ಚಿಕ್ಕಮಗಳೂರು :
ಭಾರೀ ಮಳೆಯಾಗುವ ಮುನ್ಸೂಚನೆ :
ಮಲೆನಾಡು ಸೇರಿ ರಾಜ್ಯಾದ್ಯಂತ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಸಹ ಮುಂದಿನ ಐದು ದಿನ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 23 ಹಾಗೂ 24 ರಂದು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 24 ರ ಬಳಿಕ ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಹ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಿಪಿಎಲ್ ಕಾರ್ಡ್ ಸರೆಂಡರ್ ಕುರಿತು ಸ್ಪಷ್ಟನೆ :
ನಾಲ್ಕು ಚಕ್ರಗಳ ಲಘು ವಾಹನವನ್ನು ಹೊಂದಿರುವ ಬಿಪಿಎಲ್ ಕಾರ್ಡ್ ದಾರರಿಗೆ ಅಧಿಕಾರಿಗಳು ಕಾರ್ಡನ್ನು ಹಿಂದಿರುಗಿಸುವಂತೆ ಹೊರಡಿಸಿರುವ ನೊಟೀಸ್ ನ ಕುರಿತಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಸ್ಪಷ್ಟನೆ ನೀಡಿದರು. ಈ ಕುರಿತಾಗಿ ನರಸಿಂಹರಾಜಪುರದಲ್ಲಿ ಮಾಹಿತಿ ನೀಡಿದ ಅವರು ಪ್ರಸ್ತುತ ಬಿಪಿಎಲ್ ಕಾರ್ಡುಗಳನ್ನು ಹೊಂದಿರುವ ಯಾರೂ ಕೂಡ ಅವರ ಕಾರ್ಡುಗಳನ್ನು ಮರಳಿ ಅಧಿಕಾರಿಗಳಿಗೆ ನೀಡುವ ಪ್ರಶ್ನೆಯೇ ಇಲ್ಲ, ಈ ಕುರಿತಾಗಿ ಮುಖ್ಯಂತ್ರಿಗಳೊಂದಿಗೆ ಮಾತನಾಡಲಾಗಿದ್ದು ಅವರೂ ಕೂಡ ಅಧಿಕಾರಿಗಳಿಗೆ ಸೂಕ್ತವಾದ ನಿರ್ದೇಶನ ನೀಡಿದ್ದಾರೆ ಎಂದರು. ಆದೇಶದ ಪ್ರಕಾರ ಯಾವುದೇ ಕ್ರಮಗಳು ಪ್ರಸ್ತುತ ರಾಜ್ಯದಲ್ಲಿ ಜರುಗುವುದಿಲ್ಲ, ಸಾರ್ವಜನಿಕರು ಗೊಂದಲದಲ್ಲಿ ಯಾವುದೇ ಕಾರ್ಡುಗಳನ್ನು ಅಧಿಕಾರಿಗಳಿಗೆ ನೀಡಬಾರದು ಹಾಗೂ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಹ ನಿರ್ದೇಶನವಿದ್ದು, ಈ ಕಾನೂನು ಹೊಸತೇನಲ್ಲ ಬಹಳ ಹಿಂದಿನಿಂದಲೂ ಈ ಕುರಿತಾದ ಗೊಂದಲ ಸೃಷ್ಟಿಯಾಗಿತ್ತು ಇದನ್ನು ಸರಿಪಡಿಸುವ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ನೂತನ ವಿ.ವಿ ವೇಳಾಪಟ್ಟಿ ವಿರೋಧಿಸಿ ಕಳಸ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ :
ಕುವೆಂಪು ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ನೂತನ ವೇಳಾಪಟ್ಟಿ ವಿದ್ಯಾರ್ಥಿಗಳಿಗೆ ಮಾರಕವಾಗಿದೆ ಎಂದು ಆರೋಪಿಸಿ ಮತ್ತು ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಬೇಕೆಂದು ಆಗ್ರಹಿಸಿ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಿಡುಗಡೆಯಾಗಿರುವ ವೇಳಾಪಟ್ಟಿಯನ್ನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಇಲಾಖೆ ಪರಿಷ್ಕರಣೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಹಕರಿಸಬೇಕು ಎಂದರು.
