ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹೆಚ್ಚಿನ ಧಾರ್ಮಿಕ ಕ್ಷೇತ್ರಗಳನ್ನು ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವ ಕಾಫಿನಾಡು ಚಿಕ್ಕಮಗಳೂರಿನ ಬೆಟ್ಟಗಳ ನಡುವಿನ ತಪ್ಪಲಿನಲ್ಲಿ ಆಂಜನೇಯನ ಪ್ರತಿಷ್ಠಾಪನೆಗಾಗಿ ಭರದ ತಯಾರಿಗಳು ಆರಂಭವಾಗಿದೆ. 

ಚಿಕ್ಕಮಗಳೂರಿನ ಶಾಸಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ನೇತೃತ್ವದಲ್ಲಿ ಚಿಕ್ಕಮಗಳೂರು ತಾಲೂಕಿನ ಗುರು ದತ್ತಾತ್ರೇಯಪೀಠದ ಮಾರ್ಗದ ಕವಿಕಲ್ ಗಂಡಿಯಲ್ಲಿ 21 ಅಡಿ ಎತ್ತರದ ಆಂಜನೇಯನ ಮೂರ್ತಿ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಹನುಮಂತನ ಮೂರ್ತಿ ನಿರ್ಮಾಣ ಕಾರ್ಯಕ್ಕೆ ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಕೃಷ್ಣಶಿಲೆಯನ್ನು ತರಲಾಗಿದೆ.


21 ಅಡಿ ಎತ್ತರದ ಆಂಜನೇಯನ ವಿಗ್ರಹದ ನಿರ್ಮಾಣ ಕಾರ್ಯ ಆರಂಭವಾಗಿದ್ದು ಏಕಶಿಲಾ ಆಂಜನೇಯ ಮೂರ್ತಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ದತ್ತ ಜಯಂತಿ ಆಚರಣೆ ವೇಳೆ ದರ್ಶನ ನೀಡಲು ಸಿದ್ಧನಾಗುತ್ತಾನೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಮೂರ್ತಿ ತಯಾರಿಕೆಗಾಗಿ ತರುತ್ತಿದ್ದ ಶಿಲೆಯನ್ನು ಭಕ್ತರು ಅಲ್ಲಲ್ಲಿ ಪೂಜಿಸಿ, ನಮಸ್ಕರಿಸಿ ಭಕ್ತಿ ಭಾವಗಳಿಂದ ಪೂಜೆ ಮಾಡಿ ಬರಮಾಡಿಕೊಂಡರು. 

ರಾಜ್ಯದ ಅತ್ಯಂತ ಎತ್ತರದ ಪರ್ವತ ಪ್ರದೇಶವಾದ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ 21 ಅಡಿ ಎತ್ತರದ ಬೃಹತ್ ಪರ್ವತಾಂಜನೇಯ ಮೂರ್ತಿ ನಿರ್ಮಾಣಗೊಳ್ಳಲಿರುವುದು ಭಕ್ತರನ್ನು ಹಾಗೂ ಆಗಮಿಸುವ ಪ್ರವಾಸಿಗರ ಹೆಚ್ಚಿನ ಆಕರ್ಷಣೆ ಹಾಗೂ ಧಾರ್ಮಿಕ ತಾಣವಾಗಲಿದೆ.

ಈ ಬೃಹತ್‌ ಗಾತ್ರದ ಹನುಮಂತನ ಮೂರ್ತಿಯು ಕವಿಕಲ್‍ಗಂಡಿ ಸುತ್ತಮುತ್ತಲಿನ ಸುಮಾರು 25-30 ಕಿ.ಮೀ. ದೂರಕ್ಕೂ ಕಾಣಲಿದೆ ಎಂಬುದಾಗಿಯೂ ಕೇಳಿ ಬರುತ್ತಿದ್ದು ಆಂಜನೇಯನ ವಿಗ್ರಹದ ಸಂಪೂರ್ಣ ಕೆತ್ತನೆಯ ಬಳಿಕದಲ್ಲಿ ಇಲ್ಲಿನ ವಿಹಂಗಮ ನೋಟವು ಗೋಚರವಾಗಲಿದೆ.