ಚಿಕ್ಕಮಗಳೂರು 

ಭಾರೀ ಮಳೆಯಿಂದ ಮೂಡಿಗೆರೆಯಲ್ಲಿ ಸಾಲು ಸಾಲು ಅವಾಂತರ :

ಕಳೆದ ನಾಲ್ಕೈದು ದಿನಗಳಿಂದ ಮೂಡಿಗೆರೆ ಭಾಗದಲ್ಲಿ ಸುರಿಯುತ್ತಿರುವ ರಣಮಳೆಯು ಅನೇಕ ಅವಘಡಗಳನ್ನು ಸೃಷ್ಟಿಸಿದೆ. ಇಂದು ಬೆಳಗ್ಗೆ ಬೀಸಿದ ಬಿರುಗಾಳಿಯ ಆರ್ಭಟಕ್ಕೆ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ಮೂಡಿಗೆರೆಯ ಸಂದೇಶ್ ಎಂಬುವವರ ಮನೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು ಇಲ್ಲಿನ ಹಾರ್ಮಕ್ಕಿ ಗ್ರಾಮದಲ್ಲೂ ಗಾಳಿಮಳೆಯ ತೀವ್ರತೆಗೆ ಮನೆಯ ಗೋಡೆಗಳು ಕುಸಿದು ಬಿದ್ದಿದೆ. ಇಲ್ಲಿನ ಬೈರೇಗೌಡ ಎಂಬುವರಿಗೆ ಸೇರಿದ ಮನೆ ಹಾನಿಯಾಗಿದ್ದು ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ಹಾಗೂ ಕಳಸ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಮಳೆಯ ಅವಾಂತರಗಳು ಮಾತ್ರ ಕಡಿಮೆಯಾಗುತ್ತಿಲ್ಲ. 

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರು : 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದೆ. ಇಂದು ಬೆಳಗ್ಗೆ ಮೂಡಿಗೆರೆ ರಸ್ತೆಯ ಕಬ್ಬಿಣ ಸೇತುವೆ ಬಳಿ ಚಿಕ್ಕಮಗಳೂರಿನ ಯಾದವ್ ಎಂಬುವವರಿಗೆ ಸೇರಿದ ಆಲ್ಟೋ ಕಾರು ಅಪಘಾತಕ್ಕೆ ಸಿಲುಕಿದೆ. ಅದೃಷ್ಟವಶಾತ್ ಎಂಬಂತೆ ಕಾರಿನಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ಮರಳಿಬರುತ್ತಿದ್ದ ಸಂದರ್ಭದಲ್ಲಿ ಭಾರಿ ಮಳೆಯಿಂದ ಕಾರು ಎಡ ಭಾಗಕ್ಕೆ ಜಾರಿ ಕಾಫಿ ತೋಟದ ದಿಬ್ಬಕ್ಕೆ ಗುದ್ದಿದೆ ಎನ್ನಲಾಗಿದೆ. ಸ್ಥಳೀಯರು ಹಾಗೂ ಇತರೆ ವಾಹನಗಳ ಪ್ರವಾಸಿಗರಿಂದ, ಟ್ರಾಕ್ಟರ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಗಿದ್ದು ಕಾರಿನಲ್ಲಿದ್ದವರು ಸುರಕ್ಷಿತವಾಗಿದ್ದಾರೆ. 

ಮನೆ ಮೇಲೆ ಬಿದ್ದ ಮರ ಇಬ್ಬರ ಸಾವು :

ನಿನ್ನೆ ತಡರಾತ್ರಿ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದ ಚಂದ್ರಮ್ಮ ಎಂಬುವವರ ಮನೆಯ ಮೇಲೆ ಬೃಹದಾಕಾರದ ಮರ ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ನಾಲ್ವರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಸರಿತಾ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಮಹಿಳೆ ಚಂದ್ರಮ್ಮ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದರು.

ಕೊಪ್ಪ : ರಸ್ತೆಯ ಪಕ್ಕದಲ್ಲಿರುವ ಬೃಹದಾಕಾರದ ಮರ ತೆರವುಗೊಳಿಸುವಂತೆ ಸಾರ್ವಜನಿಕರ ಒತ್ತಾಯ

ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೆಳಗಿನಕೊಡುಗೆ ಗ್ರಾಮದಲ್ಲಿರುವ ಬಿ.ಜಿ ಕಟ್ಟೆ ಮತ್ತು ಅಗಳಗಂಡಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹದಾಕಾರದ ಮರವಿದ್ದು ಅದನ್ನು ಸಾರ್ವಜನಿಕರ ಸಂಚಾರದ ಅನುಕೂಲಕ್ಕಾಗಿ ತೆರವುಗೊಳಿಸಿ ಕೊಡಬೇಕೆಂದು ಸ್ಥಳೀಯರು ಕೋರಿದ್ದಾರೆ. ಈ ಹಿಂದಿನಿಂದಲೂ ಮರವನ್ನು ತೆರವುಗೊಳಿಸಿಕೊಡುವಂತೆ ಅರಣ್ಯ ಇಲಾಖೆಯ ಅಧಿಕಾರಿವರ್ಗಕ್ಕೆ ಮನವಿ ಸಲ್ಲಿಸಿದರೂ ಕೂಡ ಅವರು ಸೂಕ್ತವಾದ ಸ್ಪಂದನೆ ನೀಡುತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದ್ದು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಗಮನಹರಿಸಬೇಕೆಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ. 


