ಹಾಸನ : (ನ್ಯೂಸ್ ಮಲ್ನಾಡ್) ಹಾಸನ ಹಾಗೂ ಕೊಡಗು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಉಕ್ಕಿ ಹರಿಯುತ್ತಿದ್ದ ಹಳ್ಳದ ಸೇತುವೆಯೊಂದರ ಮೇಲೆ ಬೈಕ್ ಸವಾರನೊಬ್ಬ ಅಜಾಗರೂಕತೆಯಿಂದ ಚಾಲನೆಮಾಡಿ ಸೇತುವೆಯಿಂದ ಕೊಚ್ಚಿಹೋಗುತ್ತಿದ್ದ ವೇಳೆ ಸ್ಥಳೀಯರೇ ಆತನನ್ನು ರಕ್ಷಣೆ ಮಾಡಿರುವ ಘಟನೆ ವರದಿಯಾಗಿದೆ. 

ಹಾಸನದ ನಗ್ಗೇಹಳ್ಳಿ ಬಳಿ ಈ ಘಟನೆ ನಡೆದಿದ್ದು ನಿರಂತರವಾಗಿ ಸುರಿದ ಮಳೆಗೆ ಈ ಭಾಗದ ಹಳ್ಳ ಕೊಳ್ಳಗಳು, ನದಿಗಳು ಭಾರೀ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತಿದ್ದು ಅಂತೆಯೇ ನುಗ್ಗೇಹಳ್ಳಿ ಸೇತುವೆಯು ಜಲಾವೃತಗೊಂಡಿತ್ತು. ಈ ಸಮಯದಲ್ಲಿ ಬೈಕ್ ನಲ್ಲಿ ರಮೇಶ್ ಎಂಬಾತ ಚನ್ನರಾಯಪಟ್ಟಣದಿಂದ ನುಗ್ಗೇಹಳ್ಳಿ ಕಡೆಗೆ ಸೇತುವೆಯ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದ ವೇಳೆಗೆ ತೆರಳಿದ್ದಾನೆ. ನೀರಿನ ರಭಸ ಹೆಚ್ಚಿದ್ದರಿಂದ ಬೈಕ್ ನಿಯಂತ್ರಣ ಸಿಗದೆ ಕೊಚ್ಚಿ ಹೋಗಿದ್ದಾನೆ. 



ಇದನ್ನು ಗಮನಿಸಿದ ಅಲ್ಲಿನ ಸ್ಥಳೀಯರು ಕೂಡಲೇಧಾವಿಸಿ ಯುವಕನ ರಕ್ಷಣೆಗೆ ಮುಂದಾಗಿ ಆತನನ್ನು ರಕ್ಷಿಸಿದ್ದಾರೆ. ಆಯಸ್ಸು ಗಟ್ಟಿಯಿದ್ದ ಪರಿಣಾಮ ಅದೃಷ್ಟವಶಾತ್ ಎಂಬಂತೆ ಯುವಕ ಪ್ರಾಣಾಪಾಯಗಳಿಂದ ಬಚಾವಾಗಿದ್ದಾನೆ. ಈ ಕುರಿತು ಎಚ್ಚರಿಕೆ ನೀಡಿರುವ ಅಧಿಕಾರಿಗಳು ಮಳೆಯ ಪ್ರಮಾಣ ಹಾಗೂ ನೀರಿನ ಹರಿವು ಹಳ್ಳ, ನದಿಗಳಲ್ಲಿ ಹೆಚ್ಚಿರುವುದರಿಂದ ಈ ರೀತಿಯ ದುಸ್ಸಾಹಸಕ್ಕೆ ಸಾರ್ವಜನಿಕರು ಮುಂದಾಗದಂತೆ ತಿಳಿಸಿದ್ದಾರೆ.