ಹಾಸನ : (ನ್ಯೂಸ್ ಮಲ್ನಾಡ್ ವರದಿ) ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಅನ್ನು ಕಳ್ಳನೋರ್ವ ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. 

ಹಾಸನ ನಗರದಲ್ಲಿರುವ ಪವನಪುತ್ರ ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಮೋಹನ್ ಎಂಬುವವರ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ನಡೆಸಿದ್ದಾರೆ. ಪವನ್ ಅವರದ್ದು ಹೀರೊ ಹೊಂಡಾ ಬೈಕ್ ಆಗಿದ್ದು ಅವರು ಮದುವೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರ ಚಾಲಾಕಿ ಕೃತ್ಯ ನಡೆದಿದೆ. 


ಕಳುವಾದ ಬೈಕ್ ನ್ನು ಹುಡುಕಿಕೊಡುವಂತೆ ಮೋಹನ್ ಹಾಸನದ ಬಡಾವಣೆ ಠಾಣೆಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ವಿದ್ಯಾರ್ಥಿಗಳು ಕ್ರೀಡೆ ಹಾಗೂ ಶೈಕ್ಷಣಿಕ ಚಟುವಟಿಕೆಗಳೆರಡರಲ್ಲೂ ತೊಡಗಿಕೊಳ್ಳಬೇಕು: ಅರುಣ್ ಕುಮಾರ್

ಶೃಂಗೇರಿ:  ಶೃಂಗೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಕಾಲೇಜಿಗೆ ಹಾಗೂ ಗುರುಗಳಿಗೆ ಕೀರ್ತಿ ತಂದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.


ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯರು ಗೌರವಿಸಿ ಈ ರೀತಿಯ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವಂತೆ ಪ್ರಶಂಸಿಸಿದ್ದಾರೆ. ಸಮಗ್ರ ಪ್ರಶಸ್ತಿಯೊಂದಿಗೆ ಕಾಲೇಜಿನ ವಿದ್ಯಾರ್ಥಿ ಮಂದಾರ ವೈಯಕ್ತಿಕ ಸಮಗ್ರ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. 

ನೆರವೇರಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಉಮೇಶ್ ಪೊದುವಾಳ್ ವಹಿಸಿಕೊಂಡಿದ್ದು, ಈ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯು, ಭೌತಿಕ ಮತ್ತು ಬೌದ್ಧಿಕ ಎರಡೂ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಉನ್ನತೀಕರಣಗೊಳ್ಳುತ್ತದೆ, ಆದ್ದರಿಂದ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೆ, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಶಿಸ್ತು, ಸಾಮಾಜೀಕರಣ, ಸಹಬಾಳ್ವೆಯಂತಹ ಅಮೂಲ್ಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಕುಮಾರ್ ರವರು ಮಾತನಾಡಿ, ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳ ಮಿತಿಯಲ್ಲಿಯೂ ನಾವು ಗರಿಷ್ಠ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದರ ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಮುಂದೆ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ಮಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಬರುವ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. 



ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು, ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಿದ ತರಬೇತುದಾರರು, ಸಂಪೂರ್ಣ ಸಹಕಾರ ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರನ್ನು ಕ್ರೀಡಾ ಸಂಚಾಲಕರಾದ ಡಾ. ಶ್ರೀಮಂದಾರ ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕಿ ಪೂರ್ಣಿಮಾ, ಕ್ರೀಡಾ ಸಮಿತಿಯ ಸದಸ್ಯರಾದ ಝರೀನಾ, ವಾಸುದೇವ್, ಕಾಲೇಜಿನ ಉಪನ್ಯಾಸಕರಾದ ಮಂಜುನಾಥ್, ಆದರ್ಶ, ಅಮಿತಾ, ಸ್ಮಿತಾ ಮತ್ತು ನವ್ಯ ಇದ್ದರು.