ಚಿಕ್ಕಮಗಳೂರು :

ಅಡಿಕೆ ಆಮದಿಗೆ ನಿಷೇಧ ಹೇರುವಂತೆ ಮನವಿ :

ವಿದೇಶಗಳಿಂದ ಆಮದಾಗುತ್ತಿರುವ ಅಡಿಕೆಗೆ ನಿರ್ಬಂಧ ಹೇರಬೇಕೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ನೇತೃತ್ವದಲ್ಲಿ ಇಂದು ಸಮಿತಿಯು ಸಚಿವರನ್ನು ಕೋರಿತು. ಇಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್, ಪಿಯೂಷ್ ಗೋಯಲ್, ನರೇಂದ್ರಸಿಂಗ್ ತೋಮರ್, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ ಅವರನ್ನು ಭೇಟಿಯಾಗಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಮಲೆನಾಡಿನ ರೈತರುಗಳ ಹಾಗೂ ಅಡಿಕೆ ಬೆಳೆಗಾರರ ಪರವಾಗಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಿ. ಎನ್. ಜೀವರಾಜ್ ಮತ್ತು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಅವರು ಕೇಂದ್ರ ಸರ್ಕಾರದ ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡಿದೆ. 

ದಂಪತಿಗಳಿಗೆ ಸನ್ಮಾನ :

ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಕಳಸ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ದಂಪತಿಗಳನ್ನು ಪದಾಧಿಕಾರಿಗಳು ಸನ್ಮಾನಿಸಿದರು. ಮುನ್ನೂರುಪಾಲಿನ ಶ್ರೀ ಮಹಾಲಕ್ಷ್ಮೀ ಮತ್ತು ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಎ.ಟಿ.ವಿಜಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನಾಳೆ ವಿದ್ಯುತ್ ವ್ಯತ್ಯಯ : 

ನಾಳೆ ದಿನಾಂಕ 18.08.22 ರ ಗುರುವಾರ ವಿದ್ಯುತ್ ಗೆ ಸಂಬಂಧಿಸಿದ ಕೆಲ ಅಗತ್ಯ ಕಾರ್ಯಗಳನ್ನು ನಡೆಸಬೇಕಿರುವುದರಿಂದ ಹಾಗೂ ತ್ರೈ ಮಾಸಿಕ ವಿದ್ಯುತ್ ನಿರ್ವಹಣೆಯ ಸಲುವಾಗಿ ಬೆಳಗ್ಗೆ 08 ರಿಂದ ಸಂಜೆ 06 ರ ವರೆಗೆ ಬಾಳೆಹೊನ್ನೂರಿನಿಂದ ಹೊರಹೊಮ್ಮುವ ಶೃಂಗೇರಿ, ಜಯಪುರದ ಎಲ್ಲಾ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. 


ಶಿವಮೊಗ್ಗ : 

ರೈಲು ಡಿಕ್ಕಿ ಹೊಡೆದು ಮಹಿಳೆ ಸಾವು :

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಸರಹಳ್ಳಿಯಲ್ಲಿ ರೈಲ್ವೆ ಹಳಿ ಮೇಲೆ ಫೋನ್‌ನಲ್ಲಿ ಮಾತನಾಡಿಕೊಂಡು ಹೊರಟಿದ್ದ ಮಹಿಳೆಗೆ ಬುಧವಾರ ಬೆಳಗ್ಗೆ ಶಿವಮೊಗ್ಗ-ಮೈಸೂರು ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಭದ್ರಾವತಿ ತಾಲೂಕಿನ ಹನುಮಂತನಗರದ ಗೀತಾ (30) ಸಾವಿಗೀಡಾದ ಮಹಿಳೆ. ಬೆಳಗ್ಗೆ ಎದ್ದು ಪುತ್ರನೊಂದಿಗೆ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೊರಟಿದ್ದಾಗ ಶಿವಮೊಗ್ಗದಿಂದ ಮೈಸೂರಿಗೆ ತೆರಳುವ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಯ ಎಡಬದಿಗೆ ರೈಲು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಆರಗಜ್ಞಾನೇಂದ್ರ ಕಿಡಿ :

