ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಕಿಡಿಗೇಡಿಗಳು ಹಸುವಿನ ಕುತ್ತಿಗೆಗೆ ಚೂರಿ ಹಾಕಿರುವ ಘಟನೆ ಬಾಳೆಹೊನ್ನೂರಿನಲ್ಲಿ ಬೆಳಕಿಗೆ ಬಂದಿದೆ. 

ಇದನ್ನೂ ಓದಿ : ಕೆರೆಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಅಕ್ಕಿಯಿದ್ದ ಲಾರಿ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕಡ್ಲೇಮಕ್ಕಿಯ ಬಳಿಯಲ್ಲಿ ದುಷ್ಕರ್ಮಿಗಳು ಹಸುವಿನ ಕುತ್ತಿಗೆಗೆ ಚೂರಿಹಾಕಿದ್ದಾರೆ ಎನ್ನಲಾಗಿದ್ದು, ಹಸು ಕಟುಕರಿಂದ ತಪ್ಪಿಸಿಕೊಂಡು ಬಚಾವಾಗಿದೆ. ಆದರೆ ಅದರ ಗಂಟಲಿನ ಭಾಗದಲ್ಲಿ ಉಂಟಾಗಿರುವ ಗಾಯದ ತೀವ್ರತೆ ಹೆಚ್ಚಿದ್ದು ಹಸುವನ್ನು ಹಿಡಿದ ಬಾಳೆಹೊನ್ನೂರಿನ ಬಜರಂಗದಳದ ಕಾರ್ಯಕರ್ತರು ಕೂಡಲೇ ಅದನ್ನು ಬಾಳೆಹೊನ್ನೂರಿನ ಪಶುವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗೊಳಪಡಿಸಿದ್ದಾರೆ. 


ಪ್ರಸ್ತುತ ಹಸುವಿನ ಆರೈಕೆ ಮಾಡುತ್ತಿದ್ದು, ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗಾಗಿ ಕಾಯ್ದೆಗಳು ಜಾರಿಯಲ್ಲಿದ್ದರೂ ಕೂಡ ಇಂತಹ ಕೃತ್ಯಗಳು ನಡೆಯುತ್ತಿದ್ದು, ಗೋಹತ್ಯೆ ಎಸಗುವವರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

ಮಲೆನಾಡಿನಲ್ಲಿ ಭಯವಿಲ್ಲದೇ ನಡೆಯುತ್ತಿರುವ ಗೋಹತ್ಯೆ : ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್ ಕವರ್ ನಲ್ಲಿ ದನದ ಕಾಲುಗಳು ಪತ್ತೆ

ಚಿಕ್ಕಮಗಳೂರು: ಗೋಹತ್ಯೆ ನಿಷೇಧ ಮಾಡಬೇಕು, ಗೋ ಸಂತತಿಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ಕಠಿಣ ಕಾನೂನು ಕ್ರಮಗಳನ್ನು, ಕಾಯ್ದೆಗಳನ್ನು ಜಾರಿಗೆ ತಂದರೂ ಸಹ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಗೋಹತ್ಯೆ ನಡೆಯುತ್ತಲೇ ಇದೆ. ದನಗಳ್ಳರ ಹಾವಳಿ ಸಹ ಮಿತಿ ಮೀರಿದ್ದು ಕವರ್ ನಲ್ಲಿ ದನದ ಕಾಲುಗಳನ್ನು ತುಂಬಿ ರಸ್ತೆಯ ಪಕ್ಕದಲ್ಲೇ ಯಾರೋ ಗೋಹಂತಕರು ಬಿಸಾಡಿ ಹೋಗಿರುವ ಘಟನೆ ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಚಕ್ಕಮಕ್ಕಿ ಗ್ರಾಮದ ರಸ್ತೆ ಬದಿಯಲ್ಲಿ ದನದ ಕಾಲುಗಳು ಪತ್ತೆಯಾಗಿದೆ. ಪ್ಲಾಸ್ಟಿಕ್ ಕವರ್ ನಲ್ಲಿ ದನದ ಕಾಲುಗಳನ್ನು ತುಂಬಿ ಬಿಸಾಡಿದ್ದು, ರಸ್ತೆಯಲ್ಲಿರೋ ಬಿಡಾಡಿ ದನಗಳನ್ನು ಕಡಿದು ಸಾಗಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಒಂದೆಡೆ ಈ ಭಾಗದಲ್ಲಿ ಆಗಾಗ ನಡೆಯುತ್ತಿರುವ ಹುಲಿ ದಾಳಿಯಿಂದ ಹಸುಗಳು ಬಲಿಯಾಗುತ್ತಿದ್ದರೆ ಇನ್ನೊಂದೆಡೆ ಗೋಹಂತಕರ ಈ ರೀತಿಯ ಕೃತ್ಯಗಳಿಂದ ಕೃಷಿಕರು, ಜಾನುವಾರುಗಳ ಮಾಲೀಕರು ತೀವ್ರ ಆತಂಕಕ್ಕೆ ಜಾರಿದ್ದಾರೆ. 

ಈ ಘಟನೆಯು ಮೂಡಿಗೆರೆ ತಾಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈ ರೀತಿಯ ಅಕ್ರಮ ಕೃತ್ಯಗಳಿಗೆ ಪೊಲೀಸರು ಬ್ರೇಕ್ ಹಾಕಬೇಕು. ಗೋವುಗಳ ಸಾಗಾಟ ನಡೆಸುವವರ ವಿರುದ್ಧ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.