ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನ ಪಟ್ಟಣದ ಬಿಜೆಪಿ ಮುಖಂಡರೋರ್ವರ ಮನೆಗೆ ಹಾಡಹಗಲೇ ದುಷ್ಕರ್ಮಿಗಳು ನುಗ್ಗಿ ದರೋಡೆ ಯತ್ನಿಸಿದ ಘಟನೆ ನಡೆದಿದೆ.

ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್ ಹಿಡಿದುಕೊಂಡು ಕೆ.ಆರ್.ಪುರಂನ  ಬಿಜೆಪಿ ನಾಯಕರಾದ ಡಿ.ಪಿ.ಪ್ರಕಾಶ್‌ ಎಂಬುವರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದಾರೆ.


ಸೋಮವಾರ ಮದ್ಯಾಹ್ನ ಪ್ರಕಾಶ್ ಮನೆಗೆ ಬಂದ ಇಬ್ಬರು ದುಷ್ಕರ್ಮಿಗಳು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆ ವೇಳೆ ಮನೆಯಲ್ಲಿ ಪ್ರಕಾಶ್ ತಾಯಿ ರಂಗಮ್ಮ ಅವರು ಮಾತ್ರ ಇದ್ದು ಬಾಗಿಲು ತೆರೆದಿದ್ದಾರೆ ಈ ವೇಳೆ ಇದು ಪ್ರಕಾಶ್ ಅವರ ಮನೆಯೆ ಎಂದು ಪ್ರಶ್ನಿಸಿದ್ದಾರೆ. ಅವರ ಹೆಸರಿಗೆ ಒಂದು ಪಾರ್ಸೆಲ್ ಇದೆ ಎಂದು ರಂಗಮ್ಮ ಅವರ ಕೈಗೆ ಪಾರ್ಸೆಲ್ ಕವರ್ ಒಂದನ್ನು ನೀಡಿದ್ದಾರೆ.

ವೃದ್ಧೆ ರಂಗಮ್ಮ ಕವರ್ ಪಡೆದು ಮನೆಯೊಳಗೆ ಇಡುತ್ತಿದ್ದಂತೆ ಓರ್ವ ಕಿರಾತಕ ವೃದ್ದೆಯ ಕುತ್ತಿಗೆ ಹಿಡಿದು ಹಣೆಗೆ ಪಿಸ್ತೂಲ್ ಇಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ರಂಗಮ್ಮ ಜೋರಾಗಿ ಕಿರುಚಿಕೊಂಡಿದ್ದಾರೆ. ಯಾರಾದರೂ ಬರುತ್ತಾರೆಂದು ಗಾಬರಿಗೊಂಡ ದುಷ್ಕರ್ಮಿಗಳು ತಕ್ಷಣವೇ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.