
ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಶೃಂಗೇರಿಯಿಂದ ಮೇಗೂರು ಸಂಪರ್ಕಿಸುವ ಮಧ್ಯರಸ್ತೆಯಾದ ಹೆಗ್ಗಾರುಕುಡಿಗೆ ರಸ್ತೆಯಲ್ಲಿ ಬಿರುಕುಮೂಡಿದೆ.
ಇದನ್ನೂ ಓದಿ : ಕೊಪ್ಪ : ರಸ್ತೆಯ ಪಕ್ಕದಲ್ಲಿರುವ ಬೃಹದಾಕಾರದ ಮರ ತೆರವುಗೊಳಿಸುವಂತೆ ಸಾರ್ವಜನಿಕರ ಒತ್ತಾಯ
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹೆಗ್ಗಾರುಕುಡಿಗೆ ರಸ್ತೆಯ ತಡೆಗೋಡೆಯ ಅಕ್ಕಪಕ್ಕದಲ್ಲಿನ ಮಣ್ಣು ಕುಸಿದಿದ್ದು, ತಡೆಗೋಡೆ ಸಹ ಕುಸಿತಗೊಳ್ಳುವ ಭೀತಿ ಎದುರಾಗಿದೆ. ಮಣ್ಣು ಕುಸಿದಿರುವ ಪರಿಣಾಮ ಮೇಲ್ಭಾಗದ ರಸ್ತೆಯಲ್ಲೂ ಸಹ ಬಿರುಕುಮೂಡಿದೆ.
ಗಡಿಕಲ್ ಭಾಗದಿಂದ ಮೇಗೂರು, ಶಾಂತಿಗ್ರಾಮ, ತಲವಾನೆ ಸೇರಿದಂತೆ ಇನ್ನಿತರ ಹಳ್ಳಿಗಳಿಗೆ ಪ್ರಮುಖವಾಗಿ ಸಂಪರ್ಕಕಲ್ಪಿಸುವ ಮುಖ್ಯ ರಸ್ತೆಯಿದಾಗಿದ್ದು, ತಡೆಗೋಡೆಯ ಇಕ್ಕೆಲದಲ್ಲಿರುವ ಮಣ್ಣು ಕುಸಿದಿರುವ ಪರಿಣಾಮ ಸ್ಥಳೀಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಸುಮಾರು ಮೂರರಿಂದ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ್ದ ತಡೆಗೋಡೆಯ ಮೇಲ್ಭಾಗದಲ್ಲಿ ಬಿರುಕು ಬಂದಿದ್ದು ರಸ್ತೆಯಲ್ಲೂ ಬಿರುಕು ಮೂಡಿರುವುದು ಕಾಣಸಿಗುತ್ತದೆ. ತಡೆಗೋಡೆ ಪಕ್ಕದಲ್ಲಿನ ಧರೆಯ ಮಣ್ಣು ಸಹ ಕುಸಿದಿದ್ದು ರಸ್ತೆ ಸಂಪರ್ಕಸ್ಥಗಿತಗೊಳ್ಳುವ ಸಂಭವ ಹೆಚ್ಚಾಗಿ ಕಂಡುಬರುತ್ತಿದೆ.
ಆತಂಕದಲ್ಲಿ ಮನೆಯ ನಿವಾಸಿಗಳು :
ಬಿರುಕು ಮೂಡಿರುವ ರಸ್ತೆಯ ಕೆಳಭಾಗದಲ್ಲಿ ಮನೆಗಳಿದ್ದು ಅಂತೆಯೇ ರಸ್ತೆಯ ಪಕ್ಕದಲ್ಲೂ ಅನೇಕ ಮನೆಗಳಿರುವುದರಿಂದ ಸ್ಥಳೀಯರಿಗೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿದೆ.
ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸ್ಥಳೀಯರಿಗೆ ಯಾವುದೇ ರೀತಿಯ ಅಪಾಯಗಳು ಎದುರಾಗದಂತೆ ಸೂಕ್ತ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ.
ಹೊರನಾಡು ಸಂಪರ್ಕಿಸುವ ರಸ್ತೆ ಸಹ ಇದಾಗಿದ್ದು ಕಳೆದ ಕೆಲ ದಿನಗಳ ಹಿಂದೆ ಇಲ್ಲಿನ ಕೊಗ್ರೆ ಸೇತುವೆ ಕುಸಿದಿದ್ದು ಸಂಚಾರಕ್ಕೆ ತಡೆ ಉಂಟಾಗಿತ್ತು. ಪ್ರಸ್ತುತ ಹೆಗ್ಗಾರು ಮಾರ್ಗವೂ ಸಹ ಕುಸಿಯುವಂತಾಗಿದ್ದು ಈ ಮಾರ್ಗದಲ್ಲಿ ಓಡಾಟ ನಡೆಸುವ ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಬೇಕಿದೆ.





0 Comments