ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಸುರಿದ ರಣಮಳೆಗೆ ಕುಸಿತಗೊಂಡಿದ್ದ ಆಗುಂಬೆ ಘಾಟಿಯಲ್ಲಿ, ಭಾರೀ ಪ್ರಮಾಣದ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧವನ್ನು ಹೇರಿತ್ತು. ಪ್ರಸ್ತುತ ಜಿಲ್ಲಾಡಳಿತ ಅದೇ ನಿರ್ಬಂಧವನ್ನು ಮುಂದುವರೆಸಿ ಆದೇಶಿಸಿದೆ. 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಜುಲೈ ತಿಂಗಳಿನಲ್ಲಿ ಭೂ ಕುಸಿತ ಉಂಟಾಗಿತ್ತು. ಈ ಹಿನ್ನೆಲೆ ಆಗಸ್ಟ್ 31 ರ ವರೆಗೆ ಜಿಲ್ಲಾಡಳಿತ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಇದೀಗ ತಜ್ಞರ ಸೂಚನೆ ಮೇರೆಗೆ ಸೆಪ್ಟೆಂಬರ್ 30 ರವರೆಗೆ ಭಾರೀ ವಾಹನಗಳ ಸಂಚಾರ ನಿಷೇಧಿಸಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಆಗುಂಬೆ ಘಾಟಿಯಲ್ಲಿ ಸದ್ಯ ಭಾರೀ ವಾಹನಗಳಿಗೆ ಮಾತ್ರ ಸಂಚಾರ ನಿರ್ಬಂಧ ಮಾಡಲಾಗಿದೆ. ಆದರೆ ಆಗುಂಬೆ ಘಾಟಿಯಲ್ಲಿ ಲಘು ವಾಹನ ಮತ್ತು ಬಸ್ಸುಗಳ ಸಂಚಾರ ಎಂದಿನಂತೆಯೇ ಇರಲಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. 

ಶೃಂಗೇರಿಯಿಂದ ಆಗುಂಬೆಯನ್ನು ಸಂಪರ್ಕಿಸುವ ಶೃಂಗೇರಿ ಹೊರವಲಯದ ನೇರಳೆಕುಡಿಗೆ ರಸ್ತೆ ಸಹ ಈ ಭಾಗದಲ್ಲಿ ಸಂಭವಿಸಿದ್ದ ಮಳೆಗೆ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿತ್ತು. ಇಲ್ಲೂ ಸಹ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಭಾರೀ ಗಾತ್ರದ ವಾಹನಗಳು ಶೃಂಗೇರಿಯಿಂದ ಪರ್ಯಾಯ ರಸ್ತೆಗಳ ಮೂಲಕ ಈಗಲೂ ಸಂಚಾರ ನಡೆಸುತ್ತಿದೆ.


ಮಹಿಳೆಯ ಚಿನ್ನಾಭರಣ ದೋಚಿದ್ದ ಕಳ್ಳನಿಗೆ ನ್ಯಾಯಾಧೀಶರಿಂದ ಶಿಕ್ಷೆ ಪ್ರಕಟ :

ಶಿವಮೊಗ್ಗ : ಮನೆಯ ಹಿಂಭಾಗದಲ್ಲಿ ಮಹಿಳೆ ಪಾತ್ರೆ ತೊಳೆಯುವ ವೇಳೆಯಲ್ಲಿ ಹಿಂಬದಿಯಿಂದ ಬಂದು ಮಹಿಳೆಯ ಚಿನ್ನಾಭರಣಗಳನ್ನು ದೋಚಿದ್ದ ಖದೀಮನಿಗೆ ಜೈಲು ಶಿಕ್ಷೆ ಪ್ರಕಟಮಾಡಿ ನ್ಯಾಯಾಲಯ ಆದೇಶಿಸಿದೆ.

2019 ರ ಫೆಬ್ರವರಿ 10 ರಂದು ಸಂಜೆಯ ವೇಳೆಗೆ ಭದ್ರಾವತಿ ಪೇಪರ್‌ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬಾಳೆ ಮಾರನಹಳ್ಳಿ ಗ್ರಾಮದ ಮಹಿಳೆ ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿರುವಾಗ ತಿಮ್ಲಾಪುರ ಗ್ರಾಮದ ವಾಸಿ ರುದ್ರನಾಯ್ಕ ರವರ ಮಗನಾದ ಜಯ ಸುನಿಲ್‌ ಎಂಬ ವ್ಯಕ್ತಿಯು ಹಿಂದಿನಿಂದ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಬೆಳ್ಳಿಯ ಕರಡಿಗೆಯನ್ನು ಕಿತ್ತುಕೊಂಡು ಮಹಿಳೆಯನ್ನು ತಳ್ಳಿ ಬೀಳಿಸಿ ಓಡಿ ಹೋಗಿದ್ದ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಪ್ರಕ್ರಿಯೆಗೆ ಅನುವು ಮಾಡಿದ್ದರು. 


ಆಗಿನ ತನಿಖಾಧಿಕಾರಿಗಳಾಗಿದ್ದ ಯೋಗೇಶ ಕೆ ಎಂ, ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತಇವರು ಪ್ರಕರಣದ ತನಿಖೆಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. 

ಈ ಪ್ರಕರಣದ ಕುರಿತಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ರತ್ನಮ್ಮರವರು ವಾದ ಮಂಡಿಸಿದ್ದು, ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀ ಶಶಿಧರ್ ರವರು 29-08-2022 ರಂದು ಆರೋಪಿತನಾದ ಜಯಾ ನಾಯ್ಕ ಅಲಿಯಾಸ್ ಸುನಿಲ್‌ ಬಿನ್‌ ರುದ್ರಾನಾಯ್ಕ ತಿಮ್ಲಾಫುರ ತಾಂಡಾ ಭದ್ರಾವತಿ ತಾಲ್ಲೂಕು. ಈತನ ವಿರುದ್ಧ ಕಲಂ 397 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತನಿಗೆ 07 ವರ್ಷ ಕಠಿಣ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ.