ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಭಾರೀ ಮಳೆಗೆ ವಯೋವೃದ್ಧರಿರುವ ಮನೆಯೊಂದು ಕುಸಿದಿದ್ದು ಅವರ ದುಸ್ಥಿತಿ ಹೇಳತೀರದಾಗಿದೆ. ಈ ಗ್ರಾಮವು ಅತ್ಯಾವಶ್ಯಕವಾದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ಗ್ರಾಮದ ನಿವಾಸಿಗಳು ಅತ್ಯಂತ ಕ್ಲಿಷ್ಟಕರವಾದ ಜೀವನವನ್ನು ನಡೆಸುವ ಸ್ಥಿತಿ ನಿರ್ಮಾಣವಾಗಿದೆ. 

ಇದನ್ನೂ ಓದಿ : ಕೊಪ್ಪ : ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ನಾಡ್ ಗ್ರಾಮದ ಮುಂಡೋಡಿಯಲ್ಲಿ ಮಳೆಯು ಅವಾಂತರ ಸೃಷ್ಟಿಸಿದೆ. ಇಲ್ಲಿನ ಗಿರಿಜನ ಕುಟುಂಬದ ಶೇಷಗೌಡ ಎಂಬುವವರ ಮನೆಯು ಭಾರೀ ಮಳೆಯಿಂದಾಗಿ ಹಾನಿಗೀಡಾಗಿದ್ದು ಸೂಕ್ತ ಪರಿಹಾರ ಒದಗಿಸಬೇಕೆಂದು ಸಂತ್ರಸ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಈ ಗ್ರಾಮಕ್ಕೆ ಬರಲು ಸರಿಯಾದ ರಸ್ತೆಯೇ ಇಲ್ಲ..!

ನೆಮ್ಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಮುಂಡೋಡಿ ಗ್ರಾಮಕ್ಕೆ ಸಮರ್ಪಕವಾದ ರಸ್ತೆ ವ್ಯವಸ್ಥೆಯೇ ಇಲ್ಲದಂತಾಗಿದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ತೆರಳಲು, ಸೊಸೈಟಿಗಳಿಂದ ಪಡಿತರ ತರಲು ಮೇಗೂರು ಮಾರ್ಗವಾಗಿ 40 ಕಿ.ಮೀ ಸುತ್ತಾಡಿಕೊಂಡು ಓಡಾಟ ನಡೆಸಬೇಕಿದೆ ಎಂಬುದಾಗಿ ತಮ್ಮಗೋಳನ್ನು ತೋಡಿಕೊಂಡಿದ್ದಾರೆ ಇಲ್ಲಿನ ಸ್ಥಳೀಯರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ನಾವಿದ್ದರೆ ಈ ಕುಗ್ರಾಮದ ಜನರು ಇನ್ನೂ ವಿದ್ಯುತ್ ಸಂಪರ್ಕವನ್ನು ಕಾಣದೇ ಸ್ವಾತಂತ್ರ್ಯಾಪೂರ್ವದ ರೀತಿಯಲ್ಲಿನ ಜೀವನವನ್ನು ನಡೆಸುತ್ತಿದ್ದಾರೆ. ಇದುವರೆಗೂ ಕ್ಷೇತ್ರದ ಜನ ಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದೆ ಜನರ ಬದುಕನ್ನು ಅದೇ ರೀತಿಯಲ್ಲೇ ಇಟ್ಟಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. 

ಕುಸಿತಗೊಂಡಿರುವ ವಯೋವೃದ್ಧರಿರುವ ಮನೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳು ಭೇಟಿ ನೀಡಿ ಅವರ ಅಳಲನ್ನು ಆಲಿಸಿ ಅವರಿಗೆ ಅತ್ಯಾವಶ್ಯಕವಿರುವ ಮನೆ, ವಿದ್ಯುತ್ ಹಾಗೂ ಸಮರ್ಪಕವಾದ ರಸ್ತೆ ವ್ಯವಸ್ಥೆಯನ್ನು ಇನ್ನಾದರೂ ಕಲ್ಪಿಸಬೇಕಿದೆ.