ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಬೆಳಗ್ಗಿನ ಜಾವ ಮನೆಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದು ಮಹಿಳೆ ಮೃತರಾಗಿರುವ ಘಟನೆ ಶೃಂಗೇರಿ ತಾಲೂಕಿನ ನೆಮ್ಮಾರಿನಲ್ಲಿ ನಡೆದಿದೆ.

ಪುಟ್ಟಮ್ಮ( 68 ವರ್ಷ) ಮೃತ ಮಹಿಳೆಯಾಗಿದ್ದು, ಇವರು ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದರು.


ಇಂದು ಬೆಳಿಗ್ಗೆ ತರಕಾರಿ ಹೆಚ್ಚಿ ತ್ಯಾಜ್ಯ ಎಸೆಯಲು ಹೋದ ಸಂದರ್ಭದಲ್ಲಿ ಅಲ್ಲೇ ಪ್ರಜ್ಞೆ ತಪ್ಪಿದಂತಾಗಿ ಬಿದ್ದಿದ್ದಾರೆ, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಕ್ಕೂ ಮೊದಲೇ ಪುಟ್ಟಮ್ಮ ಮೃತರಾಗಿದ್ದಾರೆ.

ಮೀಗಾ : ಆಕಸ್ಮಿಕವಾಗಿ ನೀರಿಗೆ ಬಿದ್ದು ವ್ಯಕ್ತಿ ಸಾವು 

ಶೃಂಗೇರಿಯ ಮೀಗಾ ಮೂಲದ ಪ್ರಭಾಕರ ಎಂಬುವವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. 

ನಿನ್ನೆ ಜಮೀನಿನ ಕೆಲಸಕ್ಕೆಂದು ತೆರಳಿದ್ದ ಪ್ರಭಾಕರ್ ಅವರು ಮನೆಗೆ ಹಿಂದಿರುಗಿರಲಿಲ್ಲ, ಈ ಕುರಿತಾಗಿ ಅವರನ್ನು ಪತ್ತೆ ಮಾಡುವ ಸಲುವಾಗಿ ಮನೆಯವರು ಎಲ್ಲೆಡೆ ಹುಡುಕಿದ್ದಾರೆ. ಇಂದು ಬೆಳಗ್ಗೆ ಜಮೀನಿನ ಸಮೀಪದ ಹಳ್ಳದಲ್ಲಿ ಪ್ರಭಾಕರ್ ರವರ ಮೃತ ದೇಹ ಪತ್ತೆಯಾಗಿದೆ. 

ಪ್ರಭಾಕರ್ ಅವರ ಪುತ್ರ ಪದ್ಮನಾಭ ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. 

ಬಾಳೆಹೊನ್ನೂರು: ಗರ್ಭಧರಿಸಿದ್ದ ಹಸುವಿನ ರುಂಡ ಕತ್ತರಿಸಿದ ಕಟುಕರು

ಬಾಳೆಹೊನ್ನೂರು : ಗೋ ಹಂತಕರು ಅಕ್ರಮವಾಗಿ ಹಸುವನ್ನು ಮಾಂಸಕ್ಕಾಗಿ ಕಡಿದು ಅದರ ಕರುವನ್ನು ಕಾಡಿನ ಮಧ್ಯದಲ್ಲಿ ಬಿಸಾಕಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಹಳೆ ಕಡಬಗೆರೆ ರವೀಂದ್ರ ಎಂಬುವವರಿಗೆ ಸೇರಿದ ಗಬ್ಬದ ಹಸುವನ್ನು(ಗರ್ಭ ಧರಿಸಿದ್ದ) ಗೋ ಕಳ್ಳರು ಮಾಂಸಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡಿ ಎಲೇಕಲ್ ಬಳಿ ತಂದು ಹಸುವಿನ ತಲೆ ಕಡಿದು, ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಬೇರೆಡೆಗೆ ಎಸೆದು ಮಾಂಸವನ್ನು ಸಾಗಾಟ ಮಾಡಿದ್ದಾರೆ.


ಗೋವು ಕಾಣದೇ ಇರುವುದನ್ನು ಕಂಡ ಹಸುವಿನ ಮಾಲೀಕರಾದ ರವೀಂದ್ರ ಅವರು ಹಸುವನ್ನು ಹುಡುಕಿಕೊಂಡು ಹೋದಾಗ ಅವರಿಗೆ ಹಸುವಿನ ತಲೆಯ ಭಾಗ ಕಂಡಿದೆ. ತಾವು ಸಾಕಿದ್ದ ಹಸುವು ಇಂತಹ ದಾರುಣ ಸ್ಥಿತಿಯಲ್ಲಿರುವುದನ್ನು ಕಂಡ ರವೀಂದ್ರ ಅತೀವವಾದ ಬೇಸರವ್ಯಕ್ತಪಡಿಸಿದರು.

ಈ ಕೃತ್ಯವನ್ನು ಯಾರೇ ಎಸಗಿದ್ದರೂ ಕೂಡ ಅವರನ್ನು ಬಿಡದೇ ಆರೋಪಿಗಳನ್ನು ಪತ್ತೆ ಮಾಡಿ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕೆಂದು ರವೀಂದ್ರ ಅವರು ಹಾಗೂ ಸ್ಥಳೀಯರು ಅಧಿಕಾರಿಗಳನ್ನು ಕೋರಿದ್ದಾರೆ. 

ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಠಾಣೆಯ ಪೊಲೀಸರು ಹಾಗೂ ಪಶು ಇಲಾಖೆಯ ವೈದ್ಯರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದರು.