ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಹಾಡಹಗಲೇ ಯಾರದೇ ಭಯವಿಲ್ಲದ ರೀತಿಯಲ್ಲಿ ಕಿಡಿಗೇಡಿಗಳು ಮನೆಗೆ ಬೆಂಕಿ ಹಚ್ಚಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳುವಳ್ಳಿ ಗ್ರಾಮದ ಕೋರನಕುಡಿಗೆ ಸಂತೋಷ್ ಬಿನ್ ಮಹಾದೇವಪ್ಪ ಎಂಬುವವರ ಮನೆಗೆ ದುಷ್ಕರ್ಮಿಗಳು ಇಂದು ಮಧ್ಯಾಹ್ನ 12 ಗಂಟೆಗೆ ವೇಳೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಇದೇ ಗ್ರಾಮದ ಕಿರಣ್ ಆಚಾರ್ಯ ಎಂಬುವವರ ಬೈಕ್ ಗೆ ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟು ಕರಕಲು ಮಾಡಿದ್ದ ದುಷ್ಕರ್ಮಿಗಳು ಘಟನೆ ಮಾಸುವ ಮುನ್ನವೇ ಯಾರ ಭಯವೂ ಇಲ್ಲದೆ ಪಕ್ಕದ ಇನ್ನೊಂದು ಮನೆಗೆ ಬೆಂಕಿ ಹಚ್ಚಿದ್ದಾರೆ.
ಮನೆಯ ಹಿಂಭಾಗಕ್ಕೆ ದುಷ್ಕರ್ಮಿಗಳು ಹಚ್ಚಿದ್ದ ಬೆಂಕಿ ಹೊತ್ತಿ ಉರಿಯುತ್ತಿದ್ದುದ್ದನ್ನು ಕಂಡ ಮನೆಯವರು ಹಾಗೂ ಸ್ಥಳೀಯರು ಕೂಡಲೇ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯ ತೀವ್ರತೆಗೆ ಮನೆಯ ಹಿಂಭಾಗದಲ್ಲಿದ್ದ ವಸ್ತುಗಳು ನಾಶವಾಗಿದ್ದು ಮನೆಯವರು ತೀವ್ರ ಆತಂಕಕ್ಕೊಳಾಗಾಗಿದ್ದಾರೆ.
ಈ ಘಟನೆಯಿಂದ ಗ್ರಾಮಸ್ಥರೂ ಸಹ ತೀವ್ರವಾದ ಆತಂಕವನ್ನು ವ್ಯಕ್ತಪಡಿಸಿದ್ದು ಹದಿನೈದು ದಿನಗಳ ಅಂತರದೊಳಗೆ ಈ ರೀತಿಯ ಘಟನೆಗಳು ಸಂಭವಿಸುತ್ತಿದ್ದು ರಕ್ಷಣೆ ಇಲ್ಲದಂತಾಗಿದೆ. ಅಧಿಕಾರಿಗಳು ಈ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದು ಶಿಕ್ಷೆಗೆ ಗುರಿಪಡಿಸಬೇಕೆಂದು ಶೃಂಗೇರಿ ಠಾಣೆಯ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಘಟನಾ ಸಂಬಂಧ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ಈ ಕುರಿತಾದ ಸಂಪೂರ್ಣ ಮಾಹಿತಿಗಳು ಹೊರಬೀಳಲಿದೆ.

%20-%20Copy.jpeg)



0 Comments