ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕುವಿನಿಂದ ಇರಿದ ಆರೋಪಿಯನ್ನು ಪೊಲೀಸರು ಇಂದು ಬೆಳಗ್ಗಿನ ಜಾವ ಬಂಧಿಸಲು ತೆರಳಿದ ವೇಳೆಯಲ್ಲಿ ಆರೋಪಿಯು ಪೊಲೀಸರಿಗೆ ಚೂರಿಯಿಂದ ಇರಿಯಲು ಮುಂದಾಗಿದ್ದು ಆತ್ಮರಕ್ಷಣೆಯ ಸಲುವಾಗಿ ಪೊಲೀಸರು ಗುಂಡೇಟು ಹಾರಿಸಿದ್ದಾರೆ.  

ವೀಡಿಯೋ ನೋಡಿ :  ಸಾವರ್ಕರ್ ಫೋಟೋ ವಿವಾದ, ವ್ಯಕ್ತಿಗೆ ಚಾಕು ಇರಿತ

ಸ್ವಾತಂತ್ರ್ಯಾ ದಿನಾಚರಣೆಯ ದಿನವಾದ ನಿನ್ನೆ ಮದ್ಯಾಹ್ನದ ವೇಳೆಗೆ ಶಿವಮೊಗ್ಗ ಟೌನ್‌, ದೊಡ್ಡಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಗಾಂಧಿ ಬಜಾರ್‌ ನ ತರಕಾರಿ ಮಾರುಕಟ್ಟೆಯ ಸಮೀಪದ ನಿವಾಸಿ  ಪ್ರೇಮ್‌ ಸಿಂಗ್‌ ಎಂಬ 20 ವರ್ಷ ಪ್ರಾಯದ ಯುವಕ ಮನೆಯ ಹೊರಗಿದ್ದಾಗ ಆತನ ಮೇಲೆ ಚಾಕುವಿನಿಂದ ಹಲ್ಲೆಮಾಡಲಾಗಿತ್ತು. ಈ ಕುರಿತಾಗಿ  ಗುನ್ನೆ ಸಂಖ್ಯೆ 334/2022 ಕಲಂ 307 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. 


ಆರೋಪಿಗಳಾದ ನದೀಮ್‌ ಮತ್ತು ಅಬ್ದುಲ್‌ ರೆಹಮಾನ್‌ ರವರುಗಳನ್ನು ದಸ್ತಗಿರಿ ಮಾಡಿದ್ದ ಪೊಲೀಸರು ಇನ್ನುಳಿದ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ಮುಂದುವರೆದಿದ್ದರು. 

ಇಂದು ಬೆಳಗಿನ ಜಾವ ಆರೋಪಿತನಾದ ಮೊಹಮ್ಮದ್‌ ಜಬೀ ಅಲಿಯಾಸ್ ಚರ್ಬಿ ಮಾರ್ನಾಮಿ ಬೈಲು, ಶಿವಮೊಗ್ಗ ಈತನನ್ನು ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಆರೋಪಿ ಮುಂದಾದಾಗ  ವಿನೋಬನಗರ ಪೊಲೀಸ್ ಠಾಣೆ ಪಿಎಸ್ಐ ಮಂಜುನಾಥ್‌ ಎಸ್. ಕುರಿ ಅವರು ತಮ್ಮ ಹಾಗೂ ಸಿಬ್ಬಂದಿಗಳ ಆತ್ಮ ರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ  ಸೇವಾ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾರೆ.

ಈ ನಂತರದಲ್ಲಿ ಗಾಯಗೊಂಡ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ದೊಡ್ಡಪೇಟೆ ಠಾಣೆಯಲ್ಲಿ ಗುನ್ನೆ ಸಂಖ್ಯೆ 0337/2022  ಕಲಂ 353, 307 ಐಪಿಸಿ  ರೀತ್ಯಾ ಪ್ರಕರಣವನ್ನು ದಾಖಲು ಮಾಡಿದ್ದಾರೆ. 


ಅಹಿತಕರ ಘಟನೆ ಉಂಟಾದ ಹಿನ್ನೆಲೆ ಇಂದು ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.