ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾರ್ಗೊಡು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಆನೆ ದಾಳಿಗೆ ಬಲಿಯಾದ ವ್ಯಕ್ತಿಯನ್ನು ಆನಂದ್ ದೇವಾಡಿಗ 52 ಎಂದು ಗುರುತಿಸಲಾಗಿದೆ.
ವ್ಯಕ್ತಿಯ ಮೇಲೆ ದಾಳಿ ನಡೆಸಿರುವ ಆನೆ ಆತನನ್ನು ಸುಮಾರು ಅರ್ಧ ಕಿಲೋಮೀಟರ್ ದೂರಕ್ಕೆ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ. ಆನೆ ದಾಳಿಗೆ ಭೀಕರವಾಗಿ ಆನಂದ್ ದೇವಾಡಿಗ ಅವರು ಮೃತಪಟ್ಟಿದ್ದು, ಘಟನಾ ಸಂಬಂಧ ಸ್ಥಳೀಯರು ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೌಡಾಯಿಸಿದ್ದು ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಮನೆಯವರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಆನೆ ದಾಳಿ ನಡೆಯದಂತೆ ಸೂಕ್ತವಾದ ಕ್ರಮಗಳನ್ನು ಈ ಕುರಿತಾಗಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಮೂಡಿಗೆರೆಯ ದೇವರಮನೆ ಸಮೀಪ ಹಿಂಡು ಹಿಂಡಾಗಿ ಆನೆಗಳು ಅಡಿಕೆ ತೋಟದಲ್ಲಿ ಪ್ರತ್ಯಕ್ಷವಾಗಿದ್ದವು. ಅಪಾರ ಪ್ರಮಾಣದ ಬೆಳೆನಾಶ ಹಾಗೂ ಓಮಿನಿ ಕಾರೊಂದನ್ನು ಸಹ ಆನೆಗಳು ಪಲ್ಟಿ ಮಾಡಿದ್ದವು. ಕೃಷಿಯನ್ನು ಜೀವನಾಧಾರವಾಗಿಟ್ಟುಕೊಂಡು ಕಾರ್ಯ ನಿರ್ವಹಿಸುವ ಈ ಭಾಗದ ಕೃಷಿಕರಿಗೆ ಆನೆದಾಳಿಯಿಂದ ತೀವ್ರತರವಾದ ಸಂಕಷ್ಟಗಳು ಎದುರಾಗಿದ್ದು, ತೋಟ ಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿಕರಲ್ಲಿ ಹಾಗೂ ಕಾರ್ಮಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಆನೆದಾಳಿಯಿಂದ ಯಾವುದೇ ಅಪಾಯಗಳು ಸಂಭವಿಸಂದಂತೆ ಆನೆದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.
- ತನು ಕೊಟ್ಟಿಗೆಹಾರ, ವರದಿಗಾರರು






0 Comments