ಶಿವಮೊಗ್ಗ :
ಚಿರತೆ ಸೆರೆಗೆ ಸಕ್ರೆ ಬೈಲಿನ ಆನೆಗಳು :
ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಿಂದ ನಾಳೆ ಎರಡು ಆನೆಗಳನ್ನು ತರಿಸಿ ಚಿರತೆ ಕಾರ್ಯಾಚರಣೆ ನಡೆಸಲಾಗುವುದು.ಎರಡ್ಮೂರು ದಿನಗಳಲ್ಲಿ ಚಿರತೆ ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು. ನಗರದಲ್ಲಿ ಅರಣ್ಯ ಇಲಾಖೆಯ ಸಭಾಂಗಣದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಳೆದ 20 ದಿನಗಳಿಂದ ಬೆಳಗಾವಿ ಜಿಲ್ಲೆಯ ನಾಲ್ಕು ಕಡೆ ಚಿರೆತೆಗಳ ಹಾವಳಿ ಕಂಡು ಬಂದಿದ್ದು ಈ ಕುರಿತಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಆಗಸ್ಟ್ 26ರ ವರೆಗೆ ನಿಷೇಧಾಜ್ಞೆ ವಿಸ್ತರಣೆ ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ಆದೇಶ
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸಾವರ್ಕರ್ ಭಾವಚಿತ್ರ ತೆರವು ಘಟನೆಗೆ ಸಂಬಂಧಿಸಿದಂತೆ ಆಗಸ್ಟ್ 15 ರಂದು ನಡೆದಿದ್ದ ಗಲಭೆ ಬಳಿಕ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಡಿಸಿ ಸೆಲ್ವಮಣಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇದೀಗ ಶಿವಮೊಗ್ಗದಲ್ಲಿ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯಲ್ಲಿ ಸಡಿಲಿಕೆ ಮಾಡಲಾಗಿದ್ದು, ನಗರಾದ್ಯಂತ ವಿಧಿಸಲಾಗಿದ್ದ ನಿಷೇಧಾಜ್ಞೆ ಇದೀಗ ಮೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ. ಹಳೆ ಶಿವಮೊಗ್ಗ ಭಾಗದ ಕೋಟೆ, ದೊಡ್ಡಪೇಟೆ, ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಆಗಸ್ಟ್ 26ರಂದು ಬೆಳಗ್ಗೆ ಆರು ಗಂಟೆವರೆಗೆ ಈ ಮೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಕೊಡಗು :
ಕೊಡಗಿಗೆ ಟಿಪ್ಪು ಸುಲ್ತಾನ್ ಬಂದಾಗಲೇ ಕೊಡವರು ಹೆದರಲಿಲ್ಲ ಇನ್ನು ಸಿದ್ದು ಸುಲ್ತಾನ್ ಬಂದರೆ ಹೆದರುತ್ತೀವಾ ಪ್ರತಾಪಸಿಂಹ ಪ್ರಶ್ನೆ :
ಸಿದ್ದರಾಮಯ್ಯ ಮೈಸೂರು, ಮಂಡ್ಯ, ಹಾಸನ ಮಾತ್ರವಲ್ಲ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದರು. ಮೋಸದಿಂದ ಕೊಡಗಿಗೆ ಆಕ್ರಮಣ ಮಾಡಿ ದಂಡೆತ್ತಿ ಬಂದಾಗಲೇ ಕೊಡವರು ತಲೆಕೆಡಿಸಿಕೊಳ್ಳಲಿಲ್ಲ, ಇನ್ನು ಈ ಸಿದ್ದು ಸುಲ್ತಾನ್ ಕೊಡಗಿಗೆ ಬಂದರೆ ಹೆದರ್ತೀವಾ, ಇವರನ್ನು ಅಲ್ಲಿನ ಜನ ಕ್ಯಾರೆ ಎನ್ನುವುದಿಲ್ಲ ಎಂದು ವ್ಯಂಗ್ಯವಾಡಿದರು. ನಮಗೆ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೇರಳದಿಂದ ಕಲ್ಲು ಹೊಡೆಯುವವರನ್ನು ಕರೆದುಕೊಂಡು ಬರುವ ಅಗತ್ಯವಿಲ್ಲ, ಕೊಡಗಿನ ಜನ ವೀರರು, ದೇಶಕ್ಕೆ ಇಬ್ಬರು ಜನರಲ್ ಮತ್ತು 28 ಜನ ಲೆಫ್ಟಿನೆಂಟ್ ಜನರಲ್ ಅನ್ನು ಕೊಟ್ಟಿದೆ. ಇವತ್ತು ಇಬ್ಬರು ಲೆಫ್ಟಿನೆಂಟ್ ಜನರಲ್ ಗಳು ಕೆಲಸ ಮಾಡುತ್ತಿದ್ದಾರೆ. ಅಸಂಖ್ಯಾತ ಸೈನಿಕರನ್ನು ದೇಶಕ್ಕೆ ನೀಡಿದೆ. ಹಾಗಾಗಿ ನಾವು ಹೊರಗಿನಿಂದ ಯಾರನ್ನೂ ಕರೆದುಕೊಂಡು ಬರುವುದಿಲ್ಲ, ನೀವು ಕೊಡಗಿಗೆ ಬಂದಾಗ ಅಲ್ಲಿನ ಜನರೇ ನಿಮಗೆ ಉತ್ತರ ಕೊಡಲಿದ್ದಾರೆ ಎಂದು ಕುಟುಕಿದರು.
ಮಡಿಕೇರಿ ಚಲೋ ಗೆ ಮಹತ್ವ ನೀಡಲ್ಲ : H.D ಕುಮಾರಸ್ವಾಮಿ :
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಎಸೆದ ಪ್ರಕರಣ ಖಂಡಿಸಿ ಆ.26 ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ಮಡಿಕೇರಿ ಚಲೋ ಮತ್ತು ಎಸ್ಪಿ ಕಚೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ನಾನೇನು ಮಹತ್ವ ಕೊಡುವುದಿಲ್ಲ, ಜನವೂ ಮಹತ್ವ ಕೊಡದೆ ಇರುವುದೇ ಒಳಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಹತ್ವ ಕೊಡುವುದು ಪೂರಕವಾದುದು, ಇದನ್ನು ಹೊರತುಪಡಿಸಿ ಬೇರೆ ಬೇರೆ ವಿಷಯಗಳಿಗೆ ಮನ್ನಣೆ ಕೊಡುವುದು ಸೂಕ್ತವಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದರು.


0 Comments