ಸಕಲೇಶಪುರ : (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ದಾಳಿಗೆ ವೃದ್ದನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಇದನ್ನೂ ಓದಿ : ಚಿಕ್ಕಮಗಳೂರು ನೂತನ ಪೊಲೀಸ್ ವರಿಷ್ಠಾಧಿಕಾರಿ ಆಗಿ ಉಮಾ ಪ್ರಶಾಂತ್ ನೇಮಕ : ಅಕ್ಷಯ್ ಹಾಕೆ ವರ್ಗಾವಣೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲತೋಟ ಗ್ರಾಮದಲ್ಲಿನ ರಾಜದೀಪ ಎಂಬುವವರ ಕಾಫಿ ತೋಟದಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 70 ವರ್ಷ ಪ್ರಾಯದ ಕೇರಳ ಮೂಲದ ರಾಮಕೃಷ್ಣ ಆನೆ ತುಳಿತಕ್ಕೆ ಬಲಿಯಾದ ಮೃತ ದುರ್ದೈವಿ. 


ಕಳೆದ ಮೂರು ದಿನಗಳ ಹಿಂದೆ ರಾಮಕೃಷ್ಣ ಅವರು ನಾಪತ್ತೆಯಾಗಿದ್ದರು ಎನ್ನಲಾಗಿದ್ದು ಅವರನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದಾಗ ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ. ಈ ಕುರಿತಾಗಿ ತೋಟದ ಮಾಲೀಕರು ಬಂದು ತೋಟದಲ್ಲಿ ಎಲ್ಲೆಡೆ ಹುಡುಕಿದಾಗ ತೋಟದ ಮನೆಯಿಂದ ಕೆಲ ಅಂತರದಲ್ಲಿ ರೈಟರ್ ರಾಮಕೃಷ್ಣ ಮೃತಪಟ್ಟಿರುವುದು ಕಂಡಿದೆ. 

ಆನೆ ತುಳಿತಕ್ಕೆ ವ್ಯಕ್ತಿ ಬಲಿಯಾದ ಸ್ಥಳಕ್ಕೆ ಯಸಳೂರು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನಾ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.