ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ನಿನ್ನೆ ಸಂಜೆಯ ವೇಳೆಗೆ ಬಿರುಕು ಮೂಡಿದ್ದ ಮೇಗೂರು ಸಂಪರ್ಕಿಸುವ ರಸ್ತೆಯು ಇಂದು ಭಾರೀ ಮಟ್ಟದಲ್ಲಿ ಕುಸಿತಗೊಂಡಿದೆ. ಒಂದೆಡೆ ಮಳೆಯು ನಿರಂತರವಾಗಿ ಸುರಿಯುತ್ತಿದ್ದು ಮೇಗೂರು ಭಾಗದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. 

ಇದನ್ನೂ ಓದಿ : ಮೂಡಿಗೆರೆ : ಆನೆದಾಳಿಗೆ ಓಮಿನಿ ಕಾರ್ ಪಲ್ಟಿ

ನಿನ್ನೆ ಸಂಜೆಯ ವೇಳೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೆಗ್ಗಾರುಕುಡಿಗೆ ರಸ್ತೆಯ ತಡೆಗೋಡೆ ಅಕ್ಕಪಕ್ಕದಲ್ಲಿದ್ದ ಮಣ್ಣು ಕುಸಿದಿದ್ದು, ತಡೆಗೋಡೆ ಸಹ ಕುಸಿತಗೊಳ್ಳುವ ಭೀತಿ ಇತ್ತು ಹಾಗೂ ರಸ್ತೆಯಲ್ಲೂ ಸಹ ಬಿರುಕು ಮೂಡಿತ್ತು. ಆದರೆ ಇಂದು ಸಂಪೂರ್ಣವಾಗಿ ರಸ್ತೆ ಕುಸಿದಿದ್ದು ಜನರಲ್ಲಿ ಆತಂಕ ಮೂಡಿಸಿದೆ. 


ಗಡಿಕಲ್ ಭಾಗದಿಂದ ಮೇಗೂರು, ಶಾಂತಿಗ್ರಾಮ, ತಲವಾನೆ ಸೇರಿದಂತೆ ಇನ್ನಿತರ ಹಳ್ಳಿಗಳಿಗೆ ಪ್ರಮುಖವಾಗಿ ಸಂಪರ್ಕಕಲ್ಪಿಸುವ ಮುಖ್ಯ ರಸ್ತೆಯಿದಾಗಿದ್ದು ಇಂದು ಭಾರೀ ಮಟ್ಟದಲ್ಲಿ ರಸ್ತೆ ಕುಸಿದ ಪರಿಣಾಮ ಕೇವಲ ನಾಮಕಾವಸ್ತೆಗಷ್ಟೇ ರಸ್ತೆ ಕಾಣಿಸುತ್ತಿದ್ದು, ಅತ್ಯಗತ್ಯವಾದ ರಸ್ತೆ ಕುರಿತಾದ ಸಮಸ್ಯೆಗೆ ಪರಿಹಾರ ಯಾವಾಗ ಲಭಿಸುತ್ತದೆಯೋ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಎದುರಾಗಿದೆ. 

ರಸ್ತೆಯ ಪಕ್ಕದ ಧರೆಯ ಮಣ್ಣು ಸಹ ಕುಸಿಯುತ್ತಲೇ ಇದ್ದು ಇನ್ನೂ ಮಳೆಯಾಗುತ್ತಲೇ ಇರುವುದರಿಂದ ಜನರು ಆತಂಕದಲ್ಲಿದ್ದು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ. ಸ್ಥಳಕ್ಕಾಗಮಿಸಿದ ಇಂಜಿನಿಯರ್ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದು, ಅತೀ ಶೀಘ್ರವಾಗಿ ರಸ್ತೆ ವ್ಯವಸ್ಥೆಯನ್ನು ಸರಿಗೊಳಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಶೃಂಗೇರಿ, ಜಯಪುರ ಭಾಗಗಳಿಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ತೆರಳುವವರಿಗೆ ರಸ್ತೆ ಸಂಪರ್ಕಕ್ಕೆ ಅಡ್ಡಿಯುಂಟಾಗಿದ್ದು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಾಹನ ಸವಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ.


ಅಂತೆಯೇ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕಿರುವ ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪ ಮಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತಾಗಿ ಎಚ್ಚೆತ್ತು ರಸ್ತೆ ವ್ಯವಸ್ಥೆಯನ್ನು ಸ್ಥಳೀಯರಿಗೆ ಕಲ್ಪಿಸುವಲ್ಲಿ ಗಮನಹರಿಸಬೇಕಿದೆ.