಿಯಾಗಿ ಕಸ ಎಸೆಯುವುದು ಮುಂದುವರೆದಲ್ಲಿ ರೋಗಗಳು ಹೆಚ್ಚಾಗುವ ಭೀತಿಯಿದೆ, ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ - ದೇವದತ್, ಸ್ಥಳೀಯರು
ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಈ ಕುರಿತಾಗಿ ಗಮನಹರಿಸಿ ಕಸವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಪ್ರಸ್ತುತ ರಸ್ತೆಯ ಅಕ್ಕಪಕ್ಕದಲ್ಲಿ ಗಬ್ಬೆಬ್ಬಿಸಿರುವ ಸ್ಥಳವನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ.

.jpeg)



0 Comments