ಶಿವಮೊಗ್ಗ :

ಮನೆ ಗೋಡೆ ಕುಸಿದು ನಾಲ್ವರಿಗೆ ಗಾಯ :

ಶಿವಮೊಗ್ಗ: ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ವರು ಗಾಯಗೊಂಡ ಘಟನೆಯು ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಸಮೀಪದ ಗೌಳಿ ನಗರದಲ್ಲಿ ನಡೆದಿದೆ.

ಗೌಳಿನಗರದ ಬೀಬಿ ಜಾನ್ ಕುಟುಂಬದವರು ಮನೆಯಲ್ಲಿ ರಾತ್ರಿಯ ವೇಳೆಯಲ್ಲಿ ಮಲಗಿದ್ದರು. ಮಂಗಳವಾರ ಬೆಳಗಿನ ಜಾವ ಮನೆ ಕುಸಿದಿದೆ. ಮನೆಯಲ್ಲಿದ್ದ ಅಬ್ದುಲ್ ಎಂಬ ಯುವಕನ ಕಾಲು ಮೂಳೆ ಸಹ ಮುರಿದಿದ್ದು. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮರಳುಗಾರಿಕೆ ತಡೆಗೆ ಸೂಚನೆ :

ಶಿವಮೊಗ್ಗ : ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಯಲು ತಹಶೀಲ್ದಾರ್‍ ಗಳಾದವರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಸೂಚನೆ ನೀಡಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮರಳುಗಾರಿಕೆ ಅವಧಿ ಆರಂಭವಾಗುವುದಕ್ಕೂ ಪೂರ್ವದಲ್ಲೇ, ಅಕ್ರಮ ಮರಳುಗಾರಿಕೆ ನಡೆಯುವುದನ್ನು ತಡೆಗಟ್ಟಲು ತಪಾಸಣಾ ತಂಡಗಳನ್ನು ರಚಿಸಬೇಕು. ಅಕ್ರಮ ಮರಳುಗಾರಿಕೆ ಪತ್ತೆ ಹಚ್ಚಿ ಅತಿ ಹೆಚ್ಚಿನ ದಂಡವನ್ನು ವಿಧಿಸಿ ಕಾನೂನು ಕ್ರಮ ಜರುಗಿಸಬೇಕು. ಪ್ರತಿ ತಾಲೂಕಿನಲ್ಲಿ ಈ ಹಿಂದೆ ರಚಿಸಲಾಗಿದ್ದ ತನಿಖಾ ಠಾಣೆ ಮತ್ತು ಚಾಲಿತ ದಳಗಳನ್ನು ಪುನಶ್ಚೇತನಗೊಳಿಸಬೇಕು ಎಂದರು.

ಹಾಸನ :

ಸಚಿವ ಅಶ್ವತ್ಥ್​​ ನಾರಾಯಣ್​ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ 

ಹಾಸನದ ಜಿಟ್ಟೆನಹಳ್ಳಿ ಗ್ರಾಮದಲ್ಲಿ ಮಾತನಾಡಿದ HDK ಮುಂದಿನ ಚುನಾವಣೆಯಲ್ಲಿ ಟಮ ಟಮ ಎನ್ನುವುದನ್ನು ಜನರು ಅಶ್ವತ್ಥ್​​ ನಾರಾಯಣ್​ಗೆ ತೋರಿಸುತ್ತಾರೆ. ನಿನ್ನಿಂದ ನಾನು ಕಲಿಯಬೇಕಿಲ್ಲ, ನನ್ನ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ. ನನ್ನ ಬಗ್ಗೆ ಮಾತನಾಡುವುದಕ್ಕೆ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಕಿಡಿಕಾರಿದ್ದಾರೆ. ನಕಲಿ ಮಾಫಿಯಾ ಮಾಡಿರುವುದು ಗೊತ್ತಿದೆ ನಮಗೂ ಮಾಹಿತಿ ಇದೆ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಕಿಡಿಕಾರಿದರು.

ಸಿದ್ದರಾಮೋತ್ಸವಕ್ಕೆ ತೆರಳಿದ್ದ ಜೆಡಿಎಸ್ ಕಾರ್ಯಕರ್ತರು : 

ಸಿದ್ದರಾಮೋತ್ಸವಕ್ಕೆ ಜೆಡಿಎಸ್ ಕಾರ್ಯಕರ್ತರು ಕೂಡ ಹೋಗಿದ್ದರು ಎಂಬುದಾಗಿ ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವೆಲ್ಲಿ ಇರ್ತೀರೋ ನಾವೂ ಇಲ್ಲೇ ಇರ್ತೀವಿ, ನಾವು ಕಾಂಗ್ರೆಸ್ ಅಂತಲ್ಲ, ನಾವು ಸಿದ್ದರಾಮಯ್ಯರ ಅಭಿಮಾನಿಗಳು. ಅವರ ಹುಟ್ಟು ಹಬ್ಬ ಒಮ್ಮೆ ನೋಡಿಕೊಂಡು ಬರ್ತೀವಿ ಅಂತ ಸ್ವತಃ ಕಾರ್ಯಕರ್ತರು ಹೇಳಿದ್ರು ಎಂದರು.