ಹಾಸನ : (ನ್ಯೂಸ್ ಮಲ್ನಾಡ್ ವರದಿ) ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯು ಅನೇಕ ಅವಾಂತರಗಳನ್ನು ಸೃಷ್ಟಿಸಿದ್ದು ಧಾರಾಕಾರ ಮಳೆಗೆ ಮನೆಯೊಂದರ ಗೋಡೆ ಕುಸಿದ ಪರಿಣಾಮ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ನುಗ್ಗೇಹಳ್ಳಿ ಹೋಬಳಿಯ ಭೂವನಹಳ್ಳಿ ಗ್ರಾಮದ ಬಾಲಕ ಪ್ರಜ್ವಲ್ (13) ಗೋಡೆ ಕುಸಿದು ಮೃತಪಟ್ಟ ದುರ್ದೈವಿ. ಈ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ಭಾಗದ ನದಿ, ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು ಮಳೆಯ ತೀವ್ರತೆಗೆ ಮನೆಯ ಗೋಡೆ ಕುಸಿದು ಈ ಅವಘಡ ಸಂಭವಿಸಿದೆ.


ಮನೆಯಲ್ಲಿ ಬಾಲಕ ಮಲಗಿದ್ದಾಗ ಗೋಡೆ ಕುಸಿದು ಮೃತಪಟ್ಟಿದ್ದು ಆತನನ್ನು ಕಳೆದುಕೊಂಡಿರುವ ಮನೆಯವರು ಅತೀವವಾದ ನೋವನ್ನು ವ್ಯಕ್ತಪಡಿಸಿದ್ದಾರೆ. 

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ; ರೆಡ್ ಅಲರ್ಟ್ ಘೋಷಣೆ

ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶವಾದ ಕೊಡಗಿನ ಗಡಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ದೊಡ್ಡ ದೊಡ್ಡ ಅವಾಂತರಗಳನ್ನು ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸೃಷ್ಟಿಸಿದೆ. ಮಳೆಯು ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ ಸುರಿಯುವ ಮುನ್ಸೂಚನೆಗಳಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. 

ಆಗಸ್ಟ್ 04 ಹಾಗೂ 05 ರ ಎರಡು ದಿನಗಳ ಕಾಲ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದ್ದು ಈ ಭಾಗದಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದೈನಂದಿನ ಚಟುವಟಿಕೆಗಳಲ್ಲಿ ತೊಡಗುವಂತೆ ಕೃಷಿಕರಿಗೆ ತಿಳಿಸಲಾಗಿದ್ದು, ನದಿಗಳ ನೀರಿನ ಮಟ್ಟದ ಅಬ್ಬರ ಹೆಚ್ಚಿರುವುದರಿಂದ ಹಾಗೂ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಕಾರಣ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. 

ಮಳೆಯಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ರಸ್ತೆಗುರುಳಿದ್ದು, ರಭಸದಿಂದ ಹರಿಯುವ ನೀರಿನಲ್ಲಿ ಮೂವರು ಕೊಚ್ಚಿಹೋಗಿದ್ದಾರೆ. ಇದಲ್ಲದೆ ಹಲವು ಕಡೆಗಳಲ್ಲಿ ರಸ್ತೆ ಸಂಪರ್ಕಕ್ಕೂ ಅಡೆತಡೆಗಳು ಉಂಟಾಗಿದೆ.