ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನ, ಕೊಡಗು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಅನೇಕ ಅವಘಡಗಳು ಸಂಭವಿಸುತ್ತಿದ್ದು ಸಂಪಾಜೆ ಸಮೀಪದ ಕೊಯನಾಡು ರಸ್ತೆಯಲ್ಲಿ ಬಿರುಕು ಕಂಡಿದ್ದು ಲಘು ವಾಹನ ಸಂಚಾರ ಹೊರತುಪಡಿಸಿ ಬೇರೆಲ್ಲಾ ವಾಹನಗಳ ಸಂಚಾರಕ್ಕೆ ಈ ರಸ್ತೆ ಸುರಕ್ಷಿತವಲ್ಲದ ಕಾರಣ ಬೆಂಗಳೂರಿನಿಂದ ಮಂಗಳೂರು ಪ್ರಯಾಣ ನಡೆಸುವ ರಸ್ತೆ ಮಾರ್ಗ ಪ್ರಸ್ತುತ ರದ್ದಾಗಿದ್ದು ಈ ಹಿಂದೆ ಸಕಲೇಶಪುರದ ದೋಣಿಗಲ್ ಸಮೀಪದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿಗಳು ವಿಧಿಸಿದ್ದ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದಾರೆ. 

ರಾತ್ರಿಯ ಅವಧಿಯಲ್ಲಿ ವಿಧಿಸಲಾಗಿದ್ದ ಸಂಚಾರದ ನಿರ್ಬಂಧವನ್ನು ತೆಗೆದು ಬಸ್ಸುಗಳು ರಾತ್ರಿಯ ವೇಳೆಯಲ್ಲೂ ಓಡಾಡಲು ಜಿಲ್ಲಾಧಿಕಾರಿಗಳು ಅನುಮತಿಸಿದ್ದಾರೆ. ಈ ಹಿಂದೆ ಭೂಕುಸಿತ ಸಂಭವಿಸಿದಾಗ ಜುಲೈ 15 ರಿಂದ 21 ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ಜುಲೈ 21 ರ ಬಳಿಕದಲ್ಲಿ ಲಘು ವಾಹನಗಳಿಗೆ ಮಾತ್ರ ಬೆಳಗ್ಗಿನಿಂದ ಸಂಜೆಯವರೆಗೆ ಸಂಚಾರಕ್ಕೆ ಅನುಮತಿಸಿತ್ತು. ಪ್ರಸ್ತುತ ಮಡಿಕೇರಿ ಸಂಪಾಜೆ ಮಾರ್ಗ ಮಧ್ಯದ ಪ್ರದೇಶವಾದ ಕೊಯನಾಡು ಬಳಿ ರಸ್ತೆ ಬಿರುಕು ಕಂಡ ಪರಿಣಾಮ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಲಾಗಿದೆ. 


ಹಾಸನ ಜಿಲ್ಲಾಧಿಕಾರಿಗಳಾದ ಆರ್ ಗಿರೀಶ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವರದಿಯನ್ನು ಆಧರಿಸಿ ಅನುಮತಿಸಿದ್ದು ಅತಿಯಾದ ಮಳೆಯಿರುವ ಸಂದರ್ಭದಲ್ಲಿ ಆರಕ್ಷಕ ವಿಭಾಗದವರು ಪರಿಸ್ಥಿತಿಯನ್ನು ಅವಲೋಕಿಸಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಎಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಸಂಚರಿಸುವ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು, ಐರಾವತ, ರಾಜಹಂಸ, ಅಂಬಾರಿ, ಡ್ರೀಮ್ ಕ್ಲಾಸ್ ಸ್ಲೀಪರ್, ನಾನ್ ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ವೋಲ್ವೋ ಮತ್ತು ಸ್ಕ್ಯಾನಿಯಾ ಗಳು ಸಂಚಾರ ಮಾಡಬಹುದೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಮರ್ಪಕವಾಗಿ ವಾಹನ ಸಂಚಾರ ನಿರ್ವಹಣೆ ಮಾಡಬೇಕೆಂದು ಸೂಚಿಸಿದ್ದಾರೆ.