ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ಹಣವನ್ನು ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ವೀಡಿಯೋ ನೋಡಿ : ಬಿರುಗಾಳಿ ಸಹಿತ ಮಳೆಯಿಂದಾಗಿ ಮನೆ ಕುಸಿತ, ಅದೃಷ್ಟವಶಾತ್ ಪಾರಾದ ಮಹಿಳೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಿರೇಗದ್ದೆ ಇಲ್ಲಿನ ಕಿಟಕಿಯ ಸರಳುಗಳನ್ನು ಗ್ಯಾಸ್ ಕಟರ್ ನಿಂದ ತುಂಡುಮಾಡಿ, ಕಳ್ಳರು ಆಫೀಸಿನ ಕ್ಯಾಶ್ ಬೋರ್ಡ್ ನಲ್ಲಿದ್ದ 325,000 ರೂಪಾಯಿ ನಗದು ಹಾಗೂ 8000 ರೂಪಾಯಿ ಬೆಲೆ ಬಾಳುವ ಹಾರ್ಡ್ ಡಿಸ್ಕ್ ನ್ನು ಕಳ್ಳತನ ನಡೆಸಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ಜಿ.ಆರ್ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಾದ ನಿನ್ನೆ ಇಲ್ಲಿನ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಧ್ವಜಾರೋಹಣ ನಡೆಸಿ ಬೆಳಗ್ಗೆ 10.30 ಕ್ಕೆ ನಿರ್ಗಮಿಸಿದ್ದು ಈ ಅವಧಿಯಿಂದ ಇಂದು ಬೆಳಗ್ಗೆ 10.30 ರ ಒಳಗಿನ ಅವಧಿಯಲ್ಲಿ ಕಳ್ಳರು ಹಣವನ್ನು ದೋಚಿರಬಹುದು ಎನ್ನಲಾಗಿದೆ.
ಘಟನಾ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ತನಿಖೆಯ ಬಳಿಕವಷ್ಟೇ ಈ ಕುರಿತಾದ ಸಂಪೂರ್ಣ ಮಾಹಿತಿ ಹೊರಬೀಳಲಿದೆ.






0 Comments