ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸಾಲು ಸಾಲು ರಜೆಯಿರುವ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರಿನಾದ್ಯಂತ ಪ್ರವಾಸಿಗರ ದಂಡೇ ಹರಿದು ಬಂದಿದೆ.
ಇದನ್ನೂ ಓದಿ : ಬಡತನವಿದ್ದರೂ ರಾಷ್ಟ್ರಭಕ್ತಿಯ ವಿಚಾರದಲ್ಲಿ ಹೃದಯ ಶ್ರೀಮಂತಿಕೆ ಮೆರೆದ ಕಾಫಿನಾಡಿನ ಕುರಿಗಾಯಿ ಕುಟುಂಬವರ್ಗ
ಆಗಸ್ಟ್ 13ನೇ ತಾರೀಕು ಎರಡನೇ ಶನಿವಾರ ಇಂದು ಭಾನುವಾರ ಹಾಗೂ ನಾಳೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಾಲು ಸಾಲು ರಜೆಗಳಿರುವ ನಿಮಿತ್ತ ರಾಜ್ಯದ ಅನೇಕ ಮೂಲೆ ಮೂಲೆಗಳಿಂದ ಪ್ರವಾಸಿಗರು ಪ್ರಾಕೃತಿಕ ಸೊಬಗನ್ನು ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಮಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಪ್ರಕೃತಿ ಮಾತೆಯ ರಮಣೀಯ ಸ್ಥಳವಾಗಿರುವ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಶ್ರೇಣಿಯನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವ ಕಾರಣ ಈ ಮಾರ್ಗದ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ನಿನ್ನೆ ಒಂದೇ ದಿನ ಸಾವಿರಕ್ಕೂ ಅಧಿಕ ವಾಹನಗಳು ಮುಳ್ಳಯ್ಯನ ಗಿರಿ ಭಾಗಕ್ಕೆ ಆಗಮಿಸಿದ್ದು ಕೈಮರ ಚೆಕ್ ಪೋಸ್ಟ್ ಬಳಿ ಕಿಲೋಮೀಟರ್ ಗಟ್ಟಲೆ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಂದು ಬೆಳಗ್ಗೆ 6 ರಿಂದ 12 ಗಂಟೆಯ ಒಳಗಿನ ಸಮಯದಲ್ಲಿ ಸಾವಿರಕ್ಕೂ ಅಧಿಕ ವಾಹನಗಳು ಬಂದಿದ್ದು ಮುಳ್ಳಯ್ಯನಗಿರಿ ಸುತ್ತಮುತ್ತಲಿನ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಮುಳ್ಳಯ್ಯನಗಿರಿ ಸಮೀಪಿಸುವ ಮೊದಲಿಗೆ ಸಿಗುವ ಕೈಮರ ಚೆಕ್ ಪೋಸ್ಟ್ ಬಳಿಯೂ ಸಾಲುಗಟ್ಟಿ ವಾಹನಗಳು ನಿಂತಿದ್ದು ಈಗಾಗಲೇ ಪೊಲೀಸರು 500ಕ್ಕೂ ಅಧಿಕ ವಾಹನಗಳನ್ನು ವಾಪಸ್ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಅತಿಯಾದ ಮೋಜು ಮಸ್ತಿಗಳನ್ನು ಮಾಡಿ ಯಾವುದೇ ರೀತಿಯ ಅಪಾಯಗಳಿಗೆ ತುತ್ತಾಗದಂತೆ, ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕು. ಬೇಡದ ಕಸ, ಪ್ಲಾಸ್ಟಿಕ್, ಇನ್ನಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕದೇ ಪ್ರಕೃತಿಗೆ ಯಾವುದೇ ರೀತಿಯ ಹಾನಿಯನ್ನುಂಟುಮಾಡದೆ ಪ್ರಾಕೃತಿಕ ಸೌಂದರ್ಯವನ್ನು ಸವಿಯಬೇಕು.






0 Comments