ಚಿಕ್ಕಮಗಳೂರು :
ಲಾರಿ ಹಾಗೂ ಕಾರ್ ನಡುವೆ ರಸ್ತೆ ಅಪಘಾತ :
ಲಾರಿ ಮತ್ತು ಕಾರ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಈ ಘಟನೆ ನಡೆದಿದ್ದು ಕಾರಿನಲ್ಲಿದ್ದ ಪ್ರವಾಸಿಗರು ಸಣ್ಣ ಪುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ. ಕಾರಿನ ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಾಣೆ ನಡೆಸುತ್ತಿದ್ದ ವಾಹನಕ್ಕೆ ಕಾರ್ ಡಿಕ್ಕಿಯಾಗಿದ್ದು ವಾಹನ ನಜ್ಜುಗುಜ್ಜಾಗಿದೆ.
ಬಣಕಲ್ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸಭೆ :
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಸಮಯದಲ್ಲಿ ನಿಯಮ ಪಾಲನೆ ಅತ್ಯಂತ ಅಗತ್ಯವಾಗಿದೆ ಎಂದು ಬಣಕಲ್ ಪೊಲೀಸ್ ಠಾಣೆ ಪಿ.ಎಸ್.ಐ ಗಾಯತ್ರಿ ಹೇಳಿದರು. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು ಆಯೋಜಕರು ತಾತ್ಕಾಲಿಕವಾಗಿ ಅಗತ್ಯವಿರುವ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿಗಳನ್ನು ಪ್ರತ್ಯೇಕಿಸಿ ಮೂರ್ತಿಗಳನ್ನು ಮಾತ್ರ ನೀರಿನಲ್ಲಿ ವಿಸರ್ಜಿಸಬೇಕು. ಗಣಪತಿ ಪೆಂಡಾಲ್ ಬಳಿ ಮತ್ತು ಮೆರವಣಿಗೆಗೆ ಉಪಯೋಗಿಸುವ ಧ್ವನಿವರ್ದಕವನ್ನು ಪಡೆಯಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದರು. ಮೆರವಣಿಗೆ ಸಂದರ್ಭದಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು , ಸಾರ್ವಜನಿಕ ಶಾಂತಿಗೆ ಭಂಗ ತರುವ ಘೋಷಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.
ಚಿಕ್ಕಮಗಳೂರಿನಲ್ಲಿ ಮಾಂಸ ಮಾರಾಟಕ್ಕೆ ನಿಷೇಧ :
ಗಣೇಶ ಚತುರ್ಥಿಯ ದಿನವಾದ ಆಗಸ್ಟ್ 31 ರಂದು ಮೀನು ಮಾಂಸ ಮಾರಾಟಕ್ಕೆ ನಗರಸಭೆಯು ನಿಷೇಧಹೇರಿದೆ. ನಗರಸಭಾ ವ್ಯಾಪ್ತಿಯಲ್ಲಿರುವ ಕೋಳಿ, ಮೀನು, ಕುರಿ, ಮಾಂಸ ಮಾರಾಟಗಾರರು ಹಾಗೂ ಮಾಂಸಾಹಾರಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಕಡ್ಡಾಯವಾಗಿ ಮಾಂಸ ಮಾರಾಟ ಹಾಗೂ ಪ್ರಾಣಿಗಳ ವಧೆಯನ್ನು ನಿಷೇಧ ಮಾಡಬೇಕೆಂದು ಪ್ರಕಟಣೆ ಹೊರಡಿಸಿದೆ. ಮಾಂಸ ಮಾರಾಟ ನಡೆಸುವ ಅಂಗಡಿಯವರು ಹಾಗೂ ರೆಸ್ಟೋರೆಂಟ್ ಗಳ ಮಾಲೀಕರು ಮಾಂಸಾಹಾರ ಹಾಗೂ ಮಾಂಸದ ಮಾರಾಟಗಳಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸುವುದಾಗಿ ಚಿಕ್ಕಮಗಳೂರು ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ.