ಸಾವರ್ಕರ್​​ ಅವರು ಬ್ರಿಟಿಷರ ಬೂಟು ನೆಕ್ಕಿದ್ರು ಎಂಬ ಹೇಳಿಕೆ ಒಂದು ಸಮುದಾಯವನ್ನು ಎತ್ತಿಕಟ್ಟಿದೆ, ಚುನಾವಣಾ ವರ್ಷ ಆಗಿರುವುದರಿಂದ ಈ ರೀತಿಯಾಗಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಸಾವರ್ಕರ್​​ ಓರ್ವ ಸ್ವಾತಂತ್ರ್ಯ ಹೋರಾಟಗಾರ, 13 ವರ್ಷ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಇಂದು ವೀರ ಸಾವರ್ಕರ್​ ಫೋಟೋ ಅಳವಡಿಕೆ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮುಸ್ಲಿಂ ಏರಿಯಾಗಳು ಏನು ದೇಶದ ಹೊರಗೆ ಇದ್ದಾವೆಯೇ ? ಸಿದ್ದರಾಮಯ್ಯನವರು ಹೀಗೆ ಮಾಡಿಯೇ ಅವರ ಆಳ್ವಿಕೆಯಲ್ಲಿ ಒಂದು ಸಮುದಾಯವನ್ನು ಎತ್ತಿ ಕಟ್ಟಿದ್ದಾರೆ. ಸಾವರ್ಕರ್​​ ಫೋಟೋವನ್ನು ಈ ದೇಶದಲ್ಲಿ ಹಾಕಬಾರದಾ? ಅವರ ಫೋಟೋವನ್ನು ಹಾಕುವುದನ್ನು ನಿಷೇಧ ಮಾಡಲಾಗಿದೆಯೇ ಎಂದು ಕಟುವಾಗಿ ಪ್ರಶ್ನಿಸಿದರು.

ಸಹಜ ಸ್ಥಿತಿಯತ್ತ ಶಿವಮೊಗ್ಗ :

ಸಾವರ್ಕರ್‌ ಭಾವಚಿತ್ರ ತೆಗೆದಿದ್ದು ಹಾಗೂ ಅನಂತರ ನಡೆದ ಚಾಕು ಇರಿತ ಪ್ರಕರಣದಿಂದಾಗಿ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಎರಡು ದಿನಗಳ ನಂತರ ಶಿವಮೊಗ್ಗ ನಗರ ಸಹಜಸ್ಥಿತಿಗೆ ಮರಳಿದೆ. ಶಾಲಾ ಕಾಲೇಜುಗಳು ಇಂದಿನಿಂದ ಶುರುವಾಗಿವೆ ಇನ್ನೊಂದೆಡೆ ಇಂದೂ ಕೂಡಾ ನಿಷೇದಾಜ್ಞೆ ಮುಂದುವರೆಸಲಾಗಿದ್ದು, ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಅಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಅಲ್ಲೂ ಕೂಡಾ ನಿಷೇಧಾಜ್ಞೆ ಜಾರಿಯಲ್ಲಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಭದ್ರಾವತಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪರೇಡ್‌ ನಡೆಸಿ ಜನರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ.

ಕೊಡಗು :

ಸಿದ್ದರಾಮಯ್ಯ ಗೊ ಬ್ಯಾಕ್ ಕೊಡಗಿನಲ್ಲಿ ಕಿಡಿ :

ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟು ಮಾಡುವ ಬೆಳವಣಿಗೆಯೊಂದು ರಾಜ್ಯದಲ್ಲಿ ಗೋಚರಿಸಿದ್ದು, ಆ ಸಂಬಂಧಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ಆರಂಭವಾಗಿದೆ. ನಾಳೆ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಲಿರುವ ಕಾರ್ಯಕ್ರಮ ನಿಗದಿಗೊಂಡಿದೆ. ಆದರೆ ಅವರು ಬರಬಾರದು ಎಂದು ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿದ್ದು, ಬರಬೇಡಿ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೂ ನಡೆಯುತ್ತಿದೆ. ಸಿದ್ದರಾಮಯ್ಯ ಟಿಪ್ಪುವನ್ನು ಬೆಂಬಲಿಸುತ್ತಿರುವುದರಿಂದ ಈ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯ ಕೊಡಗಿಗೆ ಬರುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಟಿಪ್ಪುವಿನ ಶಿಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು,ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿ ಕೊಡಗಿಗೆ ಏಕೆ ಬರ್ತಾರೆ ಎಂದು ಸಿದ್ದರಾಮಯ್ಯಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗೋ ಬ್ಯಾಕ್ ಎಂದು ಸೋಷಿಯಲ್ ಮೀಡಿಯಾನದಲ್ಲಿ ಸಿದ್ದು ಬರುವಿಕೆಯನ್ನು ವಿರೋಧಿಸಿ ಪೋಸ್ಟ್​ಗಳು ಈಗಾಗಲೇ ಹರಿದಾಡಲಾರಂಭಿಸಿವೆ. 

