ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಹೊರವಲಯವಾದ ನೆಮ್ಮಾರಿನಲ್ಲಿ ಚಿರತೆ ಕಂಡಿದ್ದೇವೆ ಎಂದು ಸ್ಥಳೀಯರು ತೀವ್ರ ಆತಂಕಕ್ಕೊಳಾಗಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹಲವರಿಗೆ ಚಿರತೆ ಕಂಡಿದ್ದರೆ ಇನ್ನೂ ಕೆಲವರು ಚಿರತೆಯ ಹೆಜ್ಜೆಯನ್ನು ಹೋಲುವ ಗುರುತನ್ನು ಕಂಡು ಭಯಭೀತರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊರವಲಯವಾದ ನೆಮ್ಮಾರುವಿನ ಮಾಣಿಬೈಲು ಸೇತುವೆ ಬಳಿ ಕೆಲ ದಿನಗಳಿಂದ ಚಿರತೆ ಓಡಾಡುತ್ತಿದೆ ಎಂಬ ಸುದ್ದಿ ಜನರಿಂದ ಕೇಳಿ ಬಂದಿತ್ತು, ಕೆಲವರಿಗೆ ಚಿರತೆಯ ಹೆಜ್ಜೆ ಗುರುತುಗಳು ಸಹ ಕಂಡಿತ್ತು ಇದನ್ನು ಕಂಡ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದು ಕೆಲವರು ತಾವು ಪ್ರತ್ಯಕ್ಷವಾಗಿ ಚಿರತೆಯನ್ನು ಕೈಗೊಂಡಿರುವುದಾಗಿ ಹೇಳುತ್ತಿದ್ದಾರೆ.

ಇದನ್ನೂ ಓದಿ : ಅಕ್ರಮವಾಗಿ ಗಾಂಜಾ ಮಾರಾಟ ನಡೆಸುತ್ತಿದ್ದ ನಾಲ್ವರು ಸೆರೆ; ಕೆ.ಜಿ ಗಟ್ಟಲೇ ಗಾಂಜಾ ವಶಕ್ಕೆ ಪಡೆದ ಪೊಲೀಸರು


ಗ್ರಾಮೀಣ ಪ್ರದೇಶವಾದ್ದರಿಂದ ಒಂದರಿಂದ ಒಂದು ಮನೆಗಳಿಗೆ ಕಿಮೀ ಗಟ್ಟಲೇ ಅಂತರವಿದ್ದು ಇದಲ್ಲದೇ ಕೃಷಿಯನ್ನು ಜೀವನಕ್ಕಾಗಿ ಅವಲಂಬಿಸಿ ತೋಟ ಗದ್ದೆಗಳಲ್ಲಿ ಜನರು ಕಾರ್ಯ ನಿರ್ವಹಣೆ ಮಾಡುವುದರಿಂದ ಚಿರತೆ ಓಡಾಟ ಮಾಹಿತಿ ಜನರಲ್ಲಿ ಭೀತಿ ಕಾಡುತ್ತಿದೆ. 

ಸಂಜೆ ಹಾಗೂ ರಾತ್ರಿಯ ವೇಳೆಯಲ್ಲಿ ಚಿರತೆ ರಸ್ತೆಯ ಅಕ್ಕ ಪಕ್ಕದಲ್ಲಿ ಓಡಾಡುತ್ತಿರುವುದನ್ನು ಸಹ ಸ್ಥಳೀಯರು ಕಂಡಿದ್ದು, ಈ ಭಾಗದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿದ್ದು ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದೇ ಮಾರ್ಗದಲ್ಲಿ ಓದುವುದರಿಂದ ಚಿರತೆ ದಾಳಿ ನಡೆಸಿದ್ದೇ ಆದಲ್ಲಿ ತೀವ್ರತರಹದ ಸಮಸ್ಯೆಗಳು ಎದುರಾಗಲಿದೆ. ಸಮಸ್ಯೆ ವ್ಯಾಪಿಸುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವ ಕೆಲಸ ಮಾಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 


ಈಗಾಗಲೇ ಅತ್ತಿಂದಿತ್ತ ಓಡಾಡಲು ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದಾಗ ಅವರು ಕೇವಲ ಹಗಲಿನ ವೇಳೆಯಲ್ಲಿ ಮಾತ್ರ ಬರುತ್ತಾರೆ, ಚಿರತೆ ಇಲ್ಲ ಎಂಬುದಾಗಿ ಹೇಳಿ ಪುನಃ ಹಿಂದಿರುಗುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕೂಡಲೇ ಎಚ್ಚೆತ್ತು ಜನರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.