ಚಿಕ್ಕಮಗಳೂರು :

ಉಚಿತವಾಗಿ ಧ್ವಜಗಳನ್ನು ವಿತರಿಸಿದ ಗ್ರಾಮ ಪಂಚಾಯತ್ ಸದಸ್ಯ :

ಶೃಂಗೇರಿ : ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ಘೋಷಿಸಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಇಂದು ಕಾವಡಿ ಗ್ರಾಮದ ಮನೆಗಳಿಗೆ ತ್ರಿವರ್ಣ ಧ್ವಜವನ್ನು ಉಚಿತವಾಗಿ ತಲುಪಿಸುವ ಕೆಲಸವನ್ನು ಜನಪ್ರತಿನಿಧಿಗಳು ನಡೆಸಿದರು. ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಹಂಚಲಿ ರವರು ಕಾವಡಿ ಗ್ರಾಮದ ಮನೆಗಳಿಗೆ ಖಾದಿವಸ್ತ್ರದ ತ್ರಿವರ್ಣ ಧ್ವಜವನ್ನು ಉಚಿತವಾಗಿ ವಿತರಿಸಿ ಅಮೃತ ಮಹೋತ್ಸವದ ಸಡಗರದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಹಾಗೂ ದೇಶಭಕ್ತಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿಕೊಳ್ಳುವಂತೆ ಕೋರಿದರು. 

ಮೇಗೂರು ರಸ್ತೆ ಕುಸಿತ :

ಕೊಪ್ಪ : ನಿನ್ನೆ ಸಂಜೆಯ ವೇಳೆಗೆ ಬಿರುಕು ಮೂಡಿದ್ದ ಮೇಗೂರು ಸಂಪರ್ಕಿಸುವ ರಸ್ತೆಯು ಇಂದು ಭಾರೀ ಮಟ್ಟದಲ್ಲಿ ಕುಸಿತಗೊಂಡಿದೆ. ಒಂದೆಡೆ ಮಳೆಯು ನಿರಂತರವಾಗಿ ಸುರಿಯುತ್ತಿದ್ದು ಮೇಗೂರು ಭಾಗದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸಂಜೆಯ ವೇಳೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೆಗ್ಗಾರುಕುಡಿಗೆ ರಸ್ತೆಯ ತಡೆಗೋಡೆ ಅಕ್ಕಪಕ್ಕದಲ್ಲಿದ್ದ ಮಣ್ಣು ಕುಸಿದಿದ್ದು, ತಡೆಗೋಡೆ ಸಹ ಕುಸಿತಗೊಳ್ಳುವ ಭೀತಿ ಇತ್ತು ಹಾಗೂ ರಸ್ತೆಯಲ್ಲೂ ಸಹ ಬಿರುಕು ಮೂಡಿತ್ತು. ಆದರೆ ಇಂದು ಸಂಪೂರ್ಣವಾಗಿ ರಸ್ತೆ ಕುಸಿದಿದ್ದು ಜನರಲ್ಲಿ ಆತಂಕ ಮೂಡಿಸಿದೆ. ರಸ್ತೆಯ ಪಕ್ಕದ ಧರೆಯ ಮಣ್ಣು ಸಹ ಕುಸಿಯುತ್ತಲೇ ಇದ್ದು ಇನ್ನೂ ಮಳೆಯಾಗುತ್ತಲೇ ಇರುವುದರಿಂದ ಜನರು ಆತಂಕದಲ್ಲಿದ್ದು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ. ಸ್ಥಳಕ್ಕಾಗಮಿಸಿದ ಇಂಜಿನಿಯರ್ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದು, ಅತೀ ಶೀಘ್ರವಾಗಿ ರಸ್ತೆ ವ್ಯವಸ್ಥೆಯನ್ನು ಸರಿಗೊಳಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಆನೆದಾಳಿಗೆ ಒಮಿನಿ ಕಾರ್ ಪಲ್ಟಿ ; ಆತಂಕದಲ್ಲಿ ಜನರು :

