ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಹಂಚಿನ ಸಿದ್ದಾಪುರದ ನಿವಾಸಿ ಸುಶೀಲಮ್ಮ ಎಂಬುವವರ ಮಾಂಗಲ್ಯ ಸರಕ್ಕೆ ಪಾಲೀಶ್ ಮಾಡಿಕೊಡುವುದಾಗಿ ನಂಬಿಸಿ ನಯವಂಚಕರು ಎಸ್ಕೇಪ್ ಆಗಿರುವ ಘಟನೆಯೊಂದು ವರದಿಯಾಗಿದೆ.
ಸುಶೀಲಮ್ಮ ಅವರ 30 ಗ್ರಾಂ ಚಿನ್ನಾಭರಣಕ್ಕೆ ಪಾಲಿಶ್ ಹಾಕಿಕೊಡುವುದಾಗಿ ನಂಬಿಸಿದ ಇಬ್ಬರು ಅಪರಿಚಿತರು ಮನೆಯ ಮುಂದೆ ಬಟ್ಟೆ ಒಗೆಯುತ್ತಿದ್ದ ಸುಶೀಲಮ್ಮರ ಬಳಿ ಬೈಕ್‌ನಲ್ಲಿ ಬಂದು ಹಿತ್ತಾಳೆ, ಬೆಳ್ಳಿ ಸಾಮಾಗ್ರಿಗಳಿಗೆ ಪಾಲಿಶ್ ಹಾಕ್ತೀವಿ ಪಾತ್ರೆಗಳು ಆಭರಣಗಳು ಇದ್ದರೆ ಕೊಡಿ ಎಂದು ಪೌಡರ್ ತೋರಿಸಿದ್ದಾರೆ ಇದಕ್ಕೆ ಪ್ರತಿಯಾಗಿ ಯಾವ ಪಾತ್ರೆಗಳು ಇಲ್ಲ ನಡೆಯಿರಿ ಎಂದು ಮಹಿಳೆ ಹೇಳಿದ್ದಾರೆ.
ಈ ಸಮಯದಲ್ಲಿ ಅಲ್ಲಿಗೆ ಪ್ರವೇಶಿಸಿದ ಗೋವಿಂದಮ್ಮ ಎಂಬುವವರು ಒಂದು ಪಾತ್ರೆ ಹಿಡಿದುಕೊಂಡು ಬಂದಿದ್ದಾರೆ. ಈ ವೇಳೆ ಕಳ್ಳರು ಗೋವಿಂದಮ್ಮರಿಗೆ ಪಾತ್ರೆಯನ್ನು ಹೊಳೆಯುವಂತೆ ಮಾಡಿಕೊಟ್ಟಿದ್ದಾರೆ. ಹಾಗೂ ಉಂಗುರವನ್ನೂ ತೊಳೆದುಕೊಟ್ಟಿದ್ದಾರೆ. ಯಾವಾಗ ಗೋವಿಂದಮ್ಮ ಪಾತ್ರೆ ಮತ್ತು ಉಂಗುರವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದಂತೆ ಸುಶೀಲಮ್ಮರ ಮಾಂಗಲ್ಯ ಸರ ಕೊಡಮ್ಮ ಪಾಲಿಶ್ ಮಾಡಿಕೊಡ್ತೀವಿ ಎಂದು ನಯವಾಗಿ ಅವರಲ್ಲಿ ಕೇಳಿದ್ದಾರೆ.
ಗೋವಿಂದಮ್ಮರ ಪಾತ್ರೆಯನ್ನು ಪಾಲಿಶ್ ಮಾಡಿಕೊಟ್ಟಿರುವುದನ್ನು ಕಂಡು ನಂಬಿಕೆ ಹೊಂದಿದ ಸುಶೀಲಮ್ಮ ಮಾಂಗಲ್ಯ ಸರವನ್ನು ಅಪರಿಚಿತರಬಳಿ ಕೊಟ್ಟಿದ್ದಾರೆ. ಸರವನ್ನು ಪಡೆದ ಕಳ್ಳರು ಒಂದು ಲೋಟ ನೀರು ಕೊಡುವಂತೆ ಕೇಳಿದ್ದಾರೆ. ಮಹಿಳೆ ಮನೆಯೊಳಗೆ ಕಾಲಿಡುತ್ತಿದ್ದಂತೆ ವಿರುದ್ಧ ದಿಕ್ಕಿನಲ್ಲಿ ಖತರ್ನಾಕ್ ಖದೀಮರು ಕಾಲ್ಕಿತ್ತಿದ್ದಾರೆ. ಎತ್ತ ಹುಡುಕಿದರೂ ಅಪರಿಚಿತರು ಕಾಣದೆ ಇದ್ದುದರಿಂದ ಈ ಕುರಿತಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಚಿನ್ನದ ಮಾಂಗಲ್ಯಸರ ಕಳುವಾಗಿರುವುದಾಗಿ ದೂರು ದಾಖಲಿಸಿದ್ದಾರೆ.
ಇಂತಹ ದುಷ್ಕೃತ್ಯ ಎಸಗುವವರಿಂದ ಜನರು ಎಚ್ಚರಿಕೆಯಿಂದಿರುವುದು ಸೂಕ್ತ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.


.jpeg)

0 Comments