ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಭಾರೀ ಮಳೆಯಿಂದ ಬೆಳೆಗಳು ಕೈ ಸೇರದೇ ನಷ್ಟವಾದ ಪರಿಣಾಮ ಕೃಷಿಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಿಬ್ಳಿ ಆಚೆಮನೆ ದೇವಗೋಡು ಗ್ರಾಮದ ಕೆ.ಎಂ ಶ್ರೀನಿವಾಸ್ ಗೌಡ ಅವರ ಪುತ್ರ ಗಣೇಶ್ ಮೈಲುತುತ್ತು ಸೇವಿಸಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. 

ಕೃಷಿಯನ್ನು ಜೀವನಾಧಾರವಾಗಿಟ್ಟುಕೊಂಡು ಅದರ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಲವನ್ನು ಮಾಡಿಕೊಂಡು ಏಳಿಗೆ ಕಾಣಬೇಕೆಂದಿದ್ದ ಗಣೇಶ್ ಗೆ ಈ ಬಾರಿ ಸುರಿದ ಅತಿಯಾದ ಮಳೆಯು ಅಡ್ಡಗಾಲಾಗಿ ಪರಿಣಮಿಸಿದೆ. ಭಾರೀ ಮಳೆಯಿಂದಾಗಿ ಬೆಳೆದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಳು ಭಾರೀ ಪ್ರಮಾಣದಲ್ಲಿ ಹಾನಿಯಾದ ಪರಿಣಾಮ ಸಾಲವನ್ನು ತೀರಿಸುವ ಯೋಚನೆಯಲ್ಲಿ ಮುಳುಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ತಂದೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 


ಆಗಸ್ಟ್ 11 ರಂದು ವಿಷ ಸೇವಿಸಿ ವಾಂತಿ ಮಾಡುತ್ತ ನರಳಾಟ ನಡೆಸುತ್ತಿದ್ದ ಗಣೇಶ್ ನನ್ನು ತಾಯಿ ಹಾಗೂ ಇನ್ನೋರ್ವ ಸಹೋದರ ಗಮನಿಸಿ ಆಟೋದಲ್ಲಿ ಜಯಪುರದ ಆಸ್ಪತ್ರೆಗೆ ದಾಖಲಿಸಿದ್ದಾರೆ, ಇಲ್ಲಿಂದ ವೈದ್ಯರು ಕೊಪ್ಪದ ಆಸ್ಪತ್ರೆಗೆ ತಕ್ಷಣವೇ ದಾಖಲಿಸುವಂತೆ ಸೂಚಿಸಿದ್ದಾರೆ ಈ ಬಳಿಕ ಅಲ್ಲಿಂದ ಕೊಪ್ಪದ ಆಸ್ಪತ್ರೆಗೆ ದಾಖಲು ಮಾಡಲಾಗಿ ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದು ಮರುದಿನ ಆತನನ್ನು ಮನೆಯಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಗಣೇಶ್ ಕೊನೆಯುಸಿರೆಳೆದಿದ್ದಾನೆ. 

ಘಟನಾ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ರೋಗಬಾಧೆ ಹಾಗೂ ಈ ಬಾರಿ ಸುರಿದ ಅತಿಯಾದ ಮಳೆಯಿಂದ ಮನೆಯ ಜವಾಬ್ದಾರಿ ನಿಭಾಯಿಸಿಬೇಕಿದ್ದ ಕೃಷಿಕ ಆತ್ಮಹತ್ಯೆಗೆ ಶರಣಾಗಿ ದುರ್ಮರಣವನ್ನಪ್ಪಿದ್ದು ಸರ್ಕಾರ ಈ ಕುರಿತಾಗಿ ಸೂಕ್ತವಾದ ಪರಿಹಾರ ಒದಗಿಸಬೇಕೆಂದು ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಕೋರಿದ್ದಾರೆ.