ಮೂಡಿಗೆರೆ : ಮಲೆನಾಡು ಭಾಗದಲ್ಲಿ ರೈತನ ಬೆಳೆಗಳಿಗೆ ಒಂದೆಡೆ ಮಾರಕ ರೋಗಗಳು ಭಾದಿಸುತ್ತಿದ್ದರೆ ಇನ್ನೊಂದಡೆ ಫಸಲು ಕೈಸೇರುವ ಸಮಯದಲ್ಲಿ ಆನೆಗಳು ದಾಳಿ ನಡೆಸಿ ರೈತನ ಶ್ರಮವನ್ನು ವ್ಯರ್ಥಗೊಳಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರ ಮನೆಯಲ್ಲಿ ಹಿಂಡಾಗಿ ಆನೆಗಳು ದಾಳಿ ನಡೆಸಲು ಆರಂಭಿಸಿದೆ. ಗುಂಪಿನಲ್ಲಿ ಪ್ರತ್ಯಕ್ಷವಾಗಿರುವ ಕಾಡಾನೆಗಳು ಒಮಿನಿ ಕಾರೊಂದನ್ನು ಪಲ್ಟಿ ಮಾಡಿದೆ. ಅದೃಷ್ಟವಶಾತ್ ಎಂಬಂತೆ ಕಾರಿನಲ್ಲಿದ್ದವರು ಪ್ರಾಣಪಾಯಗಳಿಂದ ಬಚಾವಾಗಿದ್ದು ಸಣ್ಣ ಪುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ. ಆನೆಗಳು ರಾಜಾರೋಷವಾಗಿ ಕಾಫಿ, ಅಡಿಕೆ ತೋಟಗಳಲ್ಲಿ ಓಡಾಡುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಶಿವಮೊಗ್ಗ :

ಕೈಚಳಕ ತೋರಿದ ಕಳ್ಳರು :

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಟಿಹೆಚ್‌ಓ ಮೋಹನ್ ಅವರು ಕೆಲಸದ ನಿಮಿತ್ತ ವರದಹಳ್ಳಿ ರಸ್ತೆಯಲ್ಲಿರುವ ಮನೆಗೆ ಬೀಗ ಹಾಕಿಕೊಂಡು ಶಿವಮೊಗ್ಗಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದ ಸಮಯದಲ್ಲಿ ಕಳ್ಳರು,ಕೈಚಳಕ ತೋರಿದ್ದಾರೆ. ಮನೆಯ ಹಿಂಬಾಗಿಲು ಮುರಿದು, ಒಳ ನುಗ್ಗಿ, ಕೈಚಳಕ ಮೆರೆದಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಮೋಹನ್ ಮನೆಯಲ್ಲಿದ್ದಂತ 100 ಗ್ರಾಂ ಚಿನ್ನಾಭರಣ ಹಾಗೂ 80 ಸಾವಿರ ರೂ ನಗದು ಕಳ್ಳತನ ಮಾಡಿ, ಪರಾರಿಯಾಗಿದ್ದಾರೆ. ಮೋಹನ್ ಶಿವಮೊಗ್ಗದಿಂದ ಮರಳಿ ಮನೆಗೆ ಹಿಂದಿರುಗಿದಾಗ, ಈ ವಿಷಯ ತಿಳಿದು ಬಂದಿದೆ. ಈ ಸಂಬಂಧ ಸಾಗರ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. 

ಗೃಹ ಸಚಿವರಿಗೆ ರಾಖಿ ಕಟ್ಟಿದ ಕಾಲೇಜು ವಿದ್ಯಾರ್ಥಿಗಳು :

ಗೃಹ ಸಚಿವ ಆರಗಜ್ಞಾನೇಂದ್ರ ಅವರಿಗೆ ತೀರ್ಥಹಳ್ಳಿ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳು ರಕ್ಷಾ ಬಂಧನದ ಅಂಗವಾಗಿ ಇಂದು ರಾಖಿಯನ್ನು ಕಟ್ಟಿದರು. ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನ ಸದಸ್ಯರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಅನೇಕ ಸಂಖ್ಯೆಯಲ್ಲಿ ನಾ ಮುಂದು ತಾ ಮುಂದು ಎಂದು ಗೃಹಸಚಿವರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.


