ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಹಳ್ಳದಲ್ಲಿ ಕಾರೊಂದು ಕೊಚ್ಚಿ ಹೋದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ದುರ್ಮರಣವನ್ನಪ್ಪಿರುವ ಘಟನೆ ಸಂಭವಿಸಿದೆ. 

ಇದನ್ನೂ ಓದಿ : ಮಲೆನಾಡಿನಲ್ಲಿ ನಿಲ್ಲದ ಆನೆ ದಾಳಿ; ನೂರಕ್ಕೂ ಅಧಿಕ ಅಡಿಕೆ ಮರಗಳು ನಾಶ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾತ್ಕೊಳ ಬಳಿಯಲ್ಲಿ ಈ ದುರಂತ ಸಂಭವಿಸಿದ್ದು, ಕಾರು ಕೊಚ್ಚಿ ಹೋಗುವ ಸಮಯದಲ್ಲಿ ಕಾರಿನೊಳಗಿದ್ದ 51 ವರ್ಷ ಪ್ರಾಯದ ಪ್ರಸನ್ನ ಎಂಬುವವರು ದುರ್ಮರಣವನ್ನಪ್ಪಿದ್ದಾರೆ.  ಸಂಬಂಧಿಕರ ಮನೆಗೆ ತೆರಳುವ ವೇಳೆಯಲ್ಲಿ ಕಾರು ಕೊಚ್ಚಿ ಹೋಗಿದೆ.


ಅರಿಶಿಣಗೆರೆ ಪ್ರಸನ್ನ ಈ ಅವಘಡದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನಾ ಸಂಬಂಧ  ಸಂಬಂಧಿಕರು ಹಾಗೂ ಸ್ಥಳೀಯರು  ತೀವ್ರ ಬೇಸರ ಹಾಗೂ ದುಃಖವನ್ನು ವ್ಯಕ್ತಪಡಿಸಿದ್ದಾರೆ. 

ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಹಳ್ಳ ಕೊಳ್ಳ ನದಿಗಳು ಉಕ್ಕಿಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಳ್ಳದ ನೀರಿಗೆ ಸಿಲುಕಿ ಕಾರು ಕೊಚ್ಚಿ ಹೋಗಿರುವ ಎರಡನೇ ದುರಂತ ಇದಾಗಿದ್ದು ಘಟನಾ ಸ್ಥಳಕ್ಕೆ ನರಸಿಂಹರಾಜಪುರ ಪೊಲೀಸರು ಭೇಟಿನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು

ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ :

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊರವಲಯದಲ್ಲಿ ಮಂಗಳೂರಿನಿಂದ ಕೊಪ್ಪದ ಕಡೆಗೆ ತೆರಳುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. 


ಶೃಂಗೇರಿ ಹೊರವಲಯದ ದುರ್ಗಾದೇವಸ್ಥಾನದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ  ಈ ರಸ್ತೆ ಅವಘಡ ಸಂಭವಿಸಿದ್ದು ವಾಹನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಸ್ಥಳೀಯರು ಹಾಗೂ ಇತರೆ ವಾಹನಗಳ ಪ್ರಯಾಣಿಕರು ಕಾರನ್ನು ಎತ್ತುವಲ್ಲಿ ಸಹಕರಿಸಿದ್ದಾರೆ. ಕಡಿದಾದ ತಿರುವುಗಳನ್ನು ಹೊಂದಿರುವ ಮಲೆನಾಡು ಭಾಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ನಿಧಾನಗತಿಯಲ್ಲಿ ವಾಹನಗಳ ಚಾಲನೆ ನಡೆಸಬೇಕಿದೆ.