ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯಿಂದ ಈ ಭಾಗದ ರೈತರು ರೋಸಿಹೋಗಿದ್ದು ನಿಯಂತ್ರಣಕ್ಕಾಗಿ ಜನರು ಪರಿತಪಿಸುತ್ತಿದ್ದಾರೆ. ಒಂದೆಡೆ ಆನೆ ದಾಳಿಗೆ ನಲುಗಿಹೋಗಿರುವ ಕೃಷಿಕರು ತೋಟ ಗದ್ದೆಗಳಲ್ಲಿ ಕೆಲಸ ಮಾಡಲಾರದೆ ಭಯದಿಂದ ಆತಂಕದಲ್ಲಿದ್ದರೆ ಕಾಡಾನೆಯನ್ನು ಹಿಡಿಯುವ ಕಾರ್ಯ ಆರಂಭವಾಗಿದೆ.

ಇದನ್ನೂ ಓದಿ : ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಅತೀವೃಷ್ಠಿ ಹಾನಿ ಸಭೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯ ರೈತರ ನಿದ್ದೆಗೆಡಿಸಿದ್ದ ಕಾಡಾನೆಯನ್ನು ಓಡಿಸಲು ಹರ ಸಾಹಸ ಪಟ್ಟು ವಿಫಲರಾಗಿರುವ ಅರಣ್ಯ ಇಲಾಖೆ ಭಾನುಮತಿ ಎಂಬ ಹೆಣ್ಣಾನೆಯ ಮೂಲಕ ಹನಿ ಟ್ರ್ಯಾಪ್ ಮಾಡಿ ಹಾವೇರಿ ಟಸ್ಕರ್ ಗಂಡಾನೆಯನ್ನು ಸೆರೆ ಹಿಡಿಯಲು ತಂತ್ರವೊಂದನ್ನು ರೂಪಿಸಿದ್ದಾರೆ. ಕಾಡಾನೆ ಓಡಾಡುವ ಜಾಗದಲ್ಲಿ ಭಾನುಮತಿ ಹೆಣ್ಣಾನೆಯನ್ನು ಓಡಾಡಿಸಿ, ಹೆಣ್ಣಾನೆ ಬಳಿ ಬರುವ ಹಾವೇರಿ ಟಸ್ಕರ್ ಕಾಡಾನೆಯನ್ನು ಬಾಬಣ್ಣ, ಸೋಮಣ್ಣ, ಬಹದ್ದೂರ್ ಹಾಗೂ ಸಾಗರ್ ಎಂಬ ನಾಲ್ಕು ಗಂಡಾನೆಗಳ ಮೂಲಕ ಸೆರೆ ಹಿಡಿಯುವ ಯೋಜನೆಯನ್ನು ಅರಣ್ಯ ಇಲಾಖೆ ಯೋಜಿಸಿದೆ ಎನ್ನಲಾಗಿದೆ. 

ಈ ಕಾರ್ಯಾಚರಣೆಗೆ ಸುಮಾರು 11 ಮಾವುತರು 5 ಸಾಕಾನೆಗಳು, ಆರ್ ಎಫ್ ಒ, ಡಿ.ಆರ್.ಎಫ್.ಒ, ಅರಣ್ಯ ರಕ್ಷಕರು, ವಾಚರ್ ಗಳು ಸೇರಿದಂತೆ 25 ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಭಂದಿಗಳು ಕಾರ್ಯಾಚರಣೆಯ ತಂಡದಲ್ಲಿದ್ದು, ಇನ್ನೆರಡು ದಿನಗಳಲ್ಲಿ ಹಾವೇರಿ ಟಸ್ಕರ್ ಕಾಡಾನೆ ಬಂಧಿಸುವ ವಿಶ್ವಾಸದಲ್ಲಿ ಇಲಾಖೆಯ ಅಧಿಕಾರಿಗಳಿದ್ದಾರೆ. 

ರಾತ್ರಿ ಹೊತ್ತಲ್ಲಿ ರೈತರ ತೋಟಗಳಿಗೆ ದಾಳಿ ನಡೆಸಿ ಅಲ್ಲಿರುವ ಅಡಿಕೆ, ಬಾಳೆ ಮತ್ತು ತೆಂಗಿನ ಮರಗಳನ್ನು ತಿನ್ನುವ ಮೂಲಕ ದಾಂಧಲೆ ಎಬ್ಬಿಸುವ ಈ ಕಾಡಾನೆ, ಬೆಳಗಾಗುತ್ತಿದ್ದಂತೆ ಎಲೆಮಡಿಲು ಸಮೀಪದ ದುರ್ಗಮ ಬೆಟ್ಟವೊಂದರ ತುದಿ ಏರಿ ನಿಂತುಕೊಳ್ಳುತ್ತಿದೆ. ಬೆಟ್ಟದ ಎರಡೂ ಬದಿಗಳಲ್ಲಿ ದೊಡ್ಡ ಪ್ರಪಾತವಿರುವ ಕಾರಣ ಬೆದರಿಸಿದರೆ ಕಾಡಾನೆ ಭಯದಲ್ಲಿ ಓಡಿ ಪ್ರಪಾತಕ್ಕೆ ಬೀಳುವ ಅಪಾಯವಿರುವ ಸಂಭವವಿದ್ದು ಕುತ್ತಿಗೆಯಲ್ಲಿರುವ ರೇಡಿಯೋ ಕಾಲರ್ ನಿಂದಾಗಿ ಆನೆ ಇರುವ ನಿಖರ ಸ್ಥಳ ಗೊತ್ತಿದ್ದರೂ ಈ ಕಾಡಾನೆಯನ್ನು ಓಡಿಸಲು ಪ್ರಯತ್ನಿಸಿದರೂ ಈ ವರೆಗೆ ಸಾಧ್ಯವಾಗಿಲ್ಲ.


2022 ರ ಫೆಬ್ರವರಿ ತಿಂಗಳಿನಲ್ಲಿ ಸುಮಾರು 10 ವರ್ಷದ ಈ ಕಾಡಾನೆಯನ್ನು ಹಾವೇರಿಯಲ್ಲಿ ಸೆರೆ ಹಿಡಿಯಲಾಗಿತ್ತು. ಆನಂತರ ಇದಕ್ಕೆ ರೇಡಿಯೋ ಕಾಲರ್ ಬೆಲ್ಟ್ ಅಳವಡಿಸಿ ತರಿಕೆರೆ ತಾಲೂಕಿನ ತಣಿಗೇಬೈಲು ಅರಣ್ಯಕ್ಕೆ ಬಿಡಲಾಗಿತ್ತು. ಅಲ್ಲಿಂದ ಹೆಬ್ಬೆ, ಮುತ್ತೋಡಿ ಅಭಯಾರಣ್ಯದ ಮೂಲಕ ಸಾಗಿ ಬಂದು ಮೇಗುಂದಾ ಹೋಬಳಿಯ ಕಾಡು ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನೆಯನ್ನು ಬೇರೆಡೆಗೆ ಅಟ್ಟುವವರೆಗೂ ಸ್ಥಳೀಯರಲ್ಲಿ ತೀವ್ರ ಆತಂಕ ಮನೆಮಾಡಿದ್ದು, ಆನೆ ದಾಳಿಯಿಂದ ಸಂಭವಿಸಿದ ಬೆಳೆ ಹಾನಿಗೂ ಸಹ ಆದಷ್ಟು ಶೀಘ್ರವಾಗಿ ಅಧಿಕಾರಿಗಳು ಸೂಕ್ತವಾದ ಪರಿಹಾರವನ್ನು ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.