ಕೊಡಗು : 

ಮರಬಿದ್ದು ಕಾರ್ಮಿಕನ ಸಾವು : 

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮರಬಿದ್ದು ಕಾರ್ಮಿಕ ಸಾವನ್ನಪ್ಪಿರುವ ದುರ್ಘಟನೆ ಕೊಡಗಿನಲ್ಲಿ ಸಂಭವಿಸಿದೆ. ಕೊಡಗು ಜಿಲ್ಲೆಯ ಅಮ್ಮತ್ತಿ ಹೊಸಕೋಟೆಯ ಹಿಲ್ ಸೈಡ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮರ ಬಿದ್ದ ಪರಿಣಾಮ ಕಾರ್ಮಿಕ ಪ್ರಕಾಶ್ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತ ಕಾರ್ಮಿಕ ಪ್ರಕಾಶ್ ಅವರು ಕಕ್ಕಟ್ ಕಾಡು ನಿವಾಸಿಯಾಗಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಈ ಅವಘಡದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಇನ್ನೋರ್ವ ಕಾರ್ಮಿಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಮೃತರನ್ನು ಕಳೆದುಕೊಂಡಿರುವ ಕುಟುಂಬವರ್ಗದವರು ಅತೀವವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಮಳೆ ಕಡಿಮೆಯಾದರೂ ನಿಲ್ಲದ ಹಾನಿ, ಭೂಕುಸಿತ :

ಕೊಡಗಿನ ಮದೆನಾಡು ಸಮೀಪ ಬಿರುಕು ಬಿಟ್ಟ ಗುಡ್ಡದ ಮಗ್ಗುಲಿನ ಮಡಿಕೇರಿ-ಮಂಗಳೂರು ರಸ್ತೆಯ ಮತ್ತೊಂದು ತಡೆಗೋಡೆಯವರೆಗೆ ರಸ್ತೆ ಅಭಿವೃದ್ಧಿ ಕಾರ್ಯವನ್ನು ಬುಧವಾರ ರಾತ್ರಿ ನಡೆಸಲಾಗಿದ್ದರೂ ಗುಡ್ಡದ ಮಣ್ಣನ್ನು ತೆರವುಗೊಳಿಸಬೇಕೇ, ಬೇಡವೇ, ತೆರವುಗೊಳಿಸುವುದರಿಂದ ಆಗುವ ಪರಿಣಾಮಗಳನ್ನು ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಯಾರಲ್ಲೂ ಖಚಿತ ಅಭಿಪ್ರಾಯಗಳಿಲ್ಲದ ಕಾರಣ ತಜ್ಞರ ಹಾಗೂ ಅನುಭವ ಹೊಂದಿದವರ ತಂಡವನ್ನು ಸ್ಥಳಪರಿಶೀಲನೆಗಾಗಿ ನಿಗದಿಪಡಿಸಿ ನಂತರದಲ್ಲಿ ಈ ಕುರಿತಾಗಿ ಕ್ರಮಕ್ಕೆ ಅನುವು ಮಾಡಲು ಶಿಫಾರಸ್ಸಾಗಿದೆ. ಒಂದೆಡೆ ಬಾರಿ ಮಳೆಯಿಂದಾಗಿ ಕಂಗಾಲಾಗಿದ್ದ ಜನ ಮಳೆ ನಿಂತರು ಹಾನಿ ಪ್ರಮಾಣ ತಗ್ಗದೇ ಇರುವುದನ್ನು ಕಂಡು ತೀವ್ರ ಆತಂಕಕ್ಕೊಳಗಾಗಿದ್ದಾರೆ.