ಜೂಜಾಟ ಆಡುತ್ತಿದ್ದ ಐವರು ಸೆರೆ :
ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಮಲ್ಲೇಶ್ವರ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಜೂಜಾಟಕ್ಕೆ ಬಳಸಿದ್ದ ರೂ. 12,700 ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಪೊಲೀಸ್ ಠಾಣೆಯ PSI ಮತ್ತು ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಶಿವಮೊಗ್ಗ :
ಈಶ್ವರಪ್ಪ ಬಾಯಿಂದಾಗಿ ಜಿಲ್ಲೆ ಹಾಳಾಗಿದೆ : ಬೇಳೂರು ಕಿಡಿ
ಈಶ್ವರಪ್ಪ ಅವರ ಹಾಳು ಬಾಯಿಂದ ಜಿಲ್ಲೆ ಹಾಳಾಗಿ ಹೋಗಿದೆ. ಶಿವಮೊಗ್ಗದಲ್ಲಿ ಮತ್ತೆ ಗಲಾಟೆ ಆದರೆ ಈಶ್ವರಪ್ಪ ಕಾರಣ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಗುಡುಗಿದ್ದಾರೆ. ಎರಡು ವರ್ಷಗಳ ನಂತರ ಸಂಭ್ರಮದ ಗಣೇಶೋತ್ಸವ ನಡೆಯುತ್ತಿದೆ.ಯಾವುದೇ ಅಡೆ ತಡೆ ಇಲ್ಲದೇ ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತ, ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಸಿದ್ದರಾಮಯ್ಯ ಕುರಿತು ಈಶ್ವರಪ್ಪ ಅವಹೇಳನ ಮಾಡ್ತಿದ್ದಾರೆ. ಕೊಳಕು ಬಾಯಿಂದ ಇದನ್ನು ಬಿಟ್ಟು ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದ ಗೋಪಾಲಕೃಷ್ಣ ಬೇಳೂರು ರಾಷ್ಟ್ರಧ್ವಜ ಹಾರಿಸದವರು ರಾಷ್ಟ್ರದ್ರೋಹಿ ಎಂದು ಬಿಜೆಪಿ ಮುಖಂಡರು ಅರ್ಚಾಡುತ್ತಾರೆ. ಹಾಗಾದರೆ, ಇಷ್ಟು ವರ್ಷ ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದ ಆರ್ ಎಸ್‌ಎಸ್ ಯಾವ ದ್ರೋಹಿ ಎಂದು ಪ್ರಶ್ನಿಸಿದರು. ಗೋಡ್ಸೆ ಫೋಟೊ ಮೆರವಣಿಗೆ ಮಾಡಿ ದೇಗುಲ ಕಟ್ತಾರೆ. ಆದ್ರೆ ಇವರು ಟಿಪ್ಪು ಬೇಡ, ಅವರಿವರು ಬೇಡ ಅಂತಾರೆ. ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಸಂಪೂರ್ಣ ವಿಫಲತೆ ಹೊಂದಿದೆ ಎಂದು ಸ್ವತಃ ಸಚಿವ ಮಾದುಸ್ವಾಮಿ ಹೇಳಿದ್ದಾರೆ. ಇನ್ನೊಬ್ಬ ಸಚಿವ ಶ್ರೀರಾಮುಲು ಕಾಂಗ್ರೆಸ್ ಪಕ್ಷದವರು ಸಿಎಂ ಆಗಲಿ ಅನ್ತಾರೆ. ಅವರ ಸಚಿವ ಸಂಪುಟದ ಸಚಿವರೇ ಹೀಗೆ ಹೇಳಿರುವಾಗ ಇದು ರಾಜ್ಯ ಸರ್ಕಾರದ ವೈಫಲ್ಯ ಒಪ್ಪಿಕೊಂಡಂತೆ ಎಂದು ವಿವರಿಸಿದರು.
