ಚಿಕ್ಕಮಗಳೂರು : ಎಲ್ಲೆಡೆ ಮುಖ್ಯ ಅಂಚೆ ಕಚೇರಿಯಲ್ಲಿ ರೂ. 25ಕ್ಕೆ ರಾಷ್ಟ್ರಧ್ವಜ ಮಾರಾಟ ಪ್ರಕ್ರಿಯೆ ಅಬ್ಬರದಿಂದ ಸಾಗಿದೆ. ಆದರೆ ಮಾರಾಟವಾಗುವ ಬಹಳಷ್ಟು ರಾಷ್ಟ್ರಧ್ವಜಕ್ಕೆ ಅಳತೆಯಿಲ್ಲ, ಹರಿದು ಹೋಗಿದೆ, ನೂಲುಗಳು ಹೊರಬಂದಿವೆ, ಹಸಿರು, ಕೇಸರಿ ಬಣ್ಣಗಳು ಅಳತೆಗಿಂತ ಮೀರಿದೆ, ಧ್ವಜದ ಮಧ್ಯಭಾಗದಲ್ಲಿ ಇರಬೇಕಾದ ಅಶೋಕ ಚಕ್ರ ಒಂದು ಬದಿಗೆ ಸರಿದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇಂತಹ ಧ್ವಜ ಮಾರಾಟ ಮಾಡುವುದು ಅಪರಾಧವಾಗಿದೆ. ರಾಷ್ಟ್ರಧ್ವಜ ಖರೀದಿಸಿದವರೆಲ್ಲಾ ಈ ರೀತಿಯ ರಾಷ್ಟ್ರವಿರೋಧಿ ಧ್ವಜಮಾರಿ ಹಣ ಮಾಡುತ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ. ಅಲ್ಲದೇ ಕೊಟ್ಟ ಹಣಕ್ಕೆ ರಶೀದಿ ಕೂಡ ಕೊಡದಿರುವುದು ಸಾರ್ವಜನಿಕ ವಲಯದಿಂದ ಟೀಕೆಗೆ ಎಡೆಮಾಡಿಕೊಟ್ಟಿದೆ.
ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ನ್ಯೂಸ್ ಮಲ್ನಾಡ್ ಈ ಕುರಿತಾಗಿ ಫ್ಯಾಕ್ಟ್ ಚೆಕ್ ನಡೆಸಿ ಧ್ವಜಗಳನ್ನು ಖರೀದಿ ಮಾಡಲು ತೆರಳಿದಾಗ ಅನೇಕ ಬಾವುಟಗಳು ಓರೆಯಾಗಿ ಕತ್ತರಿಸಲ್ಪಟ್ಟಿದ್ದರೆ, ಬಹುತೇಕ ಬಾವುಟಗಳು ವಿವಿಧ ರೀತಿಯಲ್ಲಿ ಹೊಲಿಗೆಗೆ ಒಳಪಟ್ಟಿದ್ದವು, ಅಳತೆಯಲ್ಲಿ ವ್ಯತ್ಯಾಸ ಸೇರಿದಂತೆ ಅನೇಕ ಲೋಪಗಳು ಕಂಡುಬಂದವು. ಇದ್ದ ಬಾವುಟಗಳಲ್ಲಿ ನ್ಯೂನ್ಯತೆಗಳು ಕಡಿಮೆಯಿರುವ ಬಾವುಟವನ್ನು ಖರೀದಿಸಿ ಈ ಕುರಿತಾಗಿ ರಶೀದಿ ಕೇಳಿದ್ದಕ್ಕೆ ‘ಅದನ್ನು ನೀವು ಮೋದಿ ಹತ್ರನೇ ಕೇಳಬೇಕು’ ಎಂಬ ಉತ್ತರಗಳೂ ಕೇಳಿ ಬಂದವು. ಇನ್ನು ಪಟ್ಟಣಗಳಲ್ಲಿ ಅಂಗಡಿಗಳಲ್ಲಿ ಹಾರಿಸಿರುವ ಬಹಳಷ್ಟು ಧ್ವಜಗಳ ನೂಲು ಕೆಳ ಬಂದಿದೆ.