ಮಳೆಯಿಂದ ನಿಲ್ಲದ ಅವಾಂತರಗಳು :

ಕುಶಾಲನಗರದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರ ಮನೆ ಗೋಡೆ ಬುಧವಾರ ನಸುಕಿನಲ್ಲಿ ಕುಸಿದು ಬಿದ್ದಿದೆ. ಗೋಡೆ ಬೀಳುತ್ತಿದ್ದಂತೆ ಮನೆ ಮಂದಿ ಹೊರಬಂದು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಮಳೆ ನಿಂತರೂ ಜಿಲ್ಲೆಯ ಅಲ್ಲಲ್ಲಿ ಮನೆ ಕುಸಿತ, ಭೂಕುಸಿತಗಳು ಮುಂದುವರಿದಿವೆ. ನಿರಂತರವಾಗಿ ಸುರಿದ ಮಳೆಯಿಂದ ಹಲವು ಮನೆಗಳ ಗೋಡೆಗಳು ಶಿಥಿಲವಾಗಿವೆ. ಇಲ್ಲಿನ ನಿವಾಸಿಗಳು ತೀವ್ರ ಆತಂಕದಿಂದ ದಿನ ಕಳೆಯುವಂತಾಗಿದೆ.

ಹಾಸನ :

ಆನೆ ದಾಳಿಗೆ ಹೈರಾಣಾದ ಕೃಷಿಕರು :

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳು ದಾಳಿ ಮುಂದುವರೆಸಿದ್ದು ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ಕಾಫಿ, ಮೆಣಸು, ಭತ್ತ ಸೇರಿದಂತೆ ಹತ್ತಾರು ಬೆಳೆಗಳು ಕಾಡಾನೆಗಳ ಹಾವಳಿಯಿಂದ ನಾಶವಾಗುತ್ತಿವೆ.ಮಲೆನಾಡು ಭಾಗದಲ್ಲಿ ನಿತ್ಯವೂ ಕಾಡಾನೆಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದು, ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಾಡಾನೆಗಳು ದಾಳಿ ಮುಂದುವರೆಸಿವೆ ಎಂದು ಅಲ್ಲಿನ ಸ್ಥಳೀಯರ ಆರೋಪವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಬೇಲೂರು‌ ತಾಲೂಕಿನ ನಾರ್ವೇಪೇಟೆ ಗ್ರಾಮಪಂಚಾಯತಿಯಲ್ಲಿ ಕೂಡಿಹಾಕಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳು ಬರೋವವರೆಗೂ ಅವರನ್ನು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದರು.

ಪತ್ನಿಯನ್ನು ಹತ್ಯೆ ಮಾಡಿದ ನೀಚ ಪತಿಯ ಶಿಕ್ಷೆಗೆ ಮಹಿಳಾ ಜಾಗೃತಿ ಮಾರ್ಗದರ್ಶಿ ಆಗ್ರಹ :

ಪತಿಯ ವಿರುದ್ಧ ನ್ಯಾಯ ಕೇಳಲು ಬಂದಿದ್ದ ಮಹಿಳೆಯನ್ನು ಹೊಳೆನರಸೀಪುರ ನ್ಯಾಯಾಲಯದ ಆವರಣದಲ್ಲೇ ಪತಿಯು ಹತ್ಯೆ ಮಾಡಿರುವುದು ಖಂಡನೀಯವಾಗಿದ್ದು, ಕೊಲೆಗಾರ ಆರೋಪಿಗೆ ಮರಣದಂಡನೆ ವಿಧಿಸುವಂತೆ ಮಹಿಳಾ ಜಾಗೃತಿ ಮಾರ್ಗದರ್ಶಿ ಅಧ್ಯಕ್ಷೆ ಕಲ್ಪನಾ ಕೀರ್ತಿ ಆಗ್ರಹಿಸಿದ್ದಾರೆ. ಮೃತರಾಗಿರುವ ಸೌಮ್ಯಗೆ ಎರಡು ಹೆಣ್ಣು ಮಕ್ಕಳಿದ್ದು, ಮುಂದಿನ ವಿದ್ಯಾಭ್ಯಾಸ ಹಾಗೂ ಅವರ ಶ್ರೇಯೋಭಿವೃದ್ಧಿಯ ಬಗ್ಗೆ ಸರ್ಕಾರಕ್ಕೆ ಸಂಬಂಧ ಪಟ್ಟ ಇಲಾಖೆಯಿಂದ ಈ ಬಗ್ಗೆ ವರದಿಯನ್ನು ಸಲ್ಲಿಸುವ ಮೂಲಕ ಸಹಾಯ ಹಸ್ತವನ್ನು ನೀಡಬೇಕೆಂದು ಸರ್ಕಾರವನ್ನು ಹಾಗೂ ಅಧಿಕಾರಿಗಳನ್ನು ಪದಾಧಿಕಾರಿಗಳು ಕೋರಿದರು.