ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ)  ಪ್ರಾಕೃತಿಕ ಸೊಬಗನ್ನು ಹಾಗೂ ಹೆಚ್ಚಿನ ಪ್ರವಾಸಿ ತಾಣಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಒಂದು ಖಾಸಗೀ ಹೋಂ ಸ್ಟೇ ಮೇಲೆ ಅಪಸ್ವರ ಕೇಳಿ ಬಂದಿದೆ. ಆಗಮಿಸುವ ಯುವಕ ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಅವರ ಬಳಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟು ಅನ್ಯಾಯದ ಹಾದಿಯಲ್ಲಿ ದುಡ್ಡು ಮಾಡುತ್ತಿದ್ದ ನಾಲ್ವರ ಜಾಲ ಪೊಲೀಸರ ಬಲೆಗೆ ಬಿದ್ದಿದೆ.

ಇದನ್ನೂ ಓದಿ : ಚಲಿಸುತ್ತಿದ್ದ KKB ಬಸ್ ನ ಬ್ರೇಕ್ ಫೇಲ್ ; ಬಸ್ ನಿಲ್ಲಿಸಲು ಚಾಲಕ ಮಾಡಿದ್ದೇನು ಗೊತ್ತಾ ?

ಹೋಂ ಸ್ಟೇ ಗೆ ಯುವತಿಯೊಂದಿಗೆ ಬಂದ ಸಾಫ್ಟ್ ವೇರ್ ಇಂಜಿನಿಯರ್ ಓರ್ವನನ್ನು ಬ್ಲಾಕ್ ಮೇಲ್ ಮಾಡಿ ಆತನಿಂದ 15 ಲಕ್ಷ ಹಣವನ್ನು ಬೇಡಿಕೆಯಿಟ್ಟಿದ ಗ್ಯಾಂಗ್ ಗೆ ಮೊದಲಿಗೆ ಯುವಕ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ನೀಡಿದ್ದಾನೆ. ಈ ನಂತರವೂ ಹೆಚ್ಚಿನ ಹಣಕ್ಕೆ ಆರೋಪಿಗಳು ಡಿಮ್ಯಾಂಡ್ ಮಾಡಿದ್ದು ಯುವಕ ಪೊಲೀಸರಿಗೆ ದೂರು ನೀಡಿ ಆರೋಪಿಗಳು ಸೆರೆಸಿಗುವಂತೆ ಮಾಡಿದ್ದಾನೆ. 


ಗೌಪ್ಯ ಕ್ಯಾಮೆರಾಗಳ ಆರ್ಭಟ :

ಯುವಕ ಯುವತಿಯರು ಖಾಸಗಿಯಾಗಿ ಹೋಂ ಸ್ಟೇ ಗಳ ರೂಂ ನಲ್ಲಿ ಇರುವ ವೇಳೆ ಇದ್ದಕ್ಕಿದ್ದಂತೆ ರೂಂ ಗೆ ನುಗ್ಗುವ ನಾಲ್ವರು, ನಿಮ್ಮ ದೃಶ್ಯಾವಳಿಗಳು ನಮ್ಮಲ್ಲಿ ದಾಖಲಿದೆ, ಬೇಡಿಕೆ ಇಟ್ಟಷ್ಟು ಹಣ ನೀಡದೇ ಇದ್ದಲ್ಲಿ ನಿಮ್ಮೆಲ್ಲಾ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡುತ್ತಿದ್ದರು ಎನ್ನಲಾಗಿದೆ. ಇದಲ್ಲದೆ ಪ್ರಮುಖ ಆರೋಪಿಯು ಹಲವಾರು ಗ್ರೂಪ್ ಗಳಿಗೆ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ಎನ್ನಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಚಿಕ್ಕಮಗಳೂರಿನ ಖಾಸಗೀ ಹೋಂ ಸ್ಟೇ ಒಂದರಲ್ಲಿನ ಹಾಸನ, ತುಮಕೂರು, ಚಿಕ್ಕಮಗಳೂರು ಮೂಲದ ನಾಲ್ವರು ಬಂಧಿತ ಆರೋಪಿಗಳು. ರಕ್ಷಣಾ ವೇದಿಕೆಯ ಹೆಸರಿನಲ್ಲಿ ಹೋಂ ಸ್ಟೇ ಗೆ ಬರುವ ಹುಡುಗ ಹುಡುಗಿಯರ ಖಾಸಗೀ ದೃಶ್ಯಗಳನ್ನು ಸೆರೆಹಿಡಿದುಕೊಂಡು ಬೇರೆಡೆ ವಿಡಿಯೋವನ್ನು ಲೀಕ್ ಮಾಡುತ್ತೇವೆ, ಹಾಗಾಗಬಾರದು ಎಂದಾದಲ್ಲಿ ಹಣ ನೀಡುವಂತೆ ಹೆದರಿಸಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣವನ್ನು ಮಾಡಿಕೊಂಡಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. 

ನೀಚ ಕೃತ್ಯಕ್ಕೆ ಮಹಿಳೆಯರೂ ಸಾಥ್ :

ಈ ಕುರಿತಾಗಿ ಹುಡುಗ ದೂರು ನೀಡಿದ ಹಿನ್ನೆಲೆ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹುಬ್ಬಳ್ಳಿ ಮೂಲದ ಶಿವರಾಜಚಂದ್ರ, ದಾವಣಗೆರೆ ಮೂಲದ ರಮ್ಯ ಅಲಿಯಾಸ್ ಭೂಮಿಕ, ಪವಿತ್ರಾ, ಚಿಕ್ಕಮಗಳೂರು ಮೂಲದ ಸುರೇಶ್ ಈ ನಾಲ್ವರು ಆರೋಪಿಗಳನ್ನು ಬಂಧಿಸಿ ಈ ಸಂಬಂಧ ವಿಚಾರಣೆ ಆರಂಭಿಸಿದ್ದಾರೆ ಇನ್ನೂ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದು ಈ ಜಾಲದ ಹಿಂದಿರುವ ಆರೋಪಿಗಳ ಹೆಡೆಮುರಿಕಟ್ಟಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವ ಸಮೂಹದ ಯುವಕ ಯುವತಿಯರ ಜೀವನದ ಜೊತೆಗೆ ಆಟವಾಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಸ್ಥಳೀಯರೂ ಆಗ್ರಹಿಸಿದ್ದಾರೆ.