ಕೇವಲ ಎಂಟು ದಿನಗಳಲ್ಲಿ ದೇಶಾದ್ಯಂತ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ವಿವಿಧ ಸಾರ್ವಜನಿಕ ಮಂಡಳಿ ಹಾಗೂ ಊರಿನ ಜನರು ಭರದಿಂದ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೋವಿಡ್ ಮಹಾಮಾರಿ ಸೋಂಕು ಹೆಚ್ಚಿದ್ದರಿಂದ ಗಣೇಶ ಚತುರ್ಥಿಗೆ ತೀವ್ರ ಕಟ್ಟುನಿಟ್ಟಿನ ಸೂಚನೆಗಳಿದ್ದವು. ಈ ಬಾರಿ ಅದ್ಧೂರಿಯಾಗಿ ಗಣೇಶೋತ್ಸವದ ತಯಾರಿಯಲ್ಲಿ ತೊಡಗಿದ್ದ ಮಂಡಳಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೆಲ ನಿಯಮಗಳನ್ನು ವಿಧಿಸಿದ್ದು ಈ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಗಣೇಶೋತ್ಸವ ಆಚರಿಸುವಂತೆ ತಿಳಿಸಲಾಗಿದೆ.


ಸಾರ್ವಜನಿಕ ಗಣೇಶೋತ್ಸವಕ್ಕೆ ವಿಧಿಸಿರುವ ನಿಯಮಾವಳಿಗಳು ಈ ಕೆಳಗಿನಂತಿದೆ : 

  • ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆ ಅನುಮತಿ ಕಡ್ಡಾಯ.
  • ನ್ಯಾಯಾಲಯದ ನಿರ್ದೇಶನದಂತೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ.
  • ಡಿ.ಜೆ. ಹಾಕಲು ಅನುಮತಿಯಿಲ್ಲ.
  • ಬೇರೆ ಧರ್ಮಗಳ ಜನರ ಭಾವನೆಗಳಿಗೆ ಧಕ್ಕೆತರುವಂತೆ ನಡೆದುಕೊಳ್ಳುವಂತಿಲ್ಲ.
  • ಮೂರ್ತಿ ಪ್ರತಿಷ್ಠಾಪನೆ ವೇಳೆ ಮೈಕ್, ಪೊಲೀಸ್, ವಿದ್ಯುತ್ ಇಲಾಖೆಯಿಂದ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ.
  • ಪೊಸ್ಟರ್, ಬ್ಯಾನರ್ ಅಳವಡಿಸಲು ಸ್ಥಳೀಯ ಆಡಳಿತದಿಂದ ಅನುಮತಿ ಕಡ್ಡಾಯ.
  • ಸಂಜೆ 6 ಗಂಟೆಯ ಒಳಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸೂಚನೆ.

ಈ ಕುರಿತಾಗಿ ಬಾಳೆಹೊನ್ನೂರಿನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕೊಪ್ಪ ಉಪವಿಭಾಗದ 9 ಠಾಣಾ ವ್ಯಾಪ್ತಿಯಲ್ಲಿ 199ಕ್ಕೂ ಅಧಿಕ ಕಡೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದರಲ್ಲಿ 6-7 ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದ ಹಿನ್ನೆಲೆ ಅಗತ್ಯ ಕ್ರಮಗಳನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದರು.



ವಿಸರ್ಜನಾ ಸಮಯ ವಿಸ್ತರಣೆಗೆ ಸಾರ್ವಜನಿಕರ ಮನವಿ :

ಸಂಜೆ 6 ಗಂಟೆಯ ಒಳಗೆ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂಬುದಾಗಿ ಹೊರಡಿಸಿರುವ ನಿಯಮವನ್ನು ಸಡಿಲಿಕೆ ಮಾಡುವಂತೆ ಸಾರ್ವಜನಿಕರು ಕೋರಿದ್ದು ಸಂಜೆ ಆರು ಗಂಟೆಯ ಒಳಗೆ ಗಣಪತಿ ವಿಸರ್ಜನೆ ಅಸಾಧ್ಯ, ಕಳೆದ ಎರಡು ವರ್ಷಗಳಿಂದ ಕೊರೋನ ನಿಯಮಾವಳಿಗಳಿಂದ ಅದ್ಧೂರಿ ಆಚರಣೆ ಹಾಗೂ ಗಣೇಶ ವಿಸರ್ಜನೆ ನಡೆದಿರಲಿಲ್ಲ. ಈ ಬಾರಿ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ ಆದ ಕಾರಣ ಕನಿಷ್ಠ ಎಂಟು ಗಂಟೆಯವರೆಗಾದರೂ ಸಮಯ ನೀಡಬೇಕು ಎಂದರು. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಎಸ್ಪಿ ಉಮಾ ಪ್ರಶಾಂತ್ ಗಣಪತಿ ವಿಸರ್ಜನೆಗೆ ಎಂಟು ಗಂಟೆವರೆಗೆ ಅವಕಾಶ ನೀಡುವ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.