ಐದು ರಾಜ್ಯಗಳಲ್ಲಿ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳ ಪೊಲೀಸರ ಬಲೆಗೆ :
ಐದು ರಾಜ್ಯಗಳಲ್ಲಿ 164 ದರೋಡೆಗಳನ್ನು ಮಾಡಿರುವ 54 ವರ್ಷದ ವ್ಯಕ್ತಿ ಮತ್ತು ಆತನಿಗೆ ಸಹಕಾರ ನೀಡಿದ ಆತನ ಕುಟುಂಬದವರನ್ನು ಬೆಂಗಳೂರಿನ ರಾಜಾಜಿನಗರದ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಶಿವಮೊಗ್ಗ ಮತ್ತು ಕೋಲಾರ ಜಿಲ್ಲೆ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅಪರಾಧ ಚಟುವಟಿಕೆ ನಡೆಸಿದ್ದು, 40 ವರ್ಷಗಳ ಅಪರಾಧದ ಇತಿಹಾಸ ಹೊಂದಿರುವ ಆರೋಪಿ ಪ್ರಕಾಶ್ ಎಂಬುವವನನ್ನು ಬಂಧಿಸಿದ್ದಾರೆ.ಆರೋಪಿ ಪ್ರಕಾಶ್ ಜೊತೆಗೆ ಅವರ ಪುತ್ರರು, ಅಳಿಯ ಮತ್ತು ಸಹೋದರನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. 10ನೇ ವಯಸ್ಸಿನಿಂದಲೂ ಕಳ್ಳನಾಗಿದ್ದ ಪ್ರಕಾಶ್‌ಗೆ 20ಕ್ಕೂ ಹೆಚ್ಚು ಬಾರಿ ಜೈಲು ಶಿಕ್ಷೆಯಾಗಿದೆ. ವರದಿಯ ಪ್ರಕಾರ ಆರೋಪಿ ಪ್ರಕಾಶ್ ತನ್ನ 10 ನೇ ವಯಸ್ಸಿನಿಂದಲೂ ಕ್ರಿಮಿನಲ್ ಚಟುವಟಿಕೆ ಪ್ರಾರಂಭಿಸಿದ್ದಾರೆ. ಕಳೆದ 40 ವರ್ಷಗಳಲ್ಲಿ 20 ಕ್ಕೂ ಹೆಚ್ಚು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಆತನ ಕುಟುಂಬದ ಸದಸ್ಯರ ವಿರುದ್ಧವೂ ಅನೇಕ ಪ್ರಕರಣಗಳಿವೆ. ಪ್ರಕಾಶ್ ಅವರಿಗೆ ಮೂರು ಬೇರೆ ಬೇರೆ ಊರುಗಳಲ್ಲಿ ಮೂವರು ಪತ್ನಿಯರಿದ್ದು, ಏಳು ಮಂದಿ ಪುತ್ರರು ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಮಿಸ್ ಫೈರ್ ನಿಂದ ವ್ಯಕ್ತಿ ಸಾವು :
ಮಿಸ್ ಫೈರಿಂಗ್ನಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ನಗರ ಸಮೀಪದ ರಾವೆ ಬಳಿ ನಡೆದಿದೆ. ರಾವೆ ಸಮೀಪದ ನೇಗಿಲೋಣಿ ಗ್ರಾಮದ ನಿವಾಸಿ ಅಂಬರೀಶ್ (30) ಮೃತ ದುರ್ದೈವಿ. ಪರವಾನಿಗೆ ಇಲ್ಲದ ನಾಡ ಬಂದೂಕನ್ನು ಹೊಂದಿದ್ದ ಅಂಬರೀಶ್, ನಿನ್ನೆ ರಾತ್ರಿ ತೋಟದಲ್ಲಿ ಬರುತ್ತಿದ್ದ ಕಾಡು ಪ್ರಾಣಿಗಳನ್ನು ಓಡಿಸಲು ತೆರಳಿದ್ದರು.ಬಂಡೆಯ ಕೆಳಗೆ ಇಳಿಯುವಾಗ ಕಾಲು ಜಾರಿ ಕೈಯಲ್ಲಿದ್ದ ಬಂದೂಕಿನ ಟ್ರಿಗರ್ ಪ್ರೆಸ್ ಆಗಿದ್ದು, ನಾಡ ಬಂದೂಕಿನ ಗುಂಡು ಅಂಬರೀಶ್ ಅವರ ಎದೆ ಸೀಳಿದೆ. ಅಧಿಕ ರಕ್ತಸ್ರಾವದಿಂದ ಅಂಬರೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ :
ರೈತರು ವಿಷ ಕುಡಿಯಬೇಕಾದ ಸ್ಥಿತಿ ಎದುರಾಗಿದೆ : ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲೆಯೊಳಗೆ ಕಳೆದ ಮೂರು ತಿಂಗಳಿನಿಂದ ಮಳೆ ಸುರಿಯುತ್ತದೆ. ಮಳೆಗೆ ರಸ್ತೆ ಸಂಪೂರ್ಣ ಉಳಿದಿಲ್ಲ, ಎಲ್ಲಾ ಹಾಳಾಗಿಹೋಗಿದೆ. ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ಹೊಗೋ ರಸ್ತೆಯಲ್ಲಿ ಏನೂ ಉಳಿದಿಲ್ಲ. ಬರೀ ನನ್ನ ವಿಧಾನಸಭಾ ಕ್ಷೇತ್ರವಲ್ಲ, ಎಲ್ಲಾ ಕ್ಷೇತ್ರದಲ್ಲಿಯೂ ಹೀಗೆ ಆಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಕೊಡುಗು ಹಾಗೂ ನಮಗೆ ಸೇರಿ ಬರೀ 25 ಕೋಟಿ ರೂ ರಾಜ್ಯ ಸರ್ಕಾರ ಕೊಟ್ಟಿದೆ. 25 ಕೋಟಿ ಕೊಟ್ಟರೆ ಅದು ಎಲ್ಲಿಗೆ ಸಾಲುತ್ತದೆ. ಕೊಡಗಿಗೆ 10 ಕೋಟಿ ಹೋದರೆ, ನಮಗೆ 15 ಕೋಟಿ ಏನಕ್ಕೆ ಸಾಲುತ್ತದೆ. ನಮಗೆ ಕಡ್ಲೆ ಪುರಿ ಎರಿಚಿದಂಗೆ ಎರಚುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ 200 ಕೋಟಿ ಮೇಲೆ ಕೊಟ್ಟಿದ್ದಾರೆ ಎಂದು ಸಿಎಂ ವಿರುದ್ಧ ಹರಿಹಾಯ್ದರು. ಉ.ಕ ಕೊಡಲಿ, ನಮಗೆ ಅದಕ್ಕೆ ಆಕ್ಷೇಪ ಇಲ್ಲ. ನಮ್ಮ ಜಿಲ್ಲೆಯಲ್ಲಿ ಆಲೂಗಡ್ಡೆ ಸಂಪೂರ್ಣ ಹಾಳಾಗಿದೆ. ಹಾಸನ ತಾಲೂಕಿನಲ್ಲಿ ಒಂದು ಆಲೂಗಡ್ಡೆಯೂ ಉಳಿದಿಲ್ಲ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಪಾಟ್ ಗೆ ಹೋಗ್ತಿಲ್ಲ. ಕೃಷಿ ಹಾಗೂ ಕಂದಾಯ ಇಲಾಖೆಗಳು ಯುದ್ದದ ಮಾದರಿಯಲ್ಲಿ ಕೆಲಸ ಮಾಡಬೇಕಿದೆ.
ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ :
ಚನ್ನರಾಯಪಟ್ಟಣದಲ್ಲಿ ಭಾರೀ ಮಳೆ ಹಿನ್ನೆಲೆ ಪಾತಪ್ಪನ ದೇವಾಲಯ ಹಾಗೂ ಚಿಕ್ಕಮ್ಮ ದೇವಾಲಯಕ್ಕೆ ಮಳೆ ನೀರು ನುಗ್ಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ದೇವಾಲಯಗಳಿಗೆ ಜಲದಿಗ್ಭಂಧನವಾಗಿದ್ದು. ಕಳೆದ ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಗ್ರಾಮದ ನೂರಾರು ಎಕರೆ ಜಮೀನುಗಳು ಜಲಾವೃತವಾಗಿದೆ. ಗ್ರಾಮದ ಕೆರೆಕಟ್ಟೆಗಳೆಲ್ಲ ತುಂಬಿದ್ದು ಜಮೀನು ಹಾಗೂ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಮಳೆಯಿಂದ ಭಾರಿ ಅನಾಹುತಗಳಾಗುತ್ತಿದ್ದು, ಸೂಕ್ತ ಪರಿಹಾರ ನೀಡುವಂತೆ ಗ್ರಾಮದ ಜನರು ಒತ್ತಾಯಿಸಿದ್ದಾರೆ.
ಕೊಡಗು :
ಬೇಟೆಗೆ ತೆರಳಿದ್ದ ವ್ಯಕ್ತಿಗೆ ಗುಂಡೇಟು :
ಬೇಟೆಗೆ ತೆರಳಿದ್ದ ಸಂದರ್ಭ ಗುಂಡೇಟು ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಯಡವಾರೆ ಗ್ರಾಮದಲ್ಲಿ ನಡೆದಿದೆ. ಯಡವಾರೆ ಗ್ರಾಮದ ಶಿವಕುಮಾರ್ (58) ಮೃತ ದುರ್ಧೈವಿ. ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ಬೇಟೆಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ 6 ಮಂದಿಯ ತಂಡ ಕಾಡು ಪ್ರಾಣಿಗಳ ಬೇಟೆಗೆ ತೆರಳಿತ್ತು. ಈ ವೇಳೆ ಶಿವಕುಮಾರ್ ಎಂಬಾತನ ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇವರ ಜತೆ ಬೇಟೆಗೆ ತೆರಳಿದ್ದ ಚನ್ನಕೇಶವ, ಚೇತನ್, ನಂದೀಶ್, ಮಂಜುನಾಥ್ ರನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.


0 Comments