ಇದನ್ನೂ ಓದಿ : ಜಯಪುರ : ಭಾರೀ ಮಳೆಗೆ ಬೆಳೆಹಾನಿಯಾದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕೃಷಿಕ
ಆದರೆ ಅಝಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ಅನೇಕ ಸಂಘಗಳಿಗೆ ಧ್ವಜ ನಿರ್ಮಾಣ ಮಾಡುವಂತೆ ಸರ್ಕಾರವೇ ಅನುಮತಿಸಿದೆ. ಅಲ್ಪ ಸಮಯದಲ್ಲಿ ಅತೀ ಹೆಚ್ಚು ಧ್ವಜ ನಿರ್ಮಾಣ ಮಾಡುವ ಗುರಿ ಹೊಂದಿದ ಅನೇಕ ಸಂಘ-ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಧ್ವಜವನ್ನು ನಿರ್ಮಾಣ ಮಾಡುತ್ತಿವೆ ಎಂಬ ಆರೋಪಗಳು ಬಲವಾಗಿ ಕೇಳಿಬಂದಿದೆ.
ಧ್ವಜಕ್ಕೆ ತನ್ನದೇ ಆದ ಮಹೋನ್ನತೆ ಹಾಗೂ ಘನತೆಯಿದೆ. ಅದನ್ನು ಖಾದಿ ಅಥವಾ ರೇಷ್ಮೆ ವಸ್ತ್ರದಲ್ಲಿ ತಯಾರುಮಾಡಿ ಹಾರಿಸಬೇಕು. ಇದಲ್ಲದೇ ಧ್ವಜಕ್ಕೆ ಅದರದ್ದೇ ಆದ ಸಂಹಿತೆಗಳಿದೆ, ಅದೆಲ್ಲವನ್ನೂ ಮೀರಿ ಧ್ವಜ ಮಾರಾಟ ಮಾಡಿರುವುದು ಲೋಪವಾದರೆ ಮಾಡಿರುವ ಧ್ವಜಗಳಲ್ಲಿಯೂ ಅನೇಕ ಲೋಪಗಳಿದೆ ಎಂದು ವಕೀಲರು ಹಾಗೂ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮೂರೊಳ್ಳಿ ಕಿಡಿಕಾರಿದ್ದಾರೆ.
ಧ್ವಜ ಖರೀದಿ ಮಾಡುವ ಸಮಯದಲ್ಲಿ ಲೋಪಗಳಿದೆಯೇ ಎಂದು ಗಮನಿಸಿ ನಂತರ ಧ್ವಜಗಳನ್ನು ಸಾರ್ವಜನಿಕರು ಖರೀದಿಸಬೇಕು. ಧ್ವಜಗಳಲ್ಲಿ ಯಾವುದಾದರೂ ಲೋಪಗಳಿದ್ದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಕಚೇರಿಗಳಲ್ಲಿ ಅಥವಾ ಧ್ವಜವನ್ನು ಖರೀದಿ ಮಾಡಿದಲ್ಲಿ ಬದಲಾಯಿಸಿಕೊಳ್ಳಬೇಕು, ಇಡೀ ರಾಜ್ಯದಲ್ಲಿ 25 ರೂಪಾಯಿಗಳ ಹಣವನ್ನು ಧ್ವಜಕ್ಕೆ ನಿಗದಿಪಡಿಸಿದ್ದು ನಿಗದಿಪಡಿಸಿದ ಹಣಕ್ಕಿಂತ ಎಲ್ಲಾದರೂ ಹೆಚ್ಚಿನ ಹಣವನ್ನು ಪಡೆಯುತ್ತಿದ್ದಲ್ಲಿ ಅಂತಹವುಗಳ ಕುರಿತಾಗಿ ಅಧಿಕಾರಿಗಳ ಗಮನಕ್ಕೆ ತರಬೇಕು - ಕೆ.ಎನ್ ರಮೇಶ್, ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು
ಧ್ವಜಗಳ ಮಾರಾಟದ ಕುರಿತು ಮಾತನಾಡಿದ ಸುಧೀರ್ ಕುಮಾರ್ ಅವರು ಯಾವುದೋ ಗುತ್ತಿಗೆದಾರ ಅಥವಾ ಏಜೆನ್ಸಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಬಾವುಟಗಳ ಮಾರಾಟನಡೆಸಲಾಗುತ್ತಿದೆ. ಸ್ವಾತಂತ್ರ‍್ಯ ಲಭಿಸಿದ 50 ನೇ ವರ್ಷದ ಆಚರಣೆಯನ್ನು ದೇಶ ಮಾಡಿತ್ತು ಆದರೆ ಆ ಸಂದರ್ಭಗಳಲ್ಲಿ ರಾಷ್ಟ್ರಧ್ವಜದ ಮಾರಾಟ ಮಾಡಿರಲಿಲ್ಲ. ಅವರ ಸಂಘಟನೆಯ ಧ್ವಜ ರಾಷ್ಟ್ರಧ್ವಜವಾಗಬೇಕೆಂಬ ಪ್ರಯತ್ನವನ್ನು ಪಟ್ಟು ಆಂದೋಲನ ನಡೆಸಿದವರಿಗೆ ರಾಷ್ಟ್ರಧ್ವಜದ ಗೌರವ, ಘನತೆ ಹಾಗೂ ಮಹೋನ್ನತೆಯ ಕುರಿತಾದ ಅರಿವಿಲ್ಲ. ಅಂತಹವರಿಂದ ಈ ರೀತಿಯ ಎಡವಟ್ಟುಗಳು ಸೃಷ್ಟಿಯಾಗಿದೆ ಎಂದರು.
ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿಯಲ್ಲೇನಿದೆ?
ಈಗ ಭಾರತದ ಧ್ವಜ ಸಂಹಿತೆ, 2002 ರ ಭಾಗ IIರ ಪ್ಯಾರಾ 2.2ರ ಷರತ್ತು (11) ಈಗ 'ಧ್ವಜವನ್ನು ಎಲ್ಲಾ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ ಅಥವಾ ನಾಗರಿಕರ ನಿವಾಸದಲ್ಲಿ ಪ್ರದರ್ಶಿಸಲಾಗುತ್ತದೆ, ಧ್ವಜವನ್ನು ಹಗಲು ರಾತ್ರಿ ಹಾರಿಸಲಾಗುತ್ತದೆ' ಎಂದು ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ ತ್ರಿವರ್ಣ ಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅವಕಾಶವಿತ್ತು.
ಅದೇ ರೀತಿ, ಧ್ವಜ ಸಂಹಿತೆಯ ಇನ್ನೊಂದು ನಿಬಂಧನೆಯನ್ನು ತಿದ್ದುಪಡಿ ಮಾಡಲಾಗಿದ್ದು, ‘ರಾಷ್ಟ್ರಧ್ವಜವನ್ನು ಕೈಯಿಂದ ತಿರುಗಿಸಲಾಗುತ್ತದೆ ಮತ್ತು ಕೈಯಿಂದ ನೇಯಲಾಗುತ್ತದೆ ಅಥವಾ ಯಂತ್ರವನ್ನು ತಯಾರಿಸಲಾಗುತ್ತದೆ. ಎಂಬುದನ್ನು ತಿದ್ದುಪಡಿ ಮಾಡಿದ್ದು, ಇದನ್ನು ಹತ್ತಿ/ಪಾಲಿಯೆಸ್ಟರ್/ಉಣ್ಣೆ/ರೇಷ್ಮೆ ಖಾದಿಯಿಂದ ಮಾಡಲಾಗುವುದು.' ಎಂದು ಉಲ್ಲೇಖಿಸಲಾಗಿದೆ. ಈ ಹಿಂದೆ ಯಂತ್ರದಿಂದ ತಯಾರಿಸಿದ ಮತ್ತು ಪಾಲಿಯೆಸ್ಟರ್ ನಿರ್ಮಿತ ರಾಷ್ಟ್ರಧ್ವಜ ಬಳಕೆಗೆ ಅವಕಾಶವಿರಲಿಲ್ಲ.
ಸರ್ಕಾರವು ಸಾರ್ವಜನಿಕರಿಗೆ ಉತ್ತರಾದಾಯಿಯಾಗಿರುವಂತದ್ದು, ಸರ್ಕಾರದ ಸಂಸ್ಥೆಗಳು ಧ್ವಜದ ವಿತರಣೆ ನಡೆಸುತ್ತಿದ್ದು, ರಶೀದಿಯಿಲ್ಲದೆ ಇವರುಗಳೇ ಹಣವನ್ನು ಜನರಿಂದ ಸಂಗ್ರಹ ಮಾಡುತ್ತಿರುವುದು ತಪ್ಪು ಪ್ರಕ್ರಿಯೆ. ಸರ್ಕಾರ ಮಾಡಿದ್ದೆಲ್ಲವೂ ಸರಿ ಎಂಬ ಅಹಂಕಾರವಿರುವುದರಿಂದ ಈ ರೀತಿಯಾಗಿ ಘಟನೆಗಳು ನಡೆಯುತ್ತಿದೆ - ಸುಧೀರ್ ಕುಮಾರ್ ಮೂರೊಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೊಪ್ಪ






0 Comments