ಚಿಕ್ಕಮಗಳೂರು : 

ಕಷ್ಟಪಟ್ಟು ಬೆಳೆದ ಬೆಳೆನಾಶ; ಕಣ್ಣೀರು ಹಾಕಿದ ರೈತ

ಕಡೂರು ತಾಲೂಕಿನ ಹೋರಿತಿಮ್ಮನಹಳ್ಳಿಯಲ್ಲಿ ರೈತರ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಆಲೂಗಡ್ಡೆ ಬೆಳೆಯನ್ನು ನಾಶಪಡಿಸಿದ್ದಾರೆ. ತೆಲಗುಗೌಡ ಸಮುದಾಯದವರು ಕುಳುವ ಸಮಾಜದವರ ಜಮೀನಿನ ಮೇಲೆ ಅತಿಕ್ರಮಣ ಪ್ರವೇಶ ಮಾಡಿ ಆಲೂಗಡ್ಡೆ ಬೆಳೆಯನ್ನು ನಾಶ ಮಾಡಿದ್ದಾರೆ. ಈ ಜಮೀನು ನಮಗೆ ಸೇರಬೇಕು ಎಂದು ಕುಳುವ ಸಮಾಜದವರ ದೌರ್ಜನ್ಯ ಎಸಗಿದ್ದಾರೆ. ಧರಣಿಕುಮಾರ್ ಎಂಬುವರು ಗ್ರಾಮದ ಸರ್ವೇ ನಂಬರ್‌ 8ರಲ್ಲಿ 15ಗುಂಟೆ ಜಮೀನು ಹೊಂದಿದ್ದಾರೆ. ಅದರ ಪಕ್ಕದಲ್ಲೇ ಹನುಮಾಪುರ ಗ್ರಾಮದ ಸರ್ವೇ ನಂಬರ್‌ 62ರಲ್ಲಿ 1.35 ಗುಂಟೆ ಜಮೀನಿನಲ್ಲಿ ಕಳೆದ 10ರಿಂದ 15 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದರು. ಜಮೀನು ಮಂಜೂರು ಮಾಡುವಂತೆ 2018ರಲ್ಲಿ ಫಾರಂ ನಂಬರ್‌ 57ರಲ್ಲಿ ಅರ್ಜಿ ಸಲ್ಲಿಸಿದ್ದರು.

ಮನೆಗೆ ಬೆಂಕಿ ಹಾಕಿದ ದುಷ್ಕರ್ಮಿಗಳು :

ಶೃಂಗೇರಿ : ಹಾಡಹಗಲಲ್ಲಿ ಯಾರದೇ ಭಯವಿಲ್ಲದ ರೀತಿಯಲ್ಲಿ ಕಿಡಿಗೇಡಿಗಳು ಮನೆಗೆ ಬೆಂಕಿ ಹಚ್ಚಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳುವಳ್ಳಿ ಗ್ರಾಮದ ಕೋರನಕುಡಿಗೆ ಸಂತೋಷ್ ಬಿನ್ ಮಹಾದೇವಪ್ಪ ಎಂಬುವವರ ಮನೆಗೆ ದುಷ್ಕರ್ಮಿಗಳು ಇಂದು ಮಧ್ಯಾಹ್ನ 12 ಗಂಟೆಗೆ ವೇಳೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಇದೇ ಗ್ರಾಮದ ಕಿರಣ್ ಆಚಾರ್ಯ ಎಂಬುವವರ ಬೈಕ್ ಗೆ ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟು ಕರಕಲು ಮಾಡಿದ್ದ ದುಷ್ಕರ್ಮಿಗಳು ಘಟನೆ ಮಾಸುವ ಮುನ್ನವೇ ಯಾರ ಭಯವೂ ಇಲ್ಲದೆ ಪಕ್ಕದ ಇನ್ನೊಂದು ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಯ ಹಿಂಭಾಗಕ್ಕೆ ದುಷ್ಕರ್ಮಿಗಳು ಹಚ್ಚಿದ್ದ ಬೆಂಕಿ ಹೊತ್ತಿ ಉರಿಯುತ್ತಿದ್ದುದ್ದನ್ನು ಕಂಡ ಮನೆಯವರು ಹಾಗೂ ಸ್ಥಳೀಯರು ಕೂಡಲೇ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿ ಬೆಂಕಿಯನ್ನು ನಂದಿಸಿದ್ದಾರೆ.

ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ ಬಸ್ಸಿನ ಚಕ್ರಗಳು :

ಸರ್ಕಾರಿ ಬಸ್ ಚಲಿಸುತ್ತಿರುವ ಸಮಯದಲ್ಲಿ ಇದ್ದಕ್ಕಿದ್ದಂತೆ ಬಸ್ಸಿನ ಎರಡು ಚಕ್ರಗಳು ಕಳಚಿ ಬಿದ್ದಿರುವ ದುರಂತ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ತಾಲೂಕಿನ ಮಾಗಡಿ ಸಮೀಪ ಗುರುವಾರ ಈ ಘಟನೆ ಸಂಭವಿಸಿದ್ದು, ನಿಧಾನಗತಿಯಲ್ಲಿ ಚಾಲನೆಯಲ್ಲಿದ್ದ ಬಸ್ ನ ಎರಡು ಚಕ್ರಗಳು ಬಸ್ಸಿನಿಂದ ಅಚಾನಕ್ಕಾಗಿ ಬೇರ್ಪಟ್ಟಿದೆ. ಈ ರೀತಿ ಘಟನೆಗಳು ಸಂಭವಿಸುವ ಸಾಧ್ಯತೆಗಳು ಕಡಿಮೆಯಾಗಿದ್ದು ಈ ಘಟನೆ ಸಂಭವಿಸಿದ ಸಮಯದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕೊಳಗಾಗಿದ್ದರು. ಬಸ್ಸಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಗೊಂಡವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಶಿವಮೊಗ್ಗ:

ಚೂರಿ ಇರಿದ ಆರೋಪಿಗಳ ಮೇಲೆ UAPA 1967 ಕಾಯ್ದೆ ಅಡಿ ಪ್ರಕರಣ ದಾಖಲು :

ಕಳೆದ ಕೆಲ ದಿನಗಳ ಹಿಂದೆ ಪ್ರೇಮ್‌ಸಿಂಗ್‌ ಎಂಬ ಯುವಕನಿಗೆ ಚೂರಿ ಇರಿದ ಆರೋಪಿಗಳ ವಿರುದ್ಧ ಯುಎಪಿಎ 1967 ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ತನ್ವೀರ್‌ ಅಹಮದ್‌, ನದೀಮ್‌ ಫೈಝಲ್‌ ಹಾಗೂ ಅಬ್ದುಲ್‌ ರೆಹಮಾನ್‌, ಮೊಹಮ್ಮದ್‌ ಜಬೀ ಅಲಿಯಾಸ್‌ ಚರ್ಬಿ ಎಂಬುವವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

40 % ಆರೋಪ ಕೇವಲ ರಾಜಕೀಯ ಪ್ರೇರಿತ ; ಆರಗಜ್ಞಾನೇಂದ್ರ 

ಕಾಂಗ್ರೆಸಿಗರು ಬಿಜೆಪಿ ವಿರುದ್ಧ ನಡೆಸುತ್ತಿರುವ 40 % ಕಮಿಷನ್ ಆರೋಪ ಕೇವಲ ರಾಜಕೀಯಕ್ಕಾಗಿ ಆಗಿದೆಯೇ ಹೊರತು ಇದರಲ್ಲಿ ಹುರುಳಿಲ್ಲ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ವಾಗ್ದಾಳಿ ನಡೆಸಿದರು. ಆರೋಪ ಮಾಡುತ್ತಿರುವವರ ಬಳಿ ದಾಖಲೆಯಿದ್ದಲ್ಲಿ ಅದನ್ನು ಲೋಕಾಯುಕ್ತಕ್ಕೆ ನೀಡಲಿ ಅದನ್ನು ಬಿಟ್ಟು ಸುಮ್ಮಸುಮ್ಮನೆ ಈ ರೀತಿಯ ಆರೋಪ ಮಾಡುವುದನ್ನು ಮೊದಲು ಬಿಡಬೇಕು ಎಂದರು. 

ಮನೆ ಮಾಲೀಕನಿಗೆ ಕೆಲಸ ಮಾಡಿಕೊಡುವ ಸಾಕುನಾಯಿ :

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉಮಟೆಗದ್ದೆಯ ಪ್ರಕಾಶ್ ತಿಮ್ಮಪ್ಪ ಎಂಬುವರ ಮನೆಯಲ್ಲಿ ಸಾಮಾನ್ಯ ಸಾಕು ನಾಯಿಯೂ ಇವರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತದೆ. ಪ್ರಕಾಶ್ ಅವರ ಮನೆಗೆ ನಿತ್ಯ ಬರುವ ಪೇಪರ್ ಅನ್ನು ಕಾಂಪೌಂಡ್​ನಿಂದ ಮನೆ ಒಳಗೆ ತಂದು ಕೊಡುತ್ತದೆ. ಅಲ್ಲದೇ ಬ್ಯಾಗ್ ನೀಡಿದರೆ ಸಾಕು ತರಕಾರಿ ತರುವುದು. ಹೂಗಳನ್ನು ಕಿತ್ತುಕೊಟ್ಟರೆ ಅದನ್ನು ಮನೆಗೆ ತಲುಪಿಸುವುದು ಮಾಡುತ್ತದೆ. ಅಂದ ಹಾಗೆ ಈ ನಾಯಿಯ ಹೆಸರು ಡಾಲಿ. ಇದು ಸಾಮಾನ್ಯ ನಾಯಿ. ಇದಕ್ಕೆ ಈಗ ವಯಸ್ಸು ಕೇವಲ 7 ತಿಂಗಳು ಮಾತ್ರ. ಈ ನಾಯಿಗೆ ಯಾವುದೇ ತರಬೇತಿ ಕೊಡಿಸಿಲ್ಲ. ಇದರ ಮಾಲೀಕ ಪ್ರಕಾಶ್ ತಿಮ್ಮಪ್ಪ ಅವರ ಮಾತನ್ನು ಚಾಚೂ ತಪ್ಲದೇ ಪಾಲಿಸುತ್ತದೆ. ಡಾಲಿ ನಾಯಿಯನ್ನು ಕಂಡರೆ ಮನೆಯವರಿಗೆ ಅಚ್ಚುಮೆಚ್ಚು. ಡಾಲಿ ಕೆಲಸ ಮಾಡುವ ವೈಖರಿ ಕಂಡು ಗ್ರಾಮವೇ ಬೆರಗಾಗಿದೆ.

ಹಾಸನ:

ಕಾಡಾನೆ ಕಾಳಗಕ್ಕೆ ಬೆಳೆದ ಬೆಳೆ ನಾಶ : 

ಮಲೆನಾಡು ಭಾಗಗಳಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಒಂದೆಡೆ ಅತಿಯಾದ ರೋಗಬಾಧೆ ಬೆಳೆ ನಾಶಕ್ಕೆ ಕಾರಣವಾಗಿದ್ದರೆ ಇನ್ನೊಂದೆಡೆ ಪ್ರಾಣಿಗಳ ದಾಳಿಯು ಬೆಳೆ ರೈತನ ಕೈ ಸೇರುವುದನ್ನು ತಪ್ಪಿಸುತ್ತಿದೆ.ಕಾಡಾನೆಗಳ ಕಾಳಗಕ್ಕೆ ಭಾರಿ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಡಿಸೋಜ ಎಂಬುವವರ ಕಾಫಿ ತೋಟದಲ್ಲಿ ಎರಡು ಸಲಗಗಳ ನಡುವೆ ಕಾದಾಟ ನಡೆದಿದ್ದು, ಫಸಲಿಗೆ ಬಂದಿದ್ದ ಕಾಫಿ, ಮೆಣಸಿನ ಗಿಡಗಳು, ಬೈನೆ ಮರಗಳು ನೆಲಸಮವಾಗಿವೆ. ಬೆಳೆ ನಷ್ಟದಿಂದ ತೋಟದ ಮಾಲೀಕರು ಕಂಗಾಲಾಗಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಡಿಸೋಜ ಒತ್ತಾಯಿಸಿದ್ದಾರೆ.

45 ಮಂದಿಯಲ್ಲಿ ಕೋವಿಡ್ ಸೋಂಕು ಧೃಢ : 

ಹಾಸನದಲ್ಲಿ ಇಂದು 45 ಮಂದಿಯಲ್ಲಿ ಕೋವಿಡ್ ಸೋಂಕು ಇರುವುದು ಧೃಢಪಟ್ಟಿದೆ. ಹಬ್ಬ ಹರಿದಿನಗಳ ಈ ಸಮಯದಲ್ಲಿ ಜನರ ದಟ್ಟಣೆ ಸಹ ಹೆಚ್ಚಾಗಿದ್ದು ಇಂದು ಒಂದೇ ದಿನದಲ್ಲಿ 45 ಮಂದಿಯಲ್ಲಿ ಸೋಂಕು ಧೃಢಪಟ್ಟಿದೆ.

ಕೊಡಗು :

ಎಡಿಜಿಪಿ ನೇತೃತ್ವದಲ್ಲಿ ಪಥಸಂಚಲನ : 

ಕೊಡಗು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಗಲಾಟೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿ ನಿಷೇಧಾಜ್ಞೆ ಜಾರಿ ಮಾಡಿದೆ. ಈ ಅವಧಿಯಲ್ಲಿ ಸಭೆ, ಸಮಾರಂಭ, ಪ್ರತಿಭಟನೆ ಮಾಡದಂತೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯಲ್ಲಿ ಮೊಟ್ಟೆ ಕಾವು ಇನ್ನೂ ತಣ್ಣಗಾಗಿಲ್ಲ. ಎರಡೂ ಪಕ್ಷಗಳ ಒಳಜಗಳಕ್ಕೆ ಕೊಡಗಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿರುವುದರಿಂದ ಇಂದು ಎಡಿಜಿಪಿ ಅಲೋಕ್‍ಕುಮಾರ್ ಅವರ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ನಗರಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಸೂಕ್ಷ್ಮ ಪ್ರದೇಶಗಳಾದ ಕುಶಾಲನಗರ, ವಿರಾಜಪೇಟೆ, ಸೋಮವಾರ ಪೇಟೆ, ಪೊನ್ನಂಪೇಟೆ ಭಾಗದಲ್ಲಿ ಪಥಸಂಚಲನ ನಡೆಸಿ ಸ್ಥಳೀಯರಿಗೆ ಧೈರ್ಯ ತುಂಬಿದರು.