ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಚುನಾವಣೆ ಸಮೀಪಿಸುತ್ತಿರುವುದರಿಂದ ಅಭಿವೃದ್ದಿಯ ವಿಚಾರವನ್ನು ಮರೆ ಮಾಚುವ ಸಲುವಾಗಿ ಮೊಟ್ಟೆ ಎಸೆತದ ವಿಷಯವನ್ನು ದೊಡ್ಡದು ಮಾಡಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಕೈ ಕೈ ಮಿಲಾಯಿಸುವ ಹಂತವನ್ನು ತಲುಪಿರುವುದು ರಾಜ್ಯದ ಜನರ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತಿಳಿಸಿದರು. 

ಇದನ್ನೂ ಓದಿ : ಕೊಪ್ಪ : ನಾಪತ್ತೆಯಾಗಿದ್ದ ಚಾಲಕ ಶವವಾಗಿ ಪತ್ತೆ ; ಸಾವಿನ ಕುರಿತು ಮೂಡಿದ ಅನುಮಾನ

ರಾಷ್ಟ್ರೀಯ ಪಕ್ಷ ಹಾಗೂ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವಾದ ಬಿಜೆಪಿ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಎರಡೂ ಪಕ್ಷಗಳು ಅಭಿವೃದ್ಧಿಯಲ್ಲಿ ನಡೆದಿರುವ ಹಿನ್ನೆಡೆಯನ್ನು ಜನರಿಂದ ಮರೆಮಾಚುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ದೊಡ್ಡದು ಮಾಡಿ ಇನ್ನೂ ಆ ಪ್ರಕರಣವನ್ನು ಜೀವಂತವಾಗಿರಿಸುವ ಕೆಲಸವನ್ನು ಮಾಡುತ್ತಿದ್ದಾರೆ. 


ಮತದಾರರ ಬಳಿ ತೆರಳಿ ಮತ ಯಾಚಿಸಲು ಅಭಿವೃದ್ದಿಯ ಆಧಾರದ ಮೇಲೆ ಹೋಗಬೇಕೆ ಹೊರತು ಜಾತಿ, ಧರ್ಮಗಳ ನಡುವೆ ಬಿರುಕು ಮೂಡಿಸಿ ಅಥವಾ ಇನ್ಯಾವುದೋ ಹಾದಿಗಳಿಂದ ಅಲ್ಲ. ರಾಜ್ಯದ ಸಮಗ್ರ ಅಭಿವೃದ್ದಿ ಕೇವಲ ಪ್ರಾದೇಶಿಕ ಪಕ್ಷದಿಂದ ಮಾತ್ರ ಎಂದರು. 

ರಾಜ್ಯದಲ್ಲಿ ಮೊಟ್ಟೆ ಪ್ರಕರಣವನ್ನು ಇನ್ನೂ ಜೀವಂತವಾಗಿಡದೆ, ಬಡ ಹಾಗೂ ಮಧ್ಯಮ, ಸಾಮಾನ್ಯ ವರ್ಗಗಳ ಜನರ ಸಮಸ್ಯೆಯನ್ನು ಆಲಿಸಿ ಇನ್ನಾದರೂ ಅವರ ಸಮಸ್ಯೆಯನ್ನು ಬಗೆಹರಿಸಿ ಅವರಿಗೆ ಪೂರಕವಾದ ನೆರವು ನೀಡುವ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವತ್ತ ರಾಷ್ಟ್ರೀಯ ಪಕ್ಷಗಳು ಹಾಗೂ ನಾಯಕರುಗಳು ಗಮನಹರಿಸಬೇಕು ಎಂದರು.