ಹಾಸನ: (ನ್ಯೂಸ್ ಮಲ್ನಾಡ್ ವರದಿ) ಹಾಸನದಲ್ಲಿ ಕಾಂಗ್ರೆಸ್ಸಿಗರು ಗಣಪತಿ ಹಬ್ಬಕ್ಕೆ ಶುಭಕೋರಿ ಅಳವಡಿಸಿದ್ದ ಪ್ಲೆಕ್ಸ್ ನ್ನು ಬಿಜೆಪಿ ಯುವಮೋರ್ಚಾ ತಾಲೂಕು ಮುಖಂಡ ದೊಣ್ಣೆಯಿಂದ ಹೊಡೆದು ಹರಿದು ಹಾಕಿರುವ ಘಟನೆ ನಡೆದಿದೆ. 

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳಿಮೋಹನ್ ಎಂಬುವವರ ಬೆಂಬಲಿಗರು ಗಣೇಶ ಚತುರ್ಥಿಯ ಅಂಗವಾಗಿ ಶುಭಕೋರಿ ಅಳವಡಿಸಿದ್ದ ಬ್ಯಾನರ್ ನ್ನು ಬಿಜೆಪಿ ಯುವಮೋರ್ಚಾ ತಾಲೂಕು ಪದಾಧಿಕಾರಿ ದೊಣ್ಣೆಯಿಂದ ಹೊಡೆದು ಸಂಪೂರ್ಣವಾಗಿ ಹರಿದು ಹಾಕಿದ್ದಾರೆ. ಫ್ಲೆಕ್ಸ್ ಹರಿದು ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕಾಂಗ್ರೆಸ್ಸಿಗರು ತೀವ್ರತರಹದ ಆಕ್ರೋಶವನ್ನು ಹೊರಹಾಕಿದ್ದಾರೆ. 

ಅಳವಡಿಸಲಾಗಿದ್ದ ಬ್ಯಾನರ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಫೋಟೋಗಳನ್ನು ಹಾಕಲಾಗಿತ್ತು. ಆದರೆ ಇದನ್ನು ಕಂಡ ಬಿಜೆಪಿ ಯುವಮೋರ್ಚಾ ಮುಖಂಡ ದೊಣ್ಣೆಯಿಂದ ಹೊಡೆದು ಹರಿದುಹಾಕಿದ್ದಾನೆ


ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಬ್ಯಾನರ್, ಫ್ಲೆಕ್ಸ್ ಅಳವಡಿಕೆಯಲ್ಲೂ ತೀವ್ರತರಹದ ಗಲಾಟೆಗಳು ಸಂಭವಿಸುತ್ತಿದ್ದು ರಾಜಕೀಯ ಪಕ್ಷಗಳ ಬೆಂಬಲಿಗರು ಸ್ವಪಕ್ಷಗಳ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೇನು ಕೇವಲ ಎರಡು ದಿನಗಳಲ್ಲಿ ಅದ್ಧೂರಿಯಾದ ಗಣಪತಿ ಹಬ್ಬ ಆಚರಿಸಲು ಗಣಪತಿ ಮಂಡಳಿಗಳು, ದೇವಸ್ಥಾನಗಳು ಭರದಿಂದ ಸಿದ್ಧತೆ ನಡೆಸುತ್ತಿದ್ದರೆ ಇಂತಹ ಘಟನೆಗಳನ್ನು ಸಾರ್ವಜನಿಕರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ.

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಸೆರೆ ; ಮದ್ಯ ಹಾಗೂ ಹಣವನ್ನು ವಶಕ್ಕೆ ಪಡೆದ ಪೊಲೀಸರು

ನರಸಿಂಹರಾಜಪುರ :  ಕಾನೂನು ಬಾಹಿರವಾಗಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅನೇಕರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಸೆರೆ ಹಿಡಿದು ವಶಕ್ಕೆ ಪಡೆದಿದ್ದಾರೆ.

ಗಾಂಜಾ ವ್ಯಸನಿ ಸೆರೆ :
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಿ.ಹೆಚ್ ಕೈಮರದಲ್ಲಿ ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ಧೃಢಪಟ್ಟಿತ್ತು. ಈ ಸಂಬಂ ಎನ್.ಡಿ.ಪಿ.ಎಸ್ ಆಕ್ಟ್ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. 

ಇಸ್ಪೀಟ್ ಆಡುತ್ತಿದ್ದವರು ಪೊಲೀಸರ ಬಲೆಗೆ :
ಮುತ್ತಿನಕೊಪ್ಪ ಗ್ರಾಮಪಂಚಾಯತ್ ವ್ಯಾಪ್ತಿಯ ಬೈರಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ ಐವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಇಸ್ಪೀಟ್ ಗಾಗಿ ಇಟ್ಟುಕೊಂಡಿದ್ದ 60,000 ರೂಪಾಯಿನಗದನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳಾದ ಮೋಹನರಾಜ್, ಶಿವಕುಮಾರ್, ಪೀರ್ ಹುಸೇನ್, ಸತೀಶ್ ನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮದ್ಯ ಮಾರಾಟ ಮಾಡುತ್ತಿದ್ದ ಶಿವಾನಂದನ ಬಂಧನ : 
ಕಾರಿನಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಸುತ್ತಿದ್ದ ಶಿವಾನಂದ ಎಂಬಾತನನ್ನು ಮಾಹಿತಿಯಮೇರೆಗೆ ಪೊಲೀಸರು ಬಂಧಿಸಿ ಆರೋಪಿಯ ಬಳಿ ಪರವಾನಗಿ ಹೊಂದದೇ ಇದ್ದ 48 ಮದ್ಯದ ಪೌಚುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. 

ಅಕ್ರಮ ಕೃತ್ಯಗಳನ್ನು, ಕಾನೂನು ಬಾಹಿರ ಚಟುವಟಿಕೆಗಳನ್ನು ಯಾರೇ ನಡೆಸುತ್ತಿದ್ದರೂ ಕೂಡ ಅಂತಹವರ ಮೇಲೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದು ಸಾರ್ವಜನಿಕರು ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಸಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಯಾರಾದರೂ ಕಂಡುಬಂದಲ್ಲಿ ಯಾವುದೇ ಭಯವಿಲ್ಲದೆ ಮಾಹಿತಿ ನೀಡುವಂತೆ ಅಧಿಕಾರಿಗಳು ತಿಳಿಸಿದ್ದು, ಈ ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ಠಾಣೆಯ ಅಧಿಕಾರಿವರ